ಲೋಕಸಭಾ ಚುನಾವಣೆ: ಅನಂತ್‌ ಹೆಗಡೆಗೆ ಟಿಕೆಟ್‌ ಮಿಸ್‌

| Published : Mar 25 2024, 12:45 AM IST / Updated: Mar 25 2024, 09:10 AM IST

Ananthkumar Hegde

ಸಾರಾಂಶ

ಕೊನೆಗೂ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಚುನಾವಣಾ ರಾಜಕೀಯದಿಂದ ವಿಮುಖರಾಗಿರುವುದಾಗಿ ಹೇಳಿದ್ದ ಅನಂತಕುಮಾರ ಹೆಗಡೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಕ್ರಿಯರಾದರೂ ಟಿಕೆಟ್ ಪಡೆಯುವಲ್ಲಿ ಸಫಲರಾಗಲಿಲ್ಲ.

ವಸಂತ್‌ ಕುಮಾರ್‌ ಕತಗಾಲ

ಕನ್ನಡಪ್ರಭ ವಾರ್ತೆ ಕಾರವಾರ

ಕೊನೆಗೂ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಚುನಾವಣಾ ರಾಜಕೀಯದಿಂದ ವಿಮುಖರಾಗಿರುವುದಾಗಿ ಹೇಳಿದ್ದ ಅನಂತಕುಮಾರ ಹೆಗಡೆ ಚುನಾವಣೆ ಸಮೀಪಿಸುತ್ತಿದ್ದಂತೆ ಸಕ್ರಿಯರಾದರೂ ಟಿಕೆಟ್ ಪಡೆಯುವಲ್ಲಿ ಸಫಲರಾಗಲಿಲ್ಲ.

ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಲು ಹಲವು ಕಾರಣಗಳಿವೆ. ಅವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಕಾರಣಕ್ಕಾಗಿಯೇ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹತ್ತಕ್ಕೂ ಮೀರಿತ್ತು.

ವಿಧಾನಸಭೆ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬರಲಿಲ್ಲ. ಅಷ್ಟೇ ಅಲ್ಲ, ಹೆಗಡೆ ಬೆಂಬಲಿಗರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆಪಾದನೆಯೂ ಕೇಳಿ ಬಂದಿತ್ತು. 

ಇದು ಕಾರವಾರ, ಶಿರಸಿ ಹಾಗೂ ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು ಎಂಬ ಅಭಿಪ್ರಾಯ ವ್ಯಾಪಕವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅಂಕೋಲಾಕ್ಕೆ ಪ್ರಚಾರಕ್ಕೆ ಬಂದಾಗಲೂ ಅನಂತಕುಮಾರ ಹೆಗಡೆ ಅತ್ತ ಸುಳಿಯಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಿಧಾನಸಭೆ ಚುನಾವಣೆಯಲ್ಲಿ ಹೆಗಡೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸುವುದಕ್ಕಿಂತ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ನಿಂತರು ಎನ್ನುವ ಗಂಭೀರ ಆರೋಪ ಕೇಳಿ ಬಂತು.

ಅನಂತಕುಮಾರ ಹೆಗಡೆ ನಾಲ್ಕೂವರೆ ವರ್ಷಗಳಿಂದ ರಾಜಕೀಯ ಚಟುವಟಿಕೆಯಿಂದ ದೂರವಾಗಿ ಉಳಿದರು. ಹೆಗಡೆ ಅವರ ನಿಷ್ಕ್ರಿಯತೆಯಿಂದಾಗಿಯೇ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಸಕ್ರಿಯರಾದರು. 

ಅದಿಲ್ಲದಿದ್ದರೆ ಪ್ರತಿ ಬಾರಿಯೂ ಬಿಜೆಪಿಯಲ್ಲಿ ಲೋಕಸಭೆ ಕ್ಯಾಂಡಿಡೇಟ್ ಅಂದರೆ ಅದು ಅನಂತ್‌ ಮಾತ್ರ ಎಂಬಂತಾಗಿತ್ತು. ಪ್ರತಿ ಚುನಾವಣೆಯಲ್ಲೂ ಸಲೀಸಾಗಿ ಟಿಕೆಟ್ ಪಡೆಯುತ್ತಿದ್ದ ಅನಂತ್‌ ಈ ಬಾರಿ ತಿಂಗಳ ಕಾಲ ಬೆವರಿಳಿಸಿದರು. 

ಪ್ರತಿ ತಾಲೂಕಿಗೆ ಹೋಗಿ ಕಾರ್ಯಕರ್ತರ ಸಭೆ ನಡೆಸಿದರು. ಕೆಲವು ವಿವಾದಾತ್ಮಕ ಹೇಳಿಕೆಗಳನ್ನೂ ನೀಡಿದರು. ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದರು. ಮೋದಿ ಅವರನ್ನು ಬಾಯ್ತುಂಬ ಹೊಗಳಿದರು. 

ಶತಾಯಗತಾಯ ಹೈಕಮಾಂಡಿನ ಗಮನ ಸೆಳೆದು ಟಿಕೆಟ್ ಪಡೆಯಲು ಹಲವು ಕಸರತ್ತು ನಡೆಸಿದ್ದರು. ಇವರಿಗೆ ಟಿಕೆಟ್‌ ಸಿಗುವುದೋ ಇಲ್ಲವೋ ಎಂಬ ಭಾರಿ ಚರ್ಚೆ ನಡೆದಿತ್ತು. ಅಂತಿಮವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಹೈಕಮಾಂಡ್‌ ಮಣೆ ಹಾಕಿದೆ.

ಈಗ ಕಾಗೇರಿ ಅವರು ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ್‌ ವಿರುದ್ಧ ಸೆಣಸಬೇಕಿದೆ. ಟಿಕೆಟ್‌ ಕೈತಪ್ಪಿದ ಬೆನ್ನಲ್ಲೇ ಅನಂತ್‌ ಹೆಗಡೆ ಅವರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

ಫೇಸ್‌ಬುಕ್‌ನಲ್ಲಿ ಅನಂತ್‌ ಹೆಗಡೆ ವಿದಾಯದ ನುಡಿ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್ ಕೈತಪ್ಪುತ್ತಿದ್ದಂತೆ ಸಂಸದ ಅನಂತಕುಮಾರ ಹೆಗಡೆ ವಿದಾಯದ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ನೀಡಿದ್ದಾರೆ. ಅವರು ಫೇಸಬುಕ್‌ನಲ್ಲಿ ಪೋಸ್ಟ್ ಮಾಡಿದ ಪೂರ್ಣ ವಿವರ ಹೀಗಿದೆ.

ಆತ್ಮೀಯ ಬಂಧುಗಳೇ,

ಈ ಭೂಮಿಯಲ್ಲಿ ನನ್ನ ಲೌಕಿಕ ಬದುಕಿನಿಂದಾಚೆಗೂ ಒಂದು ಭವ್ಯವಾದ ಬದುಕಿದೆ ಎಂದೆನಿಸಿತ್ತು. ಅಂತಹ ಬದುಕನ್ನು ನೋಡುವ ತಹತಹ ಇತ್ತು, ತಳಮಳವೂ ಇತ್ತು. 

ಸೋಲು-ಗೆಲುವಿನ ಆತಂಕದಿಂದಾಚೆ ಜೀವನವನ್ನು ನಿತ್ಯ ಸತ್ಯವಾಗಿಸುವ ಹಾಗೂ ಎಂದೂ ನಿಲ್ಲದ ಪ್ರವಾಹವಾಗಿಸುವ, ಚೈತನ್ಯದ ಪೂಜೆಯನ್ನಾಗಿಸುವ ಹಂಬಲ ಕಾಡುತ್ತಿತ್ತು.

ಆದರೆ, ಆರಂಭ ಎಲ್ಲಿಂದ ತಿಳಿದಿರಲಿಲ್ಲ. ಜ್ಞಾನಿಗಳು, ಹಣವಂತರು, ಅಧಿಕಾರ ಇದ್ದವರು ಅವರದೇ ಆದ ರೀತಿಯಲ್ಲಿ ಪೂಜೆ ಮಾಡುತ್ತಾರೆ. ಆದರೆ, ಅಂತಹ ಯಾವುದೇ ಉಪಾಧಿಗಳಿಲ್ಲದ ನಾನು ಈ ಪೂಜೆಯನ್ನು ಎಲ್ಲಿಂದ, ಹೇಗೆ ಆರಂಭಿಸಲಿ ಎಂದು ಗೊತ್ತಿರಲಿಲ್ಲ.

ಈ ಮಧ್ಯದಲ್ಲಿ ಆರಂಭಗೊಂಡಿದ್ದು ಜನತಾ ಜನಾರ್ದನ ಆರಾಧನೆ. ಸರಿ ಸುಮಾರು ಮೂವತ್ತು ವರ್ಷಗಳ ತಮ್ಮೆಲ್ಲರ ಅಪೂರ್ವ ಒಡನಾಟ, ತಾವು ತೋರಿದ ಸ್ನೇಹ, ಪ್ರೀತಿ, ವಾತ್ಸಲ್ಯ ನಿಜಕ್ಕೂ ಭಾಷೆಗೆ ನಿಲುಕದ್ದು, ಅದು ಅದಮ್ಯ.

ಯಾವುದೇ ಪೂಜೆ ಆರಾಧನೆ, ಅದು ಎಂದಿಗೂ ಮುಗಿಯದ ಅನಂತ ಕಾಯಕ. ಈ ತಾಯ್ನೆಲದ ಪೂಜೆಯಲ್ಲಿ, ಆಕೆಯ ಸೇವೆಯಲ್ಲಿ ನನ್ನನ್ನು ನಾನು ಸಮರ್ಪಿಸಿಕೊಳ್ಳುವ ಸೌಭಾಗ್ಯ ಈ ಜನ್ಮದಲ್ಲಿ ಭಗವಂತ ಕರುಣಿಸಿದಕ್ಕೆ, ಈ ಕಣ್ಣಿಗೆ ಕಾಣದ ಆ ಅಕ್ಷಯ ಪಾದಪದ್ಮಗಳಿಗೆ ನನ್ನ ಅನಂತ ನಮನಗಳನ್ನು ಸಲ್ಲಿಸುತ್ತೇನೆ.

ಕಳೆದ 3 ದಶಕಗಳಿಂದ ಹಿಂದವೀ ಹಿತದಲ್ಲಿ ಸೇವೆ ಸಲ್ಲಿಸುವ ಅಪೂರ್ವ ಸುಯೋಗ ಈ ಬದುಕಿನಲ್ಲಿ ನನಗೊಂದು ಗುರುತು ನೀಡಿದೆ. ನಿಜಕ್ಕೂ ಅಷ್ಟೇ ಸಾಕು!!! ಈ ಸಮಾಜ ದೇವತೆಯ ಪದತಲದಲ್ಲಿ ಹೂವಾಗುವ ಸೌಭಾಗ್ಯ ಅದೆಷ್ಟು ಜನರಿಗೆ ತಾನೇ ಸಿಕ್ಕೀತು?

ಹೆತ್ತ ತಾಯೊಡಲಿಗೆ, ಬದುಕು ಕೊಟ್ಟ ಈ ಮಣ್ಣಿಗೆ ಗುರುತು ಕೊಟ್ಟ ನನ್ನ ಜನಕ್ಕೆ ಸೇವೆಯ ಸೌಭಾಗ್ಯವನ್ನು ಒದಗಿಸಿಕೊಟ್ಟ ಕ್ಷೇತ್ರದ ಜನಮನಕ್ಕೆ ಮತ್ತೊಮ್ಮೆ, ಮತ್ತೊಮ್ಮೆ, ಮತ್ತೊಮ್ಮೆ ಸಾಷ್ಟಾಂಗವೆರಗುತ್ತೇನೆ. ತಮ್ಮೆಲ್ಲರ ನೆನಪಿನಲ್ಲಿ ಹೃದಯದಾಳದ ಕೃತಜ್ಞತೆಯೊಂದಿಗೆ, - ಅನಂತಕುಮಾರ ಹೆಗಡೆ