ಸಾರಾಂಶ
ಕನ್ನಡಪ್ರಭ ವಾರ್ತೆ ಭಾಲ್ಕಿ
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಜೂ.16ರಂದು ಸೂರ್ಯ ಫೌಂಡೇಶನ್, ಇಂಟರ್ ನ್ಯಾಷನಲ್ ನ್ಯಾಚರೋಪಥಿ ಆರ್ಗನೈಸೇಶನ್, ಭಾರತ ಸರ್ಕಾರದ ಆಯುಷ್ ಇಲಾಖೆ (ಐಎನ್‌ಒ) ಮತ್ತು ಹಿರೇಮಠ ಸಂಸ್ಥಾನ ಭಾಲ್ಕಿ ಸಹಯೋಗದಲ್ಲಿ ಯೋಗ ಮಹೋತ್ಸವ ಆಯೋಜಿಸಲಾಗಿದೆ ಎಂದು ನವದೆಹಲಿ ಸೂರ್ಯ ಫೌಂಡೇಶನ್‌ನ ರಾಷ್ಟ್ರೀಯ ಉಪಾಧ್ಯಕ್ಷ ಅನಂತ ಬಿರಾದಾರ್ ತಿಳಿಸಿದರು.ಪಟ್ಟಣದ ಚನ್ನಬಸವಾಶ್ರಮ ಪರಿಸರದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಟರ್ ನ್ಯಾಷನಲ್ ಡೇ ಆಫ್ ಯೋಗ (ಐಡಿವೈ) 100 ದಿನಗಳ ಕ್ಷಣಗಣನೆಗಾಗಿ ಭಾರತ ಸರ್ಕಾರವು ಈ ಸಲ ಮಹಿಳಾ ಸಬಲೀಕರಣದ ಉದ್ದೇಶದೊಂದಿಗೆ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಹೊರಟಿದೆ. ಈ ಪ್ರಯುಕ್ತ ಸೂರ್ಯ ಫೌಂಡೇಶನ್, ಐಎನ್‌ಓ ಭಾರತ ಸರ್ಕಾರದ ಆಯುಶ್ ಇಲಾಖೆಯ ಸಹಕಾರದೊಂದಿಗೆ ದೇಶಾದ್ಯಂತ ನೂರು ಕಡೆ ಯೋಗ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿವೆ ಎಂದರು.
ವಿವಿಧ ಪೂಜ್ಯರು, ಗಣ್ಯರು ಭಾಗಿ:ಅಂದು ಬೆಳಗ್ಗೆ 6 ರಿಂದ 8 ಗಂಟೆ ವರೆಗೆ ಚನ್ನಬಸವಾಶ್ರಮ ಪರಿಸರದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಯೋಗ ಮಹೋತ್ಸವ ನಡೆಯಲಿದೆ. ಶ್ವಾಸಗುರು ವಚನಾನಂದ ಸ್ವಾಮೀಜಿ ಮತ್ತು ಪತಂಜಲಿ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಯೋಗಾಭ್ಯಾಸ ನಡೆಸಿ ಕೊಡಲಿದ್ದಾರೆ. ಯೋಗ ಮಹೋತ್ಸವ ಯಶಸ್ವಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿವೆ. ಯೋಗಭ್ಯಾಸದಲ್ಲಿ ಸುಮಾರು 3 ಸಾವಿರ ಜನರು ಭಾಗಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಸ್ವಸ್ಥ ಜೀವನ, ಉತ್ತಮ ಆರೋಗ್ಯಕ್ಕೆ ಯೋಗಭ್ಯಾಸ ಇಂದಿನ ಅಗತ್ಯವಾಗಿದೆ. ಸೂರ್ಯ ಫೌಂಡಶೇನ್ ಯೋಗ ಮಹೋತ್ಸವಕ್ಕೆ ಮುಂದಾಗಿರುವುದು ಅತ್ಯಂತ ಖುಷಿ ತಂದು ಕೊಟ್ಟಿದೆ. ಯೋಗ ಮಹೋತ್ಸವ ಯಶಸ್ವಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಗ್ರಾಮೀಣ ಭಾಗದಲ್ಲಿ ಜನಿಸಿದ ಅನಂತ ಬಿರಾದಾರ್ ಅವರು ರಾಷ್ಟ್ರಮಟ್ಟದಲ್ಲಿ ಸೂರ್ಯ ಫೌಂಡೇಶನ್ ಮೂಲಕ ಉತ್ತಮ ಹೆಸರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಕಾರ್ಯ ಮಾಡಲಿ ಎಂದು ಹಾರೈಸಿದರು.ಸುದ್ದಿಗೋಷ್ಠಿಯಲ್ಲಿ ಸೂರ್ಯ ಫೌಂಡೇಶನ್ ಸಂಯೋಜಕ ಗುರುನಾಥ ರಾಜಗೀರಾ ಯೋಗ ಮಹೋತ್ಸವ ಕಾರ್ಯಕ್ರಮದ ಸಂಯೋಜಕ ಈಶ್ವರ ರುಮ್ಮಾ, ಪ್ರಮುಖರಾದ ಸೂರಜಸಿಂಗ ರಾಜಪೂತ್, ಸುರೇಶ ಬಿರಾದಾರ, ಗೋವಿಂದರಾವ ಬಿರಾದಾರ ಇದ್ದರು.