22ರಿಂದ 26ರವರಗೆ ನಾಡಹಬ್ಬ ಉತ್ಸವ

| Published : Sep 20 2025, 01:03 AM IST

ಸಾರಾಂಶ

98ನೇ ನಾಡಹಬ್ಬ ಉತ್ಸವ ಅಂಗವಾಗಿ ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆ.22ರಿಂದ 26ರವರಗೆ ನಗರದ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ನಡೆಯಲಿವೆ

ಕನ್ನಡಪ್ರಭ ವಾರ್ತೆ ಬೆಳಗಾವಿ

98ನೇ ನಾಡಹಬ್ಬ ಉತ್ಸವ ಅಂಗವಾಗಿ ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆ.22ರಿಂದ 26ರವರಗೆ ನಗರದ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ನಡೆಯಲಿವೆ ಎಂದು ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಎಚ್.ಬಿ ರಾಜಶೇಖರ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.22ರಂದು ಸಂಜೆ 6 ಗಂಟೆಗೆ ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ ಎಂದರು.

ಗದಗ ತೋಂಟದಾರ್ಯಮಠದ ಜಗದ್ಗುರು ಡಾ.ಸಿದ್ದರಾಮಯ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ಎಂ.ತ್ಯಾಗರಾಜ ಉದ್ಘಾಟಿಸುವರು. ಸಂಸದ ಜಗದೀಶ ಶೆಟ್ಟರ ಅಧ್ಯಕ್ಷತೆ ವಹಿಸುವರು ಹಾಗೂ ಗೋಕಾಕ ಸಾಹಿತಿ ವಿದ್ಯಾ ರೆಡ್ಡಿ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡುವರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಸೆ.23ರಂದು ಸಂಜೆ 6ಗಂಟೆಗೆ ಜಾನಪದ ಕಲಾವಿದರ ಹಾಡು ಪಾಡು ವಿಷಯದ ಕುರಿತು ಉಪನ್ಯಾಸ ಹಾಗೂ ಬೆಳ್ಳಿ ಚುಕ್ಕಿ ಅಕಾಡೆಮಿಯವರಿಂದ ಜಾನಪದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.24ರಂದು ಸಂಜೆ 6ಕ್ಕೆ ಇಂದಿನ ಶಿಕ್ಷಣ ನೀತಿ ರಾಷ್ಟ್ರೀಯ ನಿರ್ಮಾಣಕ್ಕೆ ಪೂರಕವೇ ಎಂಬ ವಿಷಯದ ಕುರಿತು ಉಪನ್ಯಾಸ ಹಾಗೂ ನಾದಸುಧ ಸುಗಮ ಸಂಗೀತ ಶಾಲೆಯ ತಂಡದವರಿಂದ ನೃತ್ಯ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದರು.

ಸೆ.25ರಂದು ಅದೇ ಸಮಯಕ್ಕೆ ಹೋಗುತ್ತಿರುವ ಸಾಹಿತ್ಯಿಕ ಸಾಂಸ್ಕೃತಿಕ ಆಸಕ್ತಿ ಎಂಬ ವಿಷಯದ ಕುರಿತು ಉಪನ್ಯಾಸ ಹಾಗೂ ರವಿ ಕಲಾಮಂದಿರ ನೃತ್ಯಲಯದ ತಂಡದವರಿಂದ ನೃತ್ಯ ಕಾರ್ಯಕ್ರಮ ನಡೆಯಲಿವೆ. ಕೊನೆಗೆ 26ರಂದು ಕವಿಗೋಷ್ಠಿ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಮುಕ್ತಿ ಮಠದ ಶ್ರೀ ಶಿವಸಿದ್ದ ಸೋಮೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಂಸದೆ ಮಂಗಲಾ ಅಂಗಡಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಮಿತಿ ಅಧ್ಯಕ್ಷ ಡಾ.ಎಚ್.ಬಿ.ರಾಜಶೇಖರ್ ಅಧ್ಯಕ್ಷತೆ ವಹಿಸುವರು. ಬಳಿಕ ವಿವಿಧ ಗಣ್ಯರಿಗೆ ಸನ್ಮಾನ, ಬಳಿಕ ಶಾಂತಕಲಾ ನಾಟ್ಯಾಲಯ ತಂಡದವರಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ.ಸಿ.ಕೆ.ಜೋರಾಪೂರ, ಡಾ.ಬಸವರಾಜ ಜಗಜಂಪಿ ಸೇರಿದಂತೆ ಇತರರು ಇದ್ದರು.