ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ತೀವ್ರ ಕುತೂಹಲ ಕೆರಳಿದ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಜಾರಕಿಹೊಳಿ ಪೆನಲ್‌ನಲ್ಲಿ ಗುರುತಿಸಿಕೊಂಡಿರುವ 9 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಜಾರಕಿಹೊಳಿ ಪೆನಲ್ ಬಿಡಿಸಿಸಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಹತ್ತಿರಕ್ಕೆ ಬಂದಿದೆ.ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದ ಸೋಮವಾರ ಅಚ್ಚರಿಯ ಬೆಳವಣಿಗೆಯಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಜೊತೆಗೆ ಗುರುತಿಸಿಕೊಂಡಿದ್ದ ಕಾಗವಾಡ ಶಾಸಕ ಭರಮಗೌಡ (ರಾಜು) ಕಾಗೆ ಅವರು ಜಾರಕಿಹೊಳಿ ಪೆನಲ್‌ಗೆ ಹಾರಿದ್ದಾರೆ. ಶಾಸಕ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಮಧ್ಯಸ್ಥಿಕೆ ವಹಿಸಿ, ರಾಜು ಕಾಗೆ ಅವರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ಶ್ರಮಿಸಿದರು.
ಸಚಿವ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಶ್ರೀನಿವಾಸ ಪಾಟೀಲ ತಮ್ಮ ನಾಮಪತ್ರ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಕಾಗೆ ಅವರ ಆಯ್ಕೆ ಸುಗಮವಾಯಿತು. ಈ ಮೂಲಕ ಜಾರಕಿಹೊಳಿ ಪೆನಲ್ ತನ್ನ ಸದಸ್ಯರ ಬಲವನ್ನುಹೆಚ್ಚಿಸಿಕೊಂಡಂತಾಗಿದೆ. ಅವಿರೋಧವಾಗಿ ಆಯ್ಕೆಯಾದವರು:
ಶಾಸಕ ಬಾಲಚಂದ್ರ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿರುವ ಅಮರನಾಥ ಜಾರಕಿಹೊಳಿ (ಗೋಕಾಕ), ರಾಹುಲ್ ಜಾರಕಿಹೊಳಿ (ಬೆಳಗಾವಿ), ಮಾಜಿ ಶಾಸಕ ಅರವಿಂದ ಪಾಟೀಲ (ಖಾನಾಪುರ), ನೀಲಕಂಠ ಕಪ್ಪಲಗುದ್ದಿ (ಮೂಡಲಗಿ), ಸವದತ್ತಿ ಶಾಸಕ ವಿಶ್ವಾಸ ವೈದ್ಯ (ಯರಗಟ್ಟಿ), ವಿರುಪಾಕ್ಷಿ ಮಾಮನಿ (ಸವದತ್ತಿ), ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ (ಇತರೆ ಕ್ಷೇತ್ರ) ಹಾಗೂ ಸಚಿವ ಸತೀಶ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕ ಭರಮಗೌಡ (ರಾಜು) ಕಾಗೆ (ಕಾಗವಾಡ) ಮತ್ತು ಶಾಸಕ ಗಣೇಶ ಹುಕ್ಕೇರಿ (ಚಿಕ್ಕೋಡಿ) ಅವರು ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.20 ಜನ ನಾಮಪತ್ರ ವಾಪಸ್: ಬಿಡಿಸಿಸಿ ಬ್ಯಾಂಕಿನ ಚುನಾವಣೆಗೆ ಸ್ಪರ್ಧಿಸಿದ್ದ ರಾಮದುರ್ಗ ಶಾಸಕ ಅಶೋಕ ಪಟ್ಟಣ ಸೇರಿದಂತೆ 20 ಜನ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಬ್ಯಾಂಕಿನ 16 ನಿರ್ದೇಶಕರ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ರಾಮದುರ್ಗ, ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ, ಅಥಣಿ, ಹುಕ್ಕೇರಿ, ರಾಯಬಾಗ ತಾಲೂಕುಗಳಲ್ಲಿ ಅ.19 ರಂದು ಚುನಾವಣೆ ನಡೆಯಲಿದೆ. ಬಿಡಿಸಿಸಿ ಬ್ಯಾಂಕಿನ ಚುನಾವಣೆಯ ನಾಮಪತ್ರ ಮರಳಿ ಪಡೆಯುವ ಕೊನೆಯ ದಿನ ಶಾಸಕ ಅಶೋಕ್ ಪಟ್ಟಣ್ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದರು.ಚನ್ನರಾಜ್‌ಗೆ ಖುಲಾಯಿಸಿದ ಅದೃಷ್ಟ: ತಾವು ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕಣಕ್ಕಿಳಿಯುವ ಮುನ್ನವೇ ಸ್ಪಷ್ಟಪಡಿಸಿದ್ದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರಿಗೆ 2ಡೇ ವಾರದಲ್ಲಿ ಅದೃಷ್ಟ ಖುಲಾಯಿಸಿದೆ. ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಗೆದ್ದು ಬೀಗಿ, ಅದರ ಆಡಳಿತ ಮಂಡಳಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಚನ್ನರಾಜ ಹಟ್ಟಿಹೊಳಿ ಕೊನೆ ಗಳಿಗೆಯಲ್ಲಿ ಇತರೆ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಪ್ರತಿಸ್ಪರ್ಥಿಯಾಗಿದ್ದ ಇಬ್ಬರು ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಚನ್ನರಾಜ್ ಅವರು ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಚನ್ನರಾಜ್ ಅವರಿಗೆ ದೀಪಾವಳಿ ಹಬ್ಬದ ಮೊದಲೇ ಡಬಲ್ ಧಮಾಕಾ ಸಿಕ್ಕಂತಾಗಿದೆ.ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನದ 9 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಗೊಂಡಿರರುವ ಅಭ್ಯರ್ಥಿಗಳ ಪೈಕಿ 7 ನಿರ್ದೇಶಕರು ಬಾಲಚಂದ್ರ ಜಾರಕಿಹೊಳಿ ಪೆನಲ್‌ನಲ್ಲಿ ಗುರುತಿಸಿಕೊಂಡಿದ್ದರೆ, ಇಬ್ಬರು ನಿರ್ದೇಶಕರು ಸಚಿವ ಸತೀಶ ಜಾರಕಿಹೊಳಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಜಾರಕಿಹೊಳಿ ಸಹೋದರರ ಪೆನಲ್ ಜಯಭೇರಿ ಬಾರಿಸಿದೆ. ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ ಜಾರಕಿಹೊಳಿ ಅವರು ತಮ್ಮ ಚಿಕ್ಕಪ್ಪ ಬಾಲಚಂದ್ರ ಜಾರಕಿಹೊಳಿ ಜೊತೆಗೆ ಗುರುತಿಸಿಕೊಂಡಿರುವುದು ವಿಶೇಷ.ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಶಾಸಕ ಅಶೋಕ ಪಟ್ಟಣ, ನಾಮಪತ್ರ ಹಿಂದಕ್ಕೆ ಪಡೆಯಲು ಬೇರೆ ಯಾವುದೇ ವಿಶೇಷ ಕಾರಣವಿಲ್ಲ. ಯಾರಿಗೆ ಬೆಂಬಲ ಸೂಚಿಸುತ್ತೇವೆ ಎಂಬುವುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ಉಸ್ತುವಾರಿ ಸಚಿವರನ್ನು ಈ ವಿಷಯವಾಗಿ ಅಲ್ಲ. ಬೇರೆಯ ವಿಷಯವಾಗಿ ಭೇಟಿಯಾಗಿದ್ದೇವು. ನಮಗೆ ಸೋಲಿನ ಭೀತಿಯಿಲ್ಲ. ರಾಜಕೀಯದಲ್ಲಿ ಸಾಕಷ್ಟು ಕಾರಣಗಳಿರುತ್ತವೆ ಎಂದರು.ಇನ್ನು ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟ ವಿಚಾರ. ಮೊದಲು ಸಚಿವ ಸ್ಥಾನ ನೀಡಲಿ. ನಂತರ ಖಾತೆಯ ಬಗ್ಗೆ ವಿಚಾರ ಮಾಡೋಣ. ಈ ಬಾರಿ ಶೇ.99 ರಷ್ಟು ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಆಸೆಯಿದೆ. ಮೊನ್ನೆಯೂ ಹೇಳಿದ್ದೇ ಇಂದು ಹೇಳುತ್ತೇನೆ. ನನ್ನದು ಯಾವುದೇ ಪೆನಲ್ ಅಲ್ಲ. ನಮ್ಮದು ಸಿದ್ಧರಾಮಯ್ಯ ಟೀಂ ಎಂದರು.ಜಾರಕಿಹೊಳಿ ಅಭಿಮಾನಿಗಳಿಂದ ಸಂಭ್ರಮಾಚರಣೆ:
ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಪೆನಲ್ ಭರ್ಜರಿ ಮೆಲುಗೈ ಸಾಧಿಸಿದ್ದು, ಅಭಿಮಾನಿಗಳು ಬ್ಯಾಂಕ್ ಆವರಣದಲ್ಲಿ ಸಂಭ್ರಮಾಚರಣೆ ನಡೆಸಿದರು.ಪರಸ್ಪರ ಗುಲಾಲ್ ಎರಚಿ, ಪಟಾಕಿ ಸಿಡಿಸಿ ಸಿಹಿ ಹಂಚಿದರು. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬೆಳಗಾವಿ ತಾಲೂಕಿನಿಂದ ರಾಹುಲ್ ಜಾರಕಿಹೊಳಿ ಹಾಗೂ ಗೋಕಾಕ್ ತಾಲೂಕಿನಿಂದ ಅಮರನಾಥ ಜಾರಕಿಹೊಳಿ ಅವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರ ಹೆಸರು ಜಯಘೋಷ ಮೊಳಗಳಿಸಿದರು.