ಬೆಳೆಹಾನಿ ಸಮೀಕ್ಷೆ ನಡೆಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

| Published : Sep 16 2025, 12:03 AM IST

ಸಾರಾಂಶ

ರಾಜ್ಯದಲ್ಲಿ ಆಡಳಿತ ಅನ್ನುವುದೇ ಇಲ್ಲ. ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ.

ಹಳಿಯಾಳ: ರಾಜ್ಯದಲ್ಲಿ ಆಡಳಿತ ಅನ್ನುವುದೇ ಇಲ್ಲ. ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಸಮೀಕ್ಷೆ ನಡೆಸಲು ರಾಜ್ಯ ಸಕಾರ ಇನ್ನುವರೆಗೂ ಆದೇಶ ಮಾಡಲಿಲ್ಲ. ಸಮೀಕ್ಷೆ ನಡೆಸಿದರೆ ಇನ್ನುವರೆಗೆ ಪರಿಹಾರ ಬರುತ್ತಿತ್ತು. ಆದರೆ ಇವರು ಸಮೀಕ್ಷೆ ಮಾಡುವುದು ಯಾವಾಗ ಪರಿಹಾರ ನೀಡುವುದು ಯಾವಾಗ ಎಂದು ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದ್ದಾರೆ.

ಸೋಮವಾರ ಹಳಿಯಾಳ ತಾಲೂಕಿಗೆ ಪ್ರವಾಸ ಕೈಗೊಂಡ ಅವರು, ಮದನಳ್ಳಿ ಗ್ರಾಮದ ಬಳಿಯ ರಸ್ತೆ ಪಕ್ಷದ ಭತ್ತದ ಗದ್ದೆಗಿಳಿದು ಬೆಳೆಹಾನಿಯ ಪರಿಶೀಲಿಸಿ ರಾಜ್ಯ ಸರ್ಕಾರದ ಜನವಿರೋಧಿ ಆಡಳಿತವನ್ನು ಕಟುವಾಗಿ ಟೀಕಿಸಿದರು. ರಾಜ್ಯ ಸರ್ಕಾರ ತಕ್ಷಣ ಸಂತ್ರಸ್ತ ರೈತರ ನೆರವಿಗೆ ಧಾವಿಸಬೇಕು. ಅವರಿಗಾದ ಬೆಳೆಹಾನಿಯ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಮೇ 15ರಿಂದ ಈವರೆಗೆ ಮಳೆಯಾಗುತ್ತಿದೆ. ಈ ನಿರಂತರ ಮಳೆಯ ಕಾರಣ ನಮ್ಮ ಜಿಲ್ಲೆಯಲ್ಲಿ ಭಾರಿ ಹಾನಿ ಸಂಭವಿಸಿದೆ. ಭತ್ತ, ಕಬ್ಬು, ಮೆಕ್ಕೆಜೋಳ ಹಾಳಾಗಿದೆ. ಅಡಕೆಗೆ, ಶುಂಠಿಗೆ ರೋಗ ಬಂದಿದೆ. ಕಾಳುಮೆಣಸು ಹಾಳಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ತುರ್ತಾಗಿ ಬೆಳೆಹಾನಿಯ ಸಮೀಕ್ಷೆ ಮಾಡಿಸಬೇಕು. ಈ ಮೂಲಕ ನಮ್ಮ ರೈತರಿಗೆ ಬೆಳೆ ವಿಮೆ, ಬೆಳೆಹಾನಿ ಪರಿಹಾರವನ್ನು ನೀಡಲು ಅನುಕೂಲವಾಗುತ್ತದೆ ಎಂದರು.

ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳು ಹಾಳಾಗಿವೆ. ಹಿಂದೆ ಅತಿವೃಷ್ಠಿಯಿಂದಾಗಿ ಹಾನಿ ಸಂಭವಿಸಿದರೆ ರಾಜ್ಯ ಸರ್ಕಾರ ಪರಿಹಾರ ನೀಡುತ್ತಿತ್ತು. ಆದರೆ ಈ ಸರ್ಕಾರದಲ್ಲಿ ಆ ವ್ಯವಸ್ಥೆ ಇಲ್ಲವಾಗಿದೆ. ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್‌ ಅನುದಾನ ಬಿಟ್ಟರೆ ಪರಿಹಾರ ನೀಡಲು ಅಧಿಕಾರಿಗಳ ಬಳಿ ಅನುದಾನವಿಲ್ಲ ಎಂದರು.

ರಾಜ್ಯದ ಹಿರಿಯ ಸಚಿವರೊಬ್ಬರು ಕಾಂಗ್ರೆಸ್ ಆಡಳಿತದ ವ್ಯವಸ್ಥೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಶೇ.63 ಜನರು ಲಂಚ ಕೊಟ್ಟು ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ದುಸ್ಥಿತಿಯಲ್ಲಿ ಆಡಳಿತ ಇದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆರಿಸುವ ಕಾರ್ಯವು ಪ್ರಗತಿಯಲ್ಲಿದೆ ಎಂದು ಭರವಸೆ ನೀಡಿದರು.

ಸಮೀಕ್ಷೆ ನಡೆಸುವಾಗ ಸ್ಥಳದಲ್ಲಿ ಹಾಜರಿದ್ದ ತಹಸೀಲ್ದಾರ ಸೋಮನಕಟ್ಟಿ, ಕೃಷಿ ಸಹಾಯಕ ನಿರ್ದೇಶಕ ಪಿ.ಐ. ಮಾನೆ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಏರಿಯಾಲ ಅವರೊಂದಿಗೆ ತಾಲೂಕಿನಲ್ಲಿ ಆಗಿರುವ ಆದ ಅತಿವೃಷ್ಠಿಯಿಂದಾದ ಬೆಳೆಹಾನಿ ಹಾಗೂ ಸರ್ಕಾರಿ ಕಟ್ಟಡ ಹಾಗೂ ಇತರ ಆಸ್ತಿ ಪಾಸ್ತಿ ಹಾನಿಯ ಮಾಹಿತಿ ಪಡೆದರು.

ಮಾಜಿ ಶಾಸಕ ಸುನೀಲ ಹೆಗಡೆ, ಮಾಜಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ, ಬಿಜೆಪಿ ಘಟಕ ಅಧ್ಯಕ್ಷ ವಿಠ್ಠಲ ಸಿದ್ಧಣ್ಣನವರ, ಪ್ರಮುಖರಾದ ಮಂಗೇಶ ದೇಶಪಾಂಡೆ, ಶಿವಾಜಿ ನರಸಾನಿ, ಸಂತೋಷ ಘಟಕಾಂಬಳೆ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.