ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣ ತಾಲೂಕಿನಲ್ಲಿ ಗೋಮಾಳ ಮತ್ತು ಅರಣ್ಯ ಇಲಾಖೆಗೆ ಸೇರಿರುವ ೧೮೦೦ ಎಕರೆಗಿಂತ ಹೆಚ್ಚಿನ ಜಮೀನು ಕೈಗಾರಿಕೆ ಸ್ಥಾಪನೆಗೆ ಲಭ್ಯವಿರುವುದಾಗಿ ತಹಸೀಲ್ದಾರ್ ಅವರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

ತಾಲೂಕಿನಲ್ಲಿ ೮೨೭೯.೧೮ ಎಕರೆ ಅರಣ್ಯ ಇಲಾಖೆಗೆ ಸೇರಿರುವ ಜಮೀನು ಇದೆ. ಈ ಪೈಕಿ ಡೀಮ್ಡ್ ಫಾರೆಸ್ಟ್ ಸಮಿತಿಯಲ್ಲಿ ೨೦೬೯.೩೮ ಎಕರೆ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿಕೊಂಡಿದೆ. ಅದರಂತೆ ಅರಕೆರೆ ಹೋಬಳಿ ವ್ಯಾಪ್ತಿಯ ಜಕ್ಕನಹಳ್ಳಿ ಸರ್ವೇ ನಂ.೮೩ರಲ್ಲಿ ೧೦೨.೨೦ ಎಕರೆ, ಆಲಗೋಡು ಸರ್ವೇ ನಂ. ೫೬ರಲ್ಲಿ ೯.೦೧ ಎಕರೆ, ಅರಕೆರೆ ಗ್ರಾಮದ ಸರ್ವೇ ನಂ. ೩೬, ೩೭, ೩೮ರಲ್ಲಿ ೧೨.೩೨ ಎಕರೆ, ಚನ್ನನಕೆರೆಯ ಸರ್ವೇ ನಂ.೭೮ರಲ್ಲಿ ೧೦೨.೩೩ ಎಕರೆ, ದಮ್ಮನಹಳ್ಳಿ ಸರ್ವೇ ನಂ.೧೯ರಲ್ಲಿ ೪೯.೧೮ ಎಕರೆ, ಗೊಬ್ಬರಗಾಲ ಗ್ರಾಮದ ಸರ್ವೇ ನಂ. ೩೩, ೩೪, ೩೫, ೩೬ ರಲ್ಲಿ ೧೦೩.೨೧ ಎಕರೆ, ಹಂಗರಹಳ್ಳಿ ಗ್ರಾಮದ ೫೭, ೫೮, ೧೮೫ನೇ ಸರ್ವೇ ನಂ.ನಲ್ಲಿ ೨೫೩ ಎಕರೆ, ಹುಂಜನಕೆರೆ ಗ್ರಾಮದ ಸರ್ವೇ ನಂ.೫೭, ೫೮ರಲ್ಲಿ ೬೦೪ ಎಕರೆ, ಕಾಳೇನಹಳ್ಳಿ ಗ್ರಾಮದ ಸರ್ವೇ ನಂ. ೨೧ ಮತ್ತು ೪ರಲ್ಲಿ ೨೯೯.೧೦ ಎಕರೆ, ಪರಮಾಂಡಹಳ್ಳಿ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ೧೧೩.೯೧ ಎಕರೆ, ವಡಿಯಾಂಡಹಳ್ಳಿ ಗ್ರಾಮದ ಸರ್ವೇ ನಂ.೨೦ರಲ್ಲಿ ೨೪೪ ಎಕರೆ ಜಮೀನು ಲಭ್ಯವಿದೆ.

ಈ ಭೂಮಿಯನ್ನು ಅಮೆರಿಕ ಮೂಲದ ಸ್ಯಾನ್ಸನ್ ಗ್ರೂಪ್‌ನಿಂದ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಘಟಕ ಸ್ಥಾಪನೆಗೆ ಮತ್ತು ಆಟೋಮೋಟೀವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್‌ಎಐ) ಪರೀಕ್ಷಾ ಕೇಂದ್ರ ಸ್ಥಾಪನೆಗೆ ಹಾಗೂ ಇತರೆ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.