ಸಂಗೀತ ಗುರುಗಳ ಶ್ರಮ ಅನನ್ಯ: ಹರಿಪ್ರಕಾಶ ಕೋಣೇಮನೆ

| Published : Feb 25 2025, 12:50 AM IST

ಸಾರಾಂಶ

ಭಾರತೀಯ ಕಲೆಗಳಲ್ಲಿ ಸಂಗೀತ ಮತ್ತು ನೃತ್ಯ ಅತ್ಯಂತ ಶ್ರೇಷ್ಠವಾದದ್ದು. ಸಂಗೀತ ಗುರುಗಳ ಶ್ರಮ ಅನನ್ಯವಾದುದು

ಯಲ್ಲಾಪುರ: ಭಾರತೀಯ ಕಲೆಗಳಲ್ಲಿ ಸಂಗೀತ ಮತ್ತು ನೃತ್ಯ ಅತ್ಯಂತ ಶ್ರೇಷ್ಠವಾದದ್ದು. ಸಂಗೀತ ಗುರುಗಳ ಶ್ರಮ ಅನನ್ಯವಾದುದು ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೇಮನೆ ಹೇಳಿದರು.

ಪಟ್ಟಣದ ಶಕ್ತಿಗಣಪತಿ ದೇವಸ್ಥಾನದ ಆವಾರದಲ್ಲಿ ಸೋಮವಾರ ಸ್ವರಮಾಧುರಿ ಸಂಗೀತ ವಿದ್ಯಾಲಯದ ವಾರ್ಷಿಕ ಸಂಗೋತೋತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದಿನ ಪಾಲಕರಿಗೆ ಮಕ್ಕಳು ಕೆಲವೇ ಸಮಯದಲ್ಲಿ ಕಲಿತು ಪ್ರಸಿದ್ಧಿಗೊಳ್ಳಬೇಕೆನ್ನುವ ಹಂಬಲ. ಇದು ಭವಿಷ್ಯಕ್ಕೆ ಮಾರಕ. ನಿರಂತರ ಪರಿಶ್ರಮದಿಂದ ಮಾತ್ರ ಯಾವುದೇ ಕಲೆ ಸಿದ್ಧಿಸುತ್ತದೆ. ತನ್ಮೂಲಕ ಪ್ರಸಿದ್ಧಿಗೊಳ್ಳಬಹುದು. ಯಾವುದೇ ಕ್ಷೇತ್ರದಲ್ಲಿ ಒಮ್ಮೆಲೇ ಮೇಲೆ ಬಂದರೆ ಆತ ಶಾಶ್ವತ ಕೆಳಮಟ್ಟಕ್ಕೆ ತಲುಪುತ್ತಾನೆನ್ನುವುದಕ್ಕೆ ಸಾಕಷ್ಟು ನಿದರ್ಶನಗಳು ನಮಗೆ ದೊರೆಯುತ್ತದೆ ಎಂದರು.

ನಮ್ಮ ಗುರುಗಳ ಬಗ್ಗೆ ಭಕ್ತಿ, ಗೌರವ, ಪ್ರೀತಿ ಇದ್ದಾಗ ಮಾತ್ರ ಆ ವಿದ್ಯೆ ಪರಿಪೂರ್ಣಗೊಳ್ಳುತ್ತದೆ. ಸಾಧಕ ವಿದ್ಯಾರ್ಥಿಗಳಿಗೂ ಅಧ್ಯಮ್ಯವಾದ ಛಲ ಬೇಕು. ಅಂದಾಗ ಮಾತ್ರ ಸಾಧಕರಾಗಬಹುದು. ಜಗತ್ತಿನಲ್ಲೆಲ್ಲೆಡೆ ನೆಮ್ಮದಿ, ಶಾಂತಿ ಬಯಸುತ್ತಾರೆ. ಅದು ಇವುಗಳಿಂದ ಮಾತ್ರ ಸಾಧ್ಯ. ಹಾಗಂತ ಪಾಶ್ಚಾತ್ಯ ಸಂಗೀತಗಳು ನಮಗೆ ಶಾಂತಿ ನೀಡುವುದಿಲ್ಲ ಎಂದರು.

ಆನಗೋಡಿನ ಸುದರ್ಶ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ ಮಾತನಾಡಿ, ಕಳೆದ 25 ವರ್ಷಗಳಿಂದ ಈ ಸಂಸ್ಥೆ ಕಟ್ಟಿ ಬೆಳೆಸಿದ್ದು ಸಣ್ಣ ಕೆಲಸವಲ್ಲ. ವಾಣಿ ಹೆಗಡೆ ಕುಟುಂಬದವರ ಕೊಡುಗೆ ಅನುಪಮವಾದುದು. ನಮ್ಮ ಪ್ರದೇಶದಲ್ಲಿ ಸಂಗೀತದಷ್ಟೇ ಯಕ್ಷಗಾನವೂ ಪ್ರಚಲಿತವಾಗಿದೆ. ಇದು ನಮಗೆ ಸಂಸ್ಕಾರವನ್ನು ನೀಡುತ್ತದೆ. ನಮ್ಮ ಮಂದಿರದಲ್ಲಿ ಎಲ್ಲ ಕಲೆಗಳಿಗೆ ಮುಕ್ತ ಅವಕಾಶ ನೀಡಿದ್ದೇವೆ ಎಂದರು.

ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಶಂಕರ ಭಟ್ಟ ಮಾತನಾಡಿ, ಸಂಗೀತ ಒಂದು ತಪಸ್ಸು, ಆ ನೆಲೆಯಲ್ಲಿ ವಾಣಿ ಹೆಗಡೆ, ಗಣಪತಿ ಹೆಗಡೆ ಕುಟುಂಬದ ಕುಡಿ ವಿಭಾ ಹೆಗಡೆ ನಮ್ಮ ತಾಲೂಕಿಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ನಾವು ಇಂತಹ ಉತ್ತಮ ಕಾರ್ಯಕ್ರಮಗಳಿಗೆ ತನು-ಮನ-ಧನ ಸಹಕಾರ ನೀಡಬೇಕು ಎಂದರು.

ದೇವಸ್ಥಾನದ ಅರ್ಚಕ ವಿ.ವೆಂಕಟ್ರಮಣ ಭಟ್ಟ ಮಾತನಾಡಿ, ನಮ್ಮ ಮಂದಿರದಲ್ಲಿ ಪ್ರತಿ ಶನಿವಾರ, ಭಾನುವಾರ ಯಕ್ಷಗಾನ ತರಬೇತಿ ನಡೆಯುತ್ತಿದೆ. ನಮ್ಮ ಗಣಪತಿಗೆ ಕಲೆ ಬಹು ಇಷ್ಟವಾದುದು. ಹಾಗಾಗಿ ಇಲ್ಲಿ ಇಂತಹ ಆರಾಧನೆಗಳು ನಡೆಯುವುದಕ್ಕೆ ಕಾರಣವಾಗುತ್ತಿದೆ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ರಮೇಶ ಹೆಗಡೆ, ಸಂಗೀತ ಗುರುಗಳಾದ ವಾಣಿ ಹೆಗಡೆ, ಗಣಪತಿ ಹೆಗಡೆ ಉಪಸ್ಥಿತರಿದ್ದರು. ಸಂಗೀತ ವಿ.ಸುದಾಮ ದಾಮಗೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಸದಾನಂದ ದಬಗಾರ ನಿರ್ವಹಿಸಿದರು. ಶಿಕ್ಷಕಿ ನಯನಾ ಕೋಣೆಮನಡ ವಂದಿಸಿದರು.

ಶಕ್ತಿಗಣಪತಿ ದೇವಸ್ಥಾನದಲ್ಲಿ ಸಂಗೀತೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.