ಮೂಡುಬಿದಿರೆ: ಇಲ್ಲಿನ ಅರಣ್ಯ ಇಲಾಖೆ, ಉಪವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ, ಪದೋನ್ನತಿ ಪಡೆದ, ವರ್ಗಾವಣೆಗೊಂಡ ಅಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭ ಪ್ರಕೃತಿ ಶಿಕ್ಷಣ ತರಬೇತಿ ಕೇಂದ್ರದಲ್ಲಿ ನಡೆಯಿತು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ವಯೋನಿವೃತ್ತಿ ಹೊಂದಿದ ಗಸ್ತು ಅರಣ್ಯಪಾಲಕ ಶಂಕರ ಗೌಡ, ಕಂಪ್ಯೂಟರ್ ನಿರ್ವಾಹಕಿ ಉಷಾ ಶೆಟ್ಟಿ, ಚಂದ್ರಯ್ಯ ಆಚಾರಿ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ವಲಯ ಅರಣ್ಯಾಧಿಕಾರಿಯಾಗಿ ಪದೋನ್ನತಿ ಪಡೆದ ಮಂಜುನಾಥ ಗಾಣಿಗ, ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ವರ್ಗಾವಣೆಗೊಂಡ ಪ್ರಭಾಕರ ಕುಲಾಲ್, ಪ್ರಥಮ ದರ್ಜೆ ಸಹಾಯಕ ಜಯರಾಮ್ ಪಿ.ಎನ್. ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ, ಕಾರ್ಕಳ ವನ್ಯಜೀವಿ ವಲಯದ ಗಸ್ತು ಅರಣ್ಯಪಾಲಕಿ ಸ್ವರ್ಣ ನಾಯಕ್ ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಆಚಾರಿ, ಕಾರ್ಕಳ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಡಿ. ದಿನೇಶ್ ಶುಭ ಹಾರೈಸಿದರು.

ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಸ್ವಾಗತಿಸಿದರು. ರಾಘವೇಂದ್ರ ಶೆಟ್ಟಿ ನಿರೂಪಿಸಿ ವಂದಿಸಿದರು.