ಸಾರಾಂಶ
- 3 ಲಕ್ಷಕ್ಕೂ ಅಧಿಕ ಮಂದಿ ಉತ್ಸವದ ಸಂಭ್ರಮದಲ್ಲಿ ಭಾಗಿ । ಹಲವು ಕಲಾವಿದರಿಂದ ಪ್ರದರ್ಶನ
ಕನ್ನಡಪ್ರಭ ವಾರ್ತೆ ಹಂಪಿ (ಗಾಯತ್ರಿ ಪೀಠ ವೇದಿಕೆ)ವಿಜಯನಗರ ಅರಸರ ನಾಡಿನಲ್ಲಿ ಶುಕ್ರವಾರವಷ್ಟೇ ಅದ್ಧೂರಿ ಚಾಲನೆ ಕಂಡಿದ್ದ ಹಂಪಿ ಉತ್ಸವದ ಎರಡನೇ ದಿನದ ಮನೋರಂಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನಾಕರ್ಷಣೆಗೆ ಕಾರಣವಾಯಿತು. ನಟ ದರ್ಶನ್ ಮತ್ತಿತರ ನಟರ ಉಪಸ್ಥಿತಿ, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಗಾನಸುಧೆ ಹರ್ಷದ ಹೊನಲು ಹರಿಸಿತು.
ಉತ್ಸವದ ವೀಕ್ಷಣೆಗೆ ಎರಡನೇ ದಿನದ ಉತ್ಸವದಲ್ಲಿ ಅಂದಾಜು 3 ಲಕ್ಷಕ್ಕೂ ಅಧಿಕ ಜನರು ಆಗಮಿಸಿ ಸಂಭ್ರಮವನ್ನು ಕಣ್ತುಂಬಿಕೊಂಡಿದ್ದು ವಿಶೇಷವಾಗಿತ್ತು. ಹಂಪಿಯ ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ ಸೇರಿದಂತೆ ಎಲ್ಲೆಡೆ ಜನರು ಸೇರಿದ್ದರು. ಹಂಪಿಯಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಇಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ, ರಸಮಂಜರಿ ಕಾರ್ಯಕ್ರಮವನ್ನು ವೀಕ್ಷಿಸಿದ ಜನರು ಹುಚ್ಚೆದ್ದು ಕುಣಿದರು. ಒಂದೆಡೆ ಗಾಯಕರು ಗಾನ ಸುಧೆ ಸುರಿಸಿದರೆ, ಜನರು ಕುಣಿದು ಕುಪ್ಪಳಿಸಿ ಏಂಜಾಯ್ ಮಾಡಿದರು.ಉತ್ಸವದ ಎರಡನೇ ದಿನ ಕುಸ್ತಿ ಪಂದ್ಯಾವಳಿ, ಗುಂಡು ಎತ್ತುವ ಸ್ಪರ್ಧೆ, ಬಂಡಿ ಗಾಲಿ ಜೋಡಿಸುವ ಸ್ಪರ್ಧೆಗಳು ನಡೆದವು. ಸಿರಿಧಾನ್ಯ ಪಾಕ ಸ್ಪರ್ಧೆ ನಡೆದಿದ್ದು, ನವಣಿ, ರಾಗಿ, ಸಾಮೆ, ಅರ್ಕ, ಉದುಲು, ಬರಗು ಸೇರಿದಂತೆ ವಿವಿಧ ಸಿರಿಧಾನ್ಯಗಳ ಪಾಕವನ್ನು ಮಾಡಿ ಸ್ಪರ್ಧಾಳುಗಳು ಸೈ ಎನಿಸಿಕೊಂಡರು. ಉತ್ಸವದಲ್ಲಿ ಮಹಿಳಾ ವಿಚಾರ ಗೋಷ್ಠಿ, ಪುರಾತತ್ವ ವಿಚಾರ ಸಂಕಿರಣದಲ್ಲಿ ಪರಿಣತರು ವಿಷಯಗಳನ್ನು ಮಂಡಿಸಿದರು.ಉತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸಿದ್ದರು. ಅದರಲ್ಲೂ ವಿದೇಶಿ ಪ್ರವಾಸಿಗರು ಕೂಡ ಆಸಕ್ತಿಯಿಂದ ಉತ್ಸವವನ್ನು ಏಂಜಾಯ್ ಮಾಡಿದರು.ಹಂಪಿಯಲ್ಲಿ ರಾತ್ರಿ 2.30ರ ವರೆಗೆ ನಡೆದ ಸಾಂಸ್ಕೃತಿಕ ಹಾಗೂ ರಸಮಂಜರಿ ಕಾರ್ಯಕ್ರಮಗಳನ್ನು ಜನ ವೀಕ್ಷಿಸಿದರು. ಹಂಪಿ ಉತ್ಸವದಲ್ಲಿ 10 ಲಕ್ಷ ಜನರು ಸೇರುವ ನಿರೀಕ್ಷೆ ಹೊಂದಿದ್ದ ಜಿಲ್ಲಾಡಳಿತಕ್ಕೆ ಎರಡು ದಿನಗಳಲ್ಲೇ ಉತ್ತಮ ಸ್ಪಂದನೆ ದೊರೆತಿದೆ. ವಿಜಯನಗರ ಗತಕಾಲದ ವೈಭವವನ್ನು ಮುಂದಿನ ಪೀಳಿಗೆಗೆ ದಾಟಿಸಲು ವಿಜಯನಗರ ಜಿಲ್ಲಾಡಳಿತ ಕೂಡ ಶಾಲೆಗಳಿಗೂ ರಜೆ ನೀಡಿದ ಹಿನ್ನೆಲೆ ಶಾಲಾ ಮಕ್ಕಳೂ ಹಂಪಿಗೆ ಆಗಮಿಸಿ ಉತ್ಸವಕ್ಕೆ ಉತ್ಸಾಹ ತುಂಬಿದರು.