ಅಹಿಂಸೆಯೊಡನೆ ಪರಸ್ಪರ ಪ್ರೇಮಭಾವವೇ ನೈಜ ಧರ್ಮ: ಮುನಿ ಕುಲರತ್ನಭೂಷಣ ಮಹಾರಾಜರು

| Published : Oct 14 2025, 01:02 AM IST

ಅಹಿಂಸೆಯೊಡನೆ ಪರಸ್ಪರ ಪ್ರೇಮಭಾವವೇ ನೈಜ ಧರ್ಮ: ಮುನಿ ಕುಲರತ್ನಭೂಷಣ ಮಹಾರಾಜರು
Share this Article
  • FB
  • TW
  • Linkdin
  • Email

ಸಾರಾಂಶ

ಸಕಲ ಜೀವಿಗಳಲ್ಲೂ ಅಹಿಂಸೆಯಿಂದ ಜೀವಿಸುವ ಸಕಲ ಜೀವರಾಶಿಯಲ್ಲೂ ಪ್ರೇಮಭಾವ ಹೊಂದುವ ಗುಣವೇ ನೈಜ ಧರ್ಮವಾಗಿದೆ ಎಂದು ಹಳಿಂಗಳಿ ಭದ್ರಗಿರಿಯ ಆಚಾರ್ಯ ೧೦೮ ಮುನಿ ಕುಲರತ್ನಭೂಷಣ ಮಹಾರಾಜರು ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸಕಲ ಜೀವಿಗಳಲ್ಲೂ ಅಹಿಂಸೆಯಿಂದ ಜೀವಿಸುವ ಸಕಲ ಜೀವರಾಶಿಯಲ್ಲೂ ಪ್ರೇಮಭಾವ ಹೊಂದುವ ಗುಣವೇ ನೈಜ ಧರ್ಮವಾಗಿದೆ ಎಂದು ಹಳಿಂಗಳಿ ಭದ್ರಗಿರಿಯ ಆಚಾರ್ಯ ೧೦೮ ಮುನಿ ಕುಲರತ್ನಭೂಷಣ ಮಹಾರಾಜರು ಆಶೀರ್ವಚನ ನೀಡಿದರು.

ಸೋಮವಾರ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದಲ್ಲಿ ನಡೆದ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ-೨೦೨೫ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ಸೇರಿದಂತೆ ಎಲ್ಲ ಸ್ತರದ ಜೀವಿಗಳಿಗೂ ಭೂಮಿಯಲ್ಲಿ ಬದುಕಲು ಸಮಾನ ಹಕ್ಕಿದೆ. ನಾವು ನೈಜ ಬದುಕುವ ಕಲೆ ಅಳವಡಿಸಿಕೊಂಡು ಯಾರಲ್ಲಿಯೂ ದೋಷ ಕಾಣದೇ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ನಾವು ಧರ್ಮವನ್ನು ರಕ್ಷಿಸಿದರೆ ಖಂಡಿತ ನಮ್ಮನ್ನು ಧರ್ಮ ರಕ್ಷಿಸುತ್ತದೆ. ನಮ್ಮ ಸಂಸ್ಕೃತಿಯ ಶ್ರೀಮಂತ ಮೌಲ್ಯಗಳನ್ನು ಮುಂದಿನ ತಲೆಮಾರಿಗೂ ಕಲಿಸಿ ನಿಸರ್ಗದ ಜೊತೆಗೆ ಮಿತೃತ್ವದಿಂದ ಬದುಕುವ ಮತ್ತು ದ್ವೇಷಯುತ ವಿಚಾರಗಳನ್ನು ತ್ಯಜಿಸಲು ಏಕಾಗ್ರತೆಯ ಮನಸ್ಸಿಗೆ ಧ್ಯಾನ, ಪೂಜೆ ಮೊದಲಾದ ಉಪಕ್ರಮಗಳನ್ನು ಚಾಚೂ ತಪ್ಪದೇ ರೂಢಿಸಿಕೊಳ್ಳಬೇಕೆಂದರು.

ಬೆಳಗಳೂರಿನ ಹಜರತ್ ಮಹಮ್ಮದ ತನ್ವೀರ್ ಹಶ್ಮಿ ಮಾತನಾಡಿ, ಇತ್ತೀಚೆಗೆ ದೇಶದೆಲ್ಲೆಡೆ ಅಸಹನೆ ಹೆಚ್ಚುತ್ತಿದೆ. ದ್ವೇಷ ಭಾವನೆ ಕೆರಳುತ್ತಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕೇವಲ ಘೋಷಣೆಯಾಗಿದೆ. ಪ್ರತೀಕಾರದ ಭಾವನೆ ಕೆರಳಿಸುವ ಘಟನೆಗಳು ಹೆಚ್ಚುತ್ತಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಎಲ್ಲರ ವಿಕಾಸ, ವಿಶ್ವಾಸ ಹೆಚ್ಚಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಸಾಮರಸ್ಯದ ದೇಶವಿಂದು ದ್ವೇಶದ ಒಡಲಾಗ್ನಿಯೊಳಗೆ ಬೇಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ನ್ಯಾಯಾಧೀಶರ ಮೇಲೆ ಶೂ ಎಸೆಯುವ ಮೂಲಕ ವ್ಯವಸ್ಥೆ ಮೇಲಿನ ಅನ್ಯಾಯದ ಗಾತ್ರ ಅಪರಿಮಿತವಾಗಿ ಬೆಳೆಯುತ್ತಿದೆ ಎಂದರಿಯಬಹುದು. ಸರ್ವರೂ ಒಂದು ಎಂಬ ಭಾವ ಬೆಳೆಸುವ ಮೂಲಕ ಪರಸ್ಪರ ಸಹೋದರತ್ವದ ಜೀವನ ನಡೆಸಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ಬಂಡಿಗಣಿ ಶ್ರೀದಾನೇಶ್ವರ ಶ್ರೀಗಳು ಜಾತಿ-ಧರ್ಮಗಳ ಅಂತರ ಕಾಣದೇ ಸರ್ವರಲ್ಲೂ ಸಮಾನತೆ ಬಿಂಬಿಸುವ ಮೂಲಕ ಲಕ್ಷಾಂತರ ಭಕ್ತರ ಕಣ್ಮಣಿಯಾಗಿದ್ದಾರೆಂದರು.

ಏರೇ ಹೊಸಹಳ್ಳಿಯ ಯೋಗಿ ವೇಮನ ಗುರುಪೀಠದ ಜಗದ್ಗುರು ವೇಮನಾನಂದ ಮಹಾಸ್ವಾಮಿಗಳು ಸಮಾನತೆ ಮತ್ತು ಸಹಿಷ್ಣುತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ಧರ್ಮ ಪ್ರೀತಿಸುವಂತೆ ಅನ್ಯ ಧರ್ಮಿಯರನ್ನು ಶಂಕಿಸದೇ ವಿಶ್ವಾಸದಿಂದ ಪ್ರೀತಿಯಿಂದ ಕಾಣುವ ಪರಂಪರೆ ನಮ್ಮದಾಗಿದ್ದು, ಸರ್ವರಲ್ಲೂ ಭಗವಂತನ ಕಾಣುವ ಮೂಲಕ ಬದುಕಿನ ಸಾರ್ಥಕತೆ ಹೊಂದಬೇಕೆಂದರು. ಹಾಸ್ಯನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಶ್ರೀಮಠದಲ್ಲಿ ಲಕ್ಷಾಂತರ ಭಕ್ತರು ಸೇರಿರುವುದು ಶ್ರೀದಾನೇಶ್ವರ ಸ್ಮಾಮೀಜಿ ಮೇಲಿನ ಅಚಲ ನಿಷ್ಠೆಯ ಪ್ರತೀಕವಾಗಿದ್ದು, ಜಾತಿಯ ಸೋಂಕಿಲ್ಲದೇ ಸರ್ವರೂ ಒಂದೇ ಎಂಬ ಭಾವದಲ್ಲಿ ಬದುಕುವ ಪರಿ ಅನುಕರಣೀಯವೆಂದರು.

ಬಾಗಲಕೋಟೆ ಜಿಲ್ಲಾಧಿಕಾರಿ ಎಂ.ಸಂಗಪ್ಪ, ಎಸ್ಪಿ ಸಿದ್ಧಾರ್ಥ ಗೋಯಲ್, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಎಸಿ ಶ್ವೇತಾ ಬೀಡಿಕರ, ಸಿಪಿಐ ಎಚ್.ಆರ್. ಪಾಟೀಲ ಸಿಬ್ಬಂದಿ ಸೂಕ್ತ ಬಂದೋಬಸ್ತ ನೀಡಿದ್ದರು. ಬಾಲಗಾಯಕಿ ದಿಯಾ ಹೆಗಡೆ, ಪ್ರವೀಣ ಗಸ್ತಿ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವೇದಿಕೆಯಲ್ಲಿ ದಾಸೋಹರತ್ನ ಚಕ್ರವರ್ತಿ ದಾನೇಶ್ವರರು ಅಧ್ಯಕ್ಷತೆ ವಹಿಸಿದ್ದರು. ಬಬಲಾದಿ ಸಿದ್ಧರಾಮೇಶ್ವರ ಶ್ರೀ, ಡಾ.ಡೆರಿಕ್ ಫನಾಂಡಿಸ್, ಯೋಗಿ ವೇಮನಪೀಠದ ವೇಮನಾನಂದಶ್ರೀ, ಹಳೆಹುಬ್ಬಳ್ಳಿ ವೀರಭಿಕ್ಷಾವರ್ತಿಮಠದ ಶಿವಶಂಕರಶ್ರೀ, ಬೆಂಗಳೂರಿನ ಹಜರತ್ ಮಹಮ್ಮದ ತನ್ವೀರ್ ಹಾಶ್ಮಿ, ಹೈದರಾಬಾದ್‌ನ ಸೂಫಿ ಸಂತ ಸೈಯದ್ ಬಾಷಾ ಸಾಹೇಬ, ತಂಗಡಗಿಯ ಹಡಪದ ಅಪ್ಪಣ್ಣ ಶ್ರೀ, ಚಿತ್ರದುರ್ಗದ ಸರ್ದಾ ಸೇವಾಲಾಲ ಶ್ರೀ, ಕೋಡಹಳ್ಳಿಯ ಷಡಕ್ಷರಮುನಿ ಶ್ರೀ, ಬೆಳಗಾವಿ ಬ್ರಹ್ಮಕುಮಾರಿಯ ರಾಜಯೋಗಿನಿ ಬಿ.ಕೆ. ಅಂಬಿಕಾಜಿ, ಬೌದ್ಧ ಗುರು ಮುಂಡಗೋಡದ ಗೆಶೆ ಜಂಪಾ ಲೋಬಾಂಗ್ಸ್, ಶಾಸಕ ವಿಜಯಾನಂದ ಕಾಶಪ್ಪನವರ, ಭೀಮಸೇನ ಚಿಮ್ಮನಕಟ್ಟಿ, ಡಾ.ಉಮಾಶ್ರೀ, ಎಸ್.ಜಿ. ನಂಜಯ್ಯನಮಠ, ಆನಂದ ನ್ಯಾಮಗೌಡ, ಸಿದ್ದು ಕೊಣ್ಣೂರ, ಕೆಪಿಸಿಸಿ ಸದಸ್ಯ ಬಸವರಾಜ ಕೊಕಟನೂರ ಇತರರಿದ್ದರು.