ಗ್ರಾಮದಲ್ಲಿ ನಾಲ್ಕು ಅಂಗಡಿಗಳಲ್ಲಿ ಮದ್ಯ ಅಕ್ರಮವಾಗಿ ಮಾರಾಟ ಮಾಡುತ್ತಿದ್ದು, ಇದರಿಂದ ಬಡ ಕುಟುಂಬಗಳು ಬೀದಿಗೆ ಬೀಳುತ್ತಿವೆ.
ಕೂಡ್ಲಿಗಿ: ತಾಲೂಕಿನ ಗಡಿಗ್ರಾಮ ತಿಮ್ಮನಹಳ್ಳಿಯಲ್ಲಿ ಮದ್ಯ ಅಕ್ರಮ ಮಾರಾಟ ತಡೆಯುವಂತೆ ಮಹಿಳೆಯರು ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ತಹಸೀಲ್ದಾರ್ ವಿ.ಕೆ. ನೇತ್ರಾವತಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ನಾಲ್ಕು ಅಂಗಡಿಗಳಲ್ಲಿ ಮದ್ಯ ಅಕ್ರಮವಾಗಿ ಮಾರಾಟ ಮಾಡುತ್ತಿದ್ದು, ಇದರಿಂದ ಬಡ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಮನೆಯ ಯಜಮಾನರು ದುಡಿದ ಹಣವನ್ನು ಮದ್ಯ ಸೇವನೆಗೆ ಖರ್ಚು ಮಾಡುತ್ತಿದ್ದಾರೆ. ಅತ್ತ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಮದ್ಯ ಸೇವನೆಗೆ ದಾಸರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮದ್ಯ ಅಕ್ರಮ ಮಾರಾಟ ತಡೆ ಕುರಿತು ರಾಮಸಾಗರಹಟ್ಟಿಯಲ್ಲಿ ನಡೆದ ಮನೆ-ಮನೆಗೆ ಶಾಸಕ, ಮನೆ ಬಾಗಿಲಿಗೆ ಸರ್ಕಾರ ಎಂಬ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಯಾವುದೇ ಹೆದರಿಕೆ ಇಲ್ಲದಂತೆ ಈಗಲೂ ಮುಂದುವರಿಸಿದ್ದಾರೆ. ಮದ್ಯ ಅಕ್ರಮವಾಗಿ ಮಾರಾಟ ತಡೆಯುವಂತೆ ಆಗ್ರಹಿಸುವ ಮಹಿಳೆಯರ ಮನೆಯಲ್ಲಿ ಗಂಡ ಕುಡಿದು ಬಂದು ಬಡಿಯುವಂಥ ಪರಿಸ್ಥಿತಿ ಇದೆ. ಈ ಕುರಿತು ಹತ್ತಾರು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಸಂಪೂರ್ಣವಾಗಿ ನಿಲ್ಲುವವರೆಗೂ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಮನವಿ ಸ್ವೀಕರಿಸಿದ ತಹಸೀಲ್ದಾರ್ ವಿ.ಕೆ. ನೇತ್ರಾವತಿ ಮಾತನಾಡಿ, ಗ್ರಾಮಕ್ಕೆ ಭೇಟಿ ನೀಡಿ ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಈ ವೇಳೆ ತಿಮ್ಮನಹಳ್ಳಿ ಗ್ರಾಮದ ಸಾವಿತ್ರಮ್ಮ, ರುದ್ರಮ್ಮ, ಶಾರದಮ್ಮ, ಆಶಾ, ಜ್ಯೋತಿ, ಪಾಲಮ್ಮ, ತಿಪ್ಪಮ್ಮ, ನೀಲಮ್ಮ, ನೇತ್ರಮ್ಮ, ಬಸಮ್ಮ, ಚಿತ್ತಮ್ಮ, ಚಂದ್ರಮ್ಮ ಸೇರಿ ಇದ್ದರು.ಕೂಡ್ಲಿಗಿಯ ತಾಲೂಕು ಆಡಳಿತ ಸೌಧದಲ್ಲಿ ತಹಸೀಲ್ದಾರ್ ವಿ.ಕೆ. ನೇತ್ರಾವತಿಗೆ ತಿಮ್ಮನಹಳ್ಳಿಯ ಮಹಿಳೆಯರು ಅಕ್ರಮವಾಗಿ ಮದ್ಯ ಮಾರಾಟ ತಡೆಯುವಂತೆ ಒತ್ತಾಯಿಸಿ ಸೋಮವಾರ ಮನವಿ ಸಲ್ಲಿಸಿದರು.