ಮಹಿಳಾ ಆರ್.ಎಫ್.ಒ ಮೇಲೆ ಮಹಿಳೆಯರಿಂದ ಹಲ್ಲೆ

| Published : Nov 08 2025, 01:03 AM IST

ಮಹಿಳಾ ಆರ್.ಎಫ್.ಒ ಮೇಲೆ ಮಹಿಳೆಯರಿಂದ ಹಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮೂರು ನಾಲ್ಕು ದಿನಗಳಿಂದ ಈ ಭಾಗದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದ್ದು, ಈ ಸಂಬಂಧ ಸ್ಥಳೀಯರು ಬೋನು ಇರಿಸಿ ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆ ಕ್ರಮಕೈಗೊಳ್ಳದ ಪರಿಣಾಮ

ಕನ್ನಡಪ್ರಭ ವಾರ್ತೆ ಸರಗೂರು

ತಾಲೂಕಿನ ನುಗು ಹಿನ್ನೀರು ಸಮೀಪದ ಕಾಡಂಚಿನ ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಹುಲಿಯೊಂದು ಏಕಾಏಕಿ ದಾಳಿ ನಡೆಸಿ, ರೈತ ಚೌಡಪ್ಪನನ್ನ ಬಲಿ ಪಡೆದ ಹಿನ್ನೆಲೆ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರಲ್ಲದೇ, ಕರ್ತವ್ಯ ನಿರತ ಮಹಿಳಾ ಆರ್.ಎಫ್.ಒ ಅಮೃತಾ ಮೇಲೆ ಮಹಿಳೆಯರು ಹಲ್ಲೆ ಮಾಡಿದ್ದು, ರಾಮಾಂಜನೇಯ ಅವರ ಮೇಲೂ ಸ್ಥಳೀಯರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಈ ಭಾಗದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದ್ದು, ಈ ಸಂಬಂಧ ಸ್ಥಳೀಯರು ಬೋನು ಇರಿಸಿ ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆ ಕ್ರಮಕೈಗೊಳ್ಳದ ಪರಿಣಾಮ ಈ ಅವಘಡ ಸಂಭವಿಸಿದೆ.

ಒಂದು ಕೋಟಿ ರು. ಪರಿಹಾರದ ಬೇಡಿಕೆ

ಮೃತರ ಕುಟುಂಬಕ್ಕೆ ಒಂದು ಕೋಟಿ ರು. ಪರಿಹಾರ ನೀಡುವ ಜತೆಗೆ ಮೃತರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮೂವರಿಗೂ ಉದ್ಯೋಗ ನೀಡಬೇಕು. ಅಲ್ಲದೇ ಕೂಡಲೇ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಸಚಿವ ಈಶ್ವರ್ ಖಂಡ್ರೆ ಅವರು ಕೂಡಲೇ ಸ್ಥಳಕ್ಕೆ ಆಗಮಿಸಿ ಹುಲಿ ದಾಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ಸ್ಥಳಕ್ಕೆ ಶಾಸಕರು, ಸಚಿವರು ಬರುವವರೆಗೂ ಮೃತದೇಹ ಎತ್ತಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು.

ತಿಂಗಳ ಅಂತರದಲ್ಲಿ ಮೂರು ಸಾವು

ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ಮುಂದುವರಿದಿದ್ದು, ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿದ್ದು, ತಿಂಗಳ ಅಂತರದಲ್ಲಿ ಮೂರು ಸಾವು ಸಂಭವಿಸಿದೆ.

ಮೃತದೇಹವನ್ನು ಪಕ್ಕದ ಹಳ್ಳವೊಂದರಲ್ಲಿ ಇಟ್ಟುಕೊಂಡು ಕುಳಿತಿದೆ. ಉಳುಮೆ ಮಾಡುತ್ತಿದ್ದ ರೈತ ಕಾಣೆಯಾದನ್ನು ಗಮನಿಸಿದ ಅಕ್ಕಪಕ್ಕ ಜಮೀನಿನ ರೈತರು ಬಂದು ನೋಡಲಾಗಿ ದಾಳಿ ಮಾಡಿರುವುದು ತಿಳಿದುಬಂದಿದ್ದು, ಜನರ ಕೂಗಾಟ ಕೇಳುತ್ತಿದ್ದಂತೆಯೇ ಹಳ್ಳದಲ್ಲಿ ಹುಲಿ ಮೃತದೇಹವನ್ನು ಬಿಟ್ಟು ಓಡಿದೆ ಎನ್ನಲಾಗಿದೆ.

ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮೃತಪಟ್ಟ ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರಿಗೆ ಸ್ವಾಂತ್ವನ ಹೇಳಿ ನಂತರ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ತರಾಟೆ ತೆಗೆದುಕೊಂಡು ತಾಲೂಕಿನ ಇದ್ದು ಒಂದು ಸೇರಿ ನಾಲ್ಕು ಬಲಿಯಾಗಿದೆ.ಯಾಕೆ ಜನರ ಜೀವದ ಬಗ್ಗೆ ಆಟವಾಡುತ್ತಿದ್ದಾರೆ, ರೈತರು ಹುಲಿ ಕಾಣಿಸಿಕೊಂಡಿದೆ ಎಂದ ಕೂಡಲೇ ಕ್ರಮ ಕೈಗೊಳ್ಳಬೇಕು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲಿಲ್ಲ ನಿಮ್ಮ ನಿರ್ಲಕ್ಷ್ಯ ಧೋರಣೆದಿಂದ ಈ ಘಟನೆಗಳು ನಡೆದಿವೆ ಎಂದು ತಿಳಿಸಿದರು.

ಕೂಂಬಿಂಗ್ ಆರಂಭ

ಇತ್ತೀಚೆಗೆ ಮುಳ್ಳೂರು ಸಮೀಪದ ಬೆಣ್ಣೆಗೆರೆ ಬಳಿ ರೈತನನ್ನು ಬಲಿ ಪಡೆದಿದ್ದ ಹುಲಿ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದ್ದ ಬೆನ್ನಲ್ಲೇ ಈ ಅವಘಡ ಸಂಭವಿಸಿದ್ದು, ಹಳೆ ಹೆಗ್ಗುಡಿಲಿನಲ್ಲಿ ಸಾಕಾನೆಗಳಾದ ಭೀಮಾ, ಮಹೇಂದ್ರ, ಶ್ರೀಕಂಠ, ಲಕ್ಷ್ಮಣ ಸಾಕಾನೆಗಳು ಹಾಗೂ 100 ಕ್ಕೂ ಅಧಿಕ ಸಿಬ್ಬಂದಿಗಳ ಮೂಲಕ ಕಾರ್ಯಾಚರಣೆ ಆರಂಭಿಸಿದೆ.

ಸ್ಥಳದಲ್ಲಿ ಡಿಸಿಎಫ್ ಗಳಾದ ಪರಮೇಶ್, ಪ್ರಭಾಕರನ್, ಎಸಿಎಫ್ ಡಿ.ಪರಮೇಶ್, ಆರ್ ಎಫ್ ಒಗಳಾದ ಅಮೃತ, ರಾಮಾಂಜನೇಯ, ತಹಸೀಲ್ದಾರ್ ಮೋಹನ ಕುಮಾರಿ ವೃತ್ತ ನಿರೀಕ್ಷಕ ಗಂಗಾಧರ್, ಪಿಎಸ್ ಐಗಳಾದ ಚಂದ್ರಹಾಸ್ ನಾಯಕ್, ಕಿರಣ್.ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಸೇರಿದಂತೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಸ್ಥಳಕ್ಕೆ ಅನಿಲ್‌ಚಿಕ್ಕಮಾದು ಭೇಟಿ

ಘಟನಾ ಸ್ಥಳಕ್ಕೆ ಶಾಸಕ ಅನಿಲ್‌ಚಿಕ್ಕಮಾದು ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿದರು. ಈ ವೇಳೆ ರೈತರು ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಅವುಗಳು ನಾಡಿಗೆ ಬರದಂತೆ ತಡೆಯಲು ಕ್ರಮಕೈಗೊಳ್ಳಬೇಕು. ಈಗ ಮೃತರ ಕುಟುಂಬದ ಪರಿಹಾರ ಧನ ಹೆಚ್ಚಿಸಬೇಕು ಎಂದು ಪಟ್ಟು ಹಿಡಿದರು.

ನಂತರ ಶಾಸಕ ಅನಿಲ್‌ಚಿಕ್ಕಮಾದು ಮಾತನಾಡಿ, ಮೃತರ ಕುಟುಂಬಕ್ಕೆ ಶ್ರೀಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅಥವಾ ಮೀನುಗಾರಿಕೆ ಇಲಾಖೆಯಿಂದ ಮನೆ ನಿರ್ಮಾಣ ಮಾಡಿಕೊಡುವ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ವೈಯಕ್ತಿಕ ನೆರವು ನೀಡಲಾಗುವುದು. ಮೃತರ ಪತ್ನಿಗೆ ದೊರೆಯುವ ಮಾಶಾಸನವನ್ನೂ ಹೆಚ್ಚಳ ಮಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರದ ಚೆಕ್‌ವಿತರಿಸಿದರು.

ಮುಂದಿನ ವಾರ ಸಭೆ

ಸರಗೂರಿನ ಕಾಡಂಚಿನ ಭಾಗದಲ್ಲಿ ಪದೇ ಪದೇ ಹುಲಿ ದಾಳಿ ನಡೆಯುತ್ತಿರುವ ಹಿನ್ನೆಲೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು 50 ಕೋಟಿ ರು. ವೆಚ್ಚದಲ್ಲಿ ರೇಲ್ವೆ ಕಂಬಿ ಬ್ಯಾರೀಕೇಡ್ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಿಸಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವರ ಬಳಿ ಚರ್ಚಿಸಲಾಗಿದೆ. ಹೆಚ್ಚಿನ ಕ್ರಮಕ್ಕಾಗಿ ಸೋಮವಾರ ಮೈಸೂರಿನಲ್ಲಿ ಮುಖ್ಯ ಮಂತ್ರಿ ನೇತೃತ್ವದಲ್ಲಿ ಸಭೆ ನಡೆಲಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಬಳಿಕ ಪಟ್ಟು ಸಡಲಿಸಿದ ರೈತರು, ಮೃತದೇಹದ ರವಾನೆಗೆ ಅವಕಾಶ ನೀಡಿದರು. ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆಗೆ ಸರಗೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಯಿತು.