ಫೆ. ೩ರಿಂದ ಫೆ. ೧೧ರ ವರೆಗೆ ನಡೆಯಲಿರುವ ನಗರದ ಶ್ರೀ ಗ್ರಾಮದೇವತೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಸಮಯದಲ್ಲಿ ಮತ್ತು ಜಾತ್ರೆಯ ಪೂರ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆಯುವ ವಿಧಿ-ವಿಧಾನಗಳ ಪಟ್ಟಿ ಪ್ರಕಟಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮುಂಡಗೋಡ
ಫೆ. ೩ರಿಂದ ಫೆ. ೧೧ರ ವರೆಗೆ ನಡೆಯಲಿರುವ ನಗರದ ಶ್ರೀ ಗ್ರಾಮದೇವತೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಸಮಯದಲ್ಲಿ ಮತ್ತು ಜಾತ್ರೆಯ ಪೂರ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆಯುವ ವಿಧಿ-ವಿಧಾನಗಳ ಪಟ್ಟಿ ಪ್ರಕಟಿಸಲಾಗಿದೆ.ಜಾತ್ರಾ ಪೂರ್ವದಲ್ಲಿ ವಿಧಿ-ವಿಧಾನದಂತೆ ನಡೆಯುವ ಹೊರ ಬೀಡುಗಳು:
ಜ. ೧೩ರಂದು ೧ನೇ ಹೊರಬೀಡು. ಜ. ೧೬ರಂದು ೨ನೇ ಹೊರಬೀಡು. ೨೦ರಂದು ೩ನೇ ಹೊರಬೀಡು. ೨೩ರಂದು ೪ನೇ ಹೊರಬೀಡು. ೨೭ರಂದು ೫ನೇ ಹೊರಬೀಡು ನಡೆಯಲಿದ್ದು, ಅಂದೇ ಅಂಕಿ ಹಾಕಲಾಗುತ್ತದೆ. ಈ ಐದು ಹೊರಬೀಡಿಗೂ ಸಾರ್ವಜನಿಕರು ತಮ್ಮ ಮನೆಯ ಮುಂದಿನ ಕಸಗೂಡಿಸಿ, ಸಾರಿಸಿ, ರಂಗವಲ್ಲಿ ಹಾಕಿ ಬೆಳಗ್ಗೆ ೧೦ ಗಂಟೆಯೊಳಗಾಗಿ ಅಡುಗೆ ಮಾಡಿಕೊಂಡು ದೇವಿಗೆ ನೈವೇದ್ಯ ತೆಗೆದಿಟ್ಟು ತಮ್ಮ ತಮ್ಮ ಹೊಲಗಳಿಗೊ ಅಥವಾ ಬೇರೆಡೆಗೂ ಅನುಕೂಲವಿದ್ದಲ್ಲಿ ಹೋಗಿ ಊಟ ಮಾಡಿಕೊಂಡು ಸಂಜೆ ೪ ಗಂಟೆಯ ನಂತರ ಮರಳಿ ಬರಬೇಕು. ಅಲ್ಲದೇ ಅಂದು ಯಾರು ಕೂಡ ಕೃಷಿ ಕಾರ್ಯ ಮಾಡುವಂತಿಲ್ಲ. ೨೭ರಂದು ಸಾಯಂಕಾಲ ಅಂಕಿ ಹಾಕಿ ದೇವಿಯನ್ನು ಬಣ್ಣಕ್ಕೆ ಕೊಡಲಾಗುತ್ತದೆ. ಫೆ. ೩ಕ್ಕೆ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಹಾಗೂ ಜಾತ್ರೆಯ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಅಂದು ತವರುಮನೆ, ನ್ಯಾಸರ್ಗಿ ಗ್ರಾಮದ ಹಿರಿಯರಿಂದ ಹಾಗೂ ಬಾಬದಾರರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.ಫೆ. ೪ರಂದು ಬೆಳಗ್ಗೆ ೮ ಗಂಟೆಯಿಂದ ಭವ್ಯ ರಥದಲ್ಲಿ ಶ್ರೀ ಗ್ರಾಮದೇವಿಯ ರಥೋತ್ಸವ ಹಳೂರಿನ ರಥಬೀದಿಯಲ್ಲಿ ನಡೆದು ಜಾತ್ರಾ ಗದ್ದುಗೆಯಲ್ಲಿ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುತ್ತದೆ. ಫೆ. ೫ರ ಬೆಳಗ್ಗೆ 11ರಿಂದ ಮಧ್ಯಾಹ್ನ ೨ ಗಂಟೆವರೆಗೆ ದೇವಿಗೆ ಉಡಿ, ಹಣ್ಣು-ಕಾಯಿ ಸೇವೆ ನಡೆಯುತ್ತವೆ. ಅಂದು ಸಂಜೆ ೪ ಗಂಟೆಯ ಬಳಿಕ ಶ್ರೀ ದೇವಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಮಾ. ೧೯ ಯುಗಾದಿಯ ದಿನ ದೇವಸ್ಥಾನದಲ್ಲಿ ಶ್ರೀ ದೇವಿಯ ಮರು ಪ್ರತಿಷ್ಠಾಪನೆ ನಡೆಯಲಿದೆ. ಜ. ೧೩ರಿಂದ ಮಾ. ೧೮ರ ವರೆಗೆ ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಮದುವೆ, ಮುಂಜಿ ಇತ್ಯಾದಿ ಶುಭ ಕಾರ್ಯ ಮಾಡುವಂತಿಲ್ಲ ಎಂದು ಪ್ರಕಟಣೆ ತಿಳಿಸಿದೆ.