ಸಾರಾಂಶ
ಮುಂಡರಗಿ: ನಮ್ಮ ಸ್ವಾತಂತ್ರ್ಯ ನಮ್ಮ ಹಕ್ಕು ಎಂಬುದು ಕೇವಲ ಸರ್ಕಾರ ನಡೆಸುವುದಕ್ಕೆ ಮಾತ್ರ ಸೀಮಿತವಾಗಿರದೆ, ಸರ್ವ ಜನಾಂಗದ ಹಿತ ಕಾಯುವ ಮತ್ತು ಮುಕ್ತತೆ ಒದಗಿಸಿ ಮತದಾನ ಮಾಡುವ ಅವಕಾಶ ನೀಡಲಾಗಿದೆ. ಹೀಗಾಗಿ ಸರ್ಕಾರ ದೇಶಾದ್ಯಂತ ಪ್ರಜಾಪ್ರಭುತ್ವ ದಿನ ಆಚರಿಸುತ್ತಿದೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.
ಪಟ್ಟಣದ ತಾಪಂ ಆವರಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಜಾಥಾಕ್ಕೆ ಸೋಮವಾರ ಚಾಲನೆ ನೀಡಿದ ಆನಂತರ, ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ದೇಶದ ಪ್ರಜಾಪ್ರಭುತ್ವ ಜಗತ್ತಿನಲ್ಲಿಯೇ ಬಹುದೊಡ್ಡದು. ಇದು ಭ್ರಾತೃತ್ವ ಮತ್ತು ಸಮಾನತೆ ಕಲಿಸಿಕೊಡುವ ಮಾದರಿ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ ಎಂದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅರುಣಾ ಸೊರಗಾವಿ ಮಾತನಾಡಿ, ಪ್ರಜಾಪ್ರಭುತ್ವ ಕುರಿತು ಈಗಾಗಲೇ ತಾಲೂಕು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಶಾಲಾ ಕಾಲೇಜು ಹಂತದಲ್ಲಿ ಚಿತ್ರಕಲಾ, ಪ್ರಬಂಧ, ಫೋಟೋಗ್ರಫಿ ಸ್ಪರ್ಧೆ ಏರ್ಪಡಿಸಿದ್ದು, ಅದಕ್ಕೆ ₹15 ಸಾವಿರಗಳಿಂದ ಒಂದು ಲಕ್ಷ ವರೆಗೆ ಬಹುಮಾನ ಇದೆ. ಇದರಲ್ಲಿ ತಾಲೂಕಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದರು.
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಭಾರತದಲ್ಲಿರುವಂತಹ ಮುಕ್ತ ಸ್ವಾತಂತ್ರ್ಯದ ಪ್ರಜಾಪ್ರಭುತ್ವ ಬೇರೆ ಯಾವ ದೇಶದಲ್ಲಿಯೂ ಇಲ್ಲ ಎಂದರು. ಡಿಎಸ್‌ಎಸ್ ಸಂಚಾಲಕ ಸೋಮಣ್ಣ ಹೈತಾಪುರ ಇತರರು ಮಾತನಾಡಿದರು. ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿ ಬೋಧಿಸಿದರು.ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಸಿಪಿಐ ಮಂಜುನಾಥ ಕುಸುಗಲ್, ಗ್ರೇಡ್ 2 ತಹಸೀಲ್ದಾರ್ ಕೆ. ರಾಧಾ, ಉಪತಹಸೀಲ್ದಾರ್ ಸಿ.ಕೆ. ಬಳೂಟಗಿ, ಬಿಇಒ ಜಿ.ಎಸ್. ಅಣ್ಣಿಗೇರಿ, ಶ್ರೀಕಾಂತ ಅರಹುಣಸಿ, ಕೆ.ಆರ್. ಬೆಲ್ಲದ ಕಾಲೇಜಿನ ಹನುಮಂತಪ್ಪ, ಪ್ರಾಚಾರ್ಯ ವಿ.ಎಂ. ಪಾಟೀಲ, ಸಿಡಿಪಿಒ ಮಹಾದೇವಸ್ವಾಮಿ, ಅಬಕಾರಿ ಅಧಿಕಾರಿ ಸುವರ್ಣ ಕೋಟಿ ಪಾಲ್ಗೊಂಡಿದ್ದರು.