ಸಾರಾಂಶ
ಮಂಡ್ಯ : ಬೆಳಗಾವಿಯಲ್ಲಿ ಶಿವಸೇನೆ, ಎಂಇಎಸ್, ಮರಾಠಿಗರ ದೌರ್ಜನ್ಯ ಖಂಡಿಸಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡರ ಬಣ) ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿಯ ಗಾಂಧಿ ಪ್ರತಿಮೆ ಬಳಿ ಸೇರಿದ ಪ್ರತಿಭಟನಾಕಾರರು, ಮರಾಠಿಗರು ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಾ ಬಂದಿದ್ದರೂ ಸರ್ಕಾರ ಕನ್ನಡಿಗರ ರಕ್ಷಣೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸುವ ಬದಲು ಕನ್ನಡಿಗರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಕನ್ನಡ ನಾಡಿನ ಸಂಪನ್ಮೂಲ ತಿಂದು ನಾಡದ್ರೋಹಿಗಳ ಪರ ನಿಂತಿರುವ ಸರ್ಕಾರದ ನಡೆಯನ್ನು ಖಂಡಿಸಿದರು.
ರಾಜ್ಯ ಸಾರಿಗೆ ಸಂಸ್ಥೆ ನೌಕರರು, ಗಡಿಭಾಗದ ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ನೌಕರರ ಮೇಲೆ ಸುಳ್ಳು ದೂರು ಮೂಲಕ ಪೊಕ್ಸೊ ಪ್ರಕರಣ ದಾಖಲು ಮಾಡುವಂತೆ ಮರಾಠ ಸಂಘಗಳು ಮಾಡುತ್ತಿವೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು ಕನ್ನಡಿಗರ ರಕ್ಷಣೆ ಮಾಡಬೇಕು. ಇಲ್ಲವಾದಲ್ಲಿ ಸರ್ಕಾರಕ್ಕೆ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಥಾಮಸ್ ಬೆಂಜಮಿನ್ , ಸುನಿಲ್ ಕುಮಾರ್, ಜೀವನ್ ಕುಮಾರ್, ಸಿದ್ದರಾಮು, ಶಂಕರ್ , ಎಸ್.ಶ್ರೀನಿವಾಸ, ಭಗವಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ನಾಳೆ, ನಾಡಿದ್ದು ಜಾತ್ರಾ ಮಹೋತ್ಸವ
ಮಂಡ್ಯ: ನಗರದ ಕಲ್ಲಹಳ್ಳಿ ಬಡಾವಣೆ ಶಂಕರಮಠದ ಶ್ರೀಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಫೆ.26 ಮತ್ತು 27ರಂದು 64ನೇ ವರ್ಷದ ಜಾತ್ರಾ ಮಹೋತ್ಸವ ನಡೆಯಲಿದೆ. ಫೆ.25 ರಂದು ಸಂಜೆ ಪುಣ್ಯವಾಚನ, ಆಲಯಸುದ್ಧಿ ನಂತರ ಶ್ರೀ ಮಹಾಗಣಪತಿ ಹೋಮ, ನವಗ್ರಹ ಪರಸ್ಪರ, ಶ್ರೀ ಶನೇಶ್ವರಸ್ವಾಮಿ ಸಹಸ್ರ ಶಾಂತಿ ಹೋಮ, ಫೆ.26 ರಂದು ಬೆಳಗ್ಗೆ ಮಹಾರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಸ್ವಾಮಿಗೆ ಮಹಾಮಂಗಳಾರತಿ, ನಂತರ ತೀರ್ಥ ಪ್ರಸಾದ ವಿನಿಯೋಗ ಜರುಗಲಿದೆ. ಫೆ.27 ರಂದು ಶ್ರೀ ಶನೇಶ್ವರಸ್ವಾಮಿ ಉತ್ಸವ, ಬಾಯಿಬೀಗ ಸೇವೆ, ಮುಡಿ ಸೇವೆ, 10.30ಕ್ಕೆ ಸಿಹಿನೀರು ಕೊಳದ ಹತ್ತಿರ ಬಾಯಿ ಬೀಗ ಸೇವೆ ಮತ್ತು ಶನೇಶ್ವರಸ್ವಾಮಿ ವಿಜೃಂಭಣೆಯ ಉತ್ಸವ, ಮಧ್ಯಾಹ್ನ 1 ಗಂಟೆಗೆ ದೇಗುಲದ ಬಳಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಧಾನ ಅರ್ಚಕ ಜೆ.ಮೂರ್ತಾಚಾರ್ ತಿಳಿಸಿದ್ದಾರೆ.