ನಗರ ವ್ಯಾಪ್ತಿಯೊಳಗೆ ಬಿದ್ದಿರುವ ಗುಂಡಿಗಳನ್ನು ಮುಚ್ಚುವುದಕ್ಕೆ ೨೫ ಲಕ್ಷ ರು.ಗಳನ್ನು ಮೀಸಲಿಡಲಾಗಿದೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ ಉಂಟಾಗಬಹುದಾದ ಪ್ರಾಣಹಾನಿಯನ್ನು ತಪ್ಪಿಸಲು ಮುಂಜಾಗ್ರತೆಯಾಗಿ ಕಾಮಗಾರಿಯನ್ನು ನಡೆಸುತ್ತಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ವಿವಿಧ ಬಡಾವಣೆ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾಮಗಾರಿಗೆ ನಗರಸಭೆಯಿಂದ ಚುರುಕು ನೀಡಲಾಗಿದೆ. ನಗರ ವ್ಯಾಪ್ತಿಯ ರಸ್ತೆಗಳಲ್ಲಿ ಯಾವುದೇ ಗುಂಡಿಗಳೂ ಇರಬಾರದೆಂಬ ಆಶಯದೊಂದಿಗೆ ಗುಂಡಿ ಮುಕ್ತ ಮಂಡ್ಯ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇರಿಸಿದೆ.

ಅಮೃತ್ ಮಂಡ್ಯ ಯೋಜನೆಯಡಿ ಕುಡಿಯುವ ನೀರಿನ ಪೂರೈಕೆಗೆ ನಡೆಸಿದ ಕಾಮಗಾರಿಯಿಂದ ನಗರದ ಬಹುತೇಕ ಬಡಾವಣೆಯ ರಸ್ತೆಗಳು ಛಿದ್ರಗೊಂಡಿದ್ದವು. ಕಳೆದೆರಡು ವರ್ಷಗಳಲ್ಲಿ ಶಾಸಕ ಪಿ.ರವಿಕುಮಾರ್ ನಗರ ಸೌಂದರ್ಯಕ್ಕೆ ತೋರಿದ ಆಸಕ್ತಿಯಿಂದಾಗಿ ಬಹುತೇಕ ಬಡಾವಣೆಯ ರಸ್ತೆಗಳು ಸುಸ್ಥಿತಿಗೆ ಮರಳಲಾರಂಭಿಸಿವೆ. ಅನೇಕ ಬಡಾವಣೆಯ ರಸ್ತೆಗಳನ್ನು ನೂತನವಾಗಿ ನಿರ್ಮಿಸಲಾಗಿದೆ. ಹೊಸ ರಸ್ತೆಗಳ ನಿರ್ಮಾಣ ಕಾರ್ಯ ಈಗಲೂ ಮುಂದುವರಿದಿದೆ.

ಹೊಸ ರಸ್ತೆಗಳ ನಿರ್ಮಾಣದ ಜೊತೆಯಲ್ಲೇ ಬಡಾವಣೆಗಳ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ರಸ್ತೆಗಳ ಸೌಂದರ್ಯಕ್ಕೆ ಶಾಸಕ ಪಿ.ರವಿಕುಮಾರ್ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಅವರು ತೋರುತ್ತಿರುವ ಆಸಕ್ತಿಗೆ ಪೂರಕವಾಗಿ ನಗರಸಭೆ ಪೌರಾಯುಕ್ತೆ ಯು.ಪಿ.ಪಂಪಾಶ್ರೀ ಅವರು ಅಧಿಕಾರಿಗಳ ತಂಡ ಕಟ್ಟಿಕೊಂಡು ಗುಂಡಿ ಬಿದ್ದಿರುವ ರಸ್ತೆಗಳನ್ನೆಲ್ಲಾ ಸಮೀಕ್ಷೆ ನಡೆಸಿ ಅವುಗಳನ್ನು ಮುಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ.

೨೫ ಲಕ್ಷ ರು. ವೆಚ್ಚ:

ನಗರ ವ್ಯಾಪ್ತಿಯೊಳಗೆ ಬಿದ್ದಿರುವ ಗುಂಡಿಗಳನ್ನು ಮುಚ್ಚುವುದಕ್ಕೆ ೨೫ ಲಕ್ಷ ರು.ಗಳನ್ನು ಮೀಸಲಿಡಲಾಗಿದೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ ಉಂಟಾಗಬಹುದಾದ ಪ್ರಾಣಹಾನಿಯನ್ನು ತಪ್ಪಿಸಲು ಮುಂಜಾಗ್ರತೆಯಾಗಿ ಕಾಮಗಾರಿಯನ್ನು ನಡೆಸುತ್ತಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹಗಲು- ರಾತ್ರಿ ಕಾಮಗಾರಿ:

ಕಳೆದ ಹದಿನೈದು ದಿನಗಳಿಂದ ಹಗಲು- ರಾತ್ರಿ ಎನ್ನದೆ ಗುಂಡಿ ಮುಚ್ಚುವ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಈಗಾಗಲೇ ಹೊಳಲು ವೃತ್ತದಿಂದ ಶಂಕರಮಠ, ಕುವೆಂಪು ನಗರದ ಆದರ್ಶ ಸ್ಕೂಲ್ ರಸ್ತೆ, ಕಲ್ಲಹಳ್ಳಿ, ವಿ.ವಿ.ನಗರ, ಕೃಷಿ ಉತ್ಪನ್ನ ಮಾರುಕಟ್ಟೆ ರಸ್ತೆ, ಪಿಇಎಸ್ ಇಂಜಿನಿಯರಿಂಗ್ ಕಾಲೇಜು ರಸ್ತೆ, ಗಾಂಧಿನಗರ, ಅಶೋಕನಗರ ಸೇರಿದಂತೆ ಹಲವು ಬಡಾವಣೆಗಳ ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ನಗರದ ರಸ್ತೆಗಳ ಸ್ಥಿತಿ ಸುಧಾರಣೆಗೊಳ್ಳುತ್ತಿರುವ ಸಮಯದಲ್ಲೇ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಗೂ ಮುಕ್ತಿ ದೊರಕಿಸುವ ಕಾರ್ಯ ನಡೆಯುತ್ತಿದೆ. ದೊಡ್ಡ ಹಳ್ಳಿಯಂತೆ ಕಾಣುತ್ತಿರುವ ಮಂಡ್ಯ ನಗರಕ್ಕೆ ರಸ್ತೆಗಳ ಮೂಲಕ ಹೊಸ ಕಳೆಯನ್ನು ತುಂಬುವುದಕ್ಕೆ ಶ್ರಮ ವಹಿಸುತ್ತಿದ್ದಾರೆ. ಗುಂಡಿ ಮುಕ್ತ ಮಂಡ್ಯ ಪರಿಕಲ್ಪನೆಯನ್ನಿಟ್ಟುಕೊಂಡು ಅದನ್ನು ಸಾಧಿಸುವ ನಿಟ್ಟಿನಲ್ಲಿ ಶಾಸಕರು ಮತ್ತು ಅಧಿಕಾರಿ ವರ್ಗ ಕಾರ್ಯೋನ್ಮುಖರಾಗಿದ್ದಾರೆ.

ರಸ್ತೆಗಳನ್ನು ಹಾಳುಗೆಡವದಂತೆ ಎಚ್ಚರಿಕೆ:

ಸಣ್ಣ ಗುಂಡಿಗಳಿಂದ ಆರಂಭವಾಗಿ ಹಲವು ಉದ್ದೇಶಗಳಿಗೆ ರಸ್ತೆಗಳನ್ನು ಅಗೆದು ನಿರ್ಮಾಣಗೊಂಡಿರುವ ಗುಂಡಿಗಳನ್ನೂ ಬಿಡದಂತೆ ಮುಚ್ಚುವ ಕಾರ್ಯ ನಡೆಸಲಾಗುತ್ತಿದೆ. ಟಿಪ್ಪರ್‌ಗಳಲ್ಲಿ ಡಾಂಬರು ಮಿಶ್ರಿತ ಜಲ್ಲಿಗಳನ್ನು ತುಂಬಿಕೊಂಡು ಗುಂಡಿಗಳಿಗೆ ಹಾಕಿ ರೋಡ್ ರೋಲರ್ ಮೂಲಕ ಸಮತಟ್ಟುಗೊಳಿಸುವ ಮೂಲಕ ಗುಂಡಿಗಳಿಗೆ ಮುಕ್ತಿ ದೊರಕಿಸುತ್ತಿದ್ದಾರೆ. ಗುಂಡಿ ಮುಚ್ಚುವ ಹಾಗೂ ಹೊಸದಾಗಿ ನಿರ್ಮಿಸಿರುವ ರಸ್ತೆಗಳನ್ನು ಮತ್ತೆ ಅಗೆದು ಹಾಳು ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಒಮ್ಮೆ ರಸ್ತೆಗಳನ್ನು ಅಗೆದು ಮತ್ತೆ ಗುಂಡಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಹಲವು ದಶಕಗಳಿಂದ ಡಾಂಬರನ್ನೇ ಕಾಣದ ಅನೇಕ ರಸ್ತೆಗಳು ಇದೀಗ ಹೊಸ ರೂಪದಲ್ಲಿ ಕಾಣಿಸುತ್ತಿವೆ. ರಸ್ತೆಗಳಲ್ಲಿ ವಾಹನಗಳ ಸಂಚಾರ ಕೂಡ ಹಂತ ಹಂತವಾಗಿ ಸುಧಾರಣೆಯನ್ನು ಕಂಡುಕೊಳ್ಳುತ್ತಿದೆ. ಗುಂಡಿಗಳನ್ನು ಮುಚ್ಚುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಉತ್ತಮಗೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಶಾಸಕ ಪಿ.ರವಿಕುಮಾರ್ ರಸ್ತೆಗಳನ್ನು ಸುಸ್ಥಿತಿಗೆ ತರುವುದಕ್ಕೆ ತೋರಿದ ವಿಶೇಷ ಆಸಕ್ತಿ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

------

‘ಉತ್ತಮ ರಸ್ತೆಗಳನ್ನು ನಿರ್ಮಿಸುವ ಮೂಲಕ ನಗರ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಕಳೆದೆರಡು ವರ್ಷಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಈಗ ೨೫ ಲಕ್ಷ ರು. ವೆಚ್ಚದಲ್ಲಿ ಗುಂಡಿ ಮುಚ್ಚಿಸುವ ಕಾರ್ಯ ನಡೆಸಲಾಗಿದೆ. ಗುಂಡಿ ಮುಕ್ತ ಮಂಡ್ಯ ಮಾಡುವ ಉದ್ದೇಶದಿಂದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಗೆ ಮೋಕ್ಷ ದೊರಕಿಸಲಾಗುತ್ತಿದೆ.’

- ಪಿ.ರವಿಕುಮಾರ್, ಶಾಸಕರು, ಮಂಡ್ಯ ವಿಧಾನಸಭಾ ಕ್ಷೇತ್ರ

-----

‘ಶಾಸಕರು, ಜಿಲ್ಲಾಧಿಕಾರಿ ಮಾರ್ಗದರ್ಶನದಂತೆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳ ಮುಚ್ಚುವ ಕಾರ್ಯವನ್ನು ನಗರಾದ್ಯಂತ ನಡೆಸಲಾಗುತ್ತಿದೆ. ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಕಾಮಗಾರಿ ನಡೆದಿದೆ. ಇದಕ್ಕಾಗಿ ೨೫ ಲಕ್ಷ ರು. ಖರ್ಚು ಮಾಡಲಾಗುತ್ತಿದೆ. ಎಲ್ಲಿಯೂ ಒಂದು ಸಣ್ಣ ಗುಂಡಿಯೂ ಕಾಣದಂತೆ ಗುಣಮಟ್ಟದ ಕಾಮಗಾರಿ ನಡೆಸಲಾಗುತ್ತಿದೆ.’

- ಯು.ಪಿ.ಪಂಪಾಶ್ರೀ, ಆಯುಕ್ತರು, ನಗರಸಭೆ