ಕನ್ನಡಪ್ರಭ ವಾರ್ತೆ ವಿಜಯಪುರ 2017ರಲ್ಲಿ ಆರಂಭಿಸಿ 2021ರಲ್ಲಿ ಮುಕ್ತಾಯವಾಗಿದೆ ಎಂದು ಪ್ರಮಾಣಿಕರಿಸಿದ ಚಡಚಣ ಏತ ನೀರಾವರಿ ಕಾಮಗಾರಿಯೇ ಇನ್ನೂ ಪೂರ್ಣಗೊಂಡಿಲ್ಲ. ಇದರಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಿ ಬಿಲ್ ಎತ್ತುವಳಿ ಮಾಡಲಾಗಿದೆ ಎಂದು ಕೆಬಿಜೆಎನ್‌ಎಲ್‌ ಹಾಗೂ ಗುತ್ತಿಗೆದಾರರ ವಿರುದ್ಧ ಸಂಸದ ರಮೇಶ ಜಿಗಜಿಣಗಿ ಗಂಭೀರ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

2017ರಲ್ಲಿ ಆರಂಭಿಸಿ 2021ರಲ್ಲಿ ಮುಕ್ತಾಯವಾಗಿದೆ ಎಂದು ಪ್ರಮಾಣಿಕರಿಸಿದ ಚಡಚಣ ಏತ ನೀರಾವರಿ ಕಾಮಗಾರಿಯೇ ಇನ್ನೂ ಪೂರ್ಣಗೊಂಡಿಲ್ಲ. ಇದರಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಿ ಬಿಲ್ ಎತ್ತುವಳಿ ಮಾಡಲಾಗಿದೆ ಎಂದು ಕೆಬಿಜೆಎನ್‌ಎಲ್‌ ಹಾಗೂ ಗುತ್ತಿಗೆದಾರರ ವಿರುದ್ಧ ಸಂಸದ ರಮೇಶ ಜಿಗಜಿಣಗಿ ಗಂಭೀರ ಆರೋಪ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಡಚಣ ಭಾಗದ ಏಳು ಹಳ್ಳಿಗಳಿಗೆ ನೀರಾವರಿ ಆಗಬೇಕಿದ್ದ ಭೀಮಾ ಬ್ಯಾರೇಜ್‌ ನಿಂದ ನೀರು ಪೂರೈಸುವ ಚಡಚಣ ಏತ ನೀರಾವರಿ ಯೋಜನೆಯನ್ನು ಹಳ್ಳಹಿಡಿಸಲಾಗಿದೆ. 2017ರಲ್ಲಿ ಬೆಳಗಾವಿಯ ಮೆ.ಆದಿತ್ಯ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್ ₹ 104.04 ಕೋಟಿ ವೆಚ್ಚದಲ್ಲಿ ಚಡಚಣ ಲಿಫ್ಟ್ ಹೆಡ್ ವರ್ಕ್ಸ್ ಕಾಮಗಾರಿ ಟೆಂಡರ್‌ ಕೊಡಲಾಗಿತ್ತು. ಇದರ ಜೊತೆಗೆ ಚಡಚಣ ಎಲ್‌ಐಎಸ್ ಅಡಿಯಲ್ಲಿ 9216 ಹೆಕ್ಟೇರ್‌ ಕಮಾಂಡ್ ಪ್ರದೇಶ ಒಳಗೊಂಡಿರುವ ಪೈಪ್ ವಿತರಣಾ ಜಾಲ ವ್ಯವಸ್ಥೆಯ ವಿನ್ಯಾಸ ಮತ್ತು ಪೂರೈಕೆ, ಅಳವಡಿಕೆ, ಪರೀಕ್ಷೆ ಮತ್ತು ನಿಯೋಜನೆ, 5 ವರ್ಷಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ಕಾಮಗಾರಿಯನ್ನು ವಿಜಯಪುರದ ಪ್ರಥಮ ದರ್ಜೆ ಪಿಡಬ್ಲ್ಯೂಡಿ ಗುತ್ತಿಗೆದಾರ ಜಿ.ಶಂಕರ್‌ ಎಂಬುವರಿಗೆ ₹184.41 ಕೋಟಿಗೆ ಟೆಂಡರ್‌ ಕೊಡಲಾಗಿದೆ. ಇವರಿಬ್ಬರೂ ಸೇರಿಕೊಂಡು ಗುಣಮಟ್ಟದ ಕಾಮಗಾರಿ ಮಾಡಿಲ್ಲ, ರೈತರ ಜಮೀನುಗಳೀಗೆ ಒಂದೇ ಒಂದು ಹನಿ ನೀರು ಹೋಗಿಲ್ಲ. ಆದರೂ ಕಾಮಗಾರಿ ಮುಗಿದಿದೆ ಎಂದು ರಿಪೋರ್ಟ್ ಕೊಟ್ಟಿದ್ದಾರೆ. ಇದುವರೆಗೂ ರೈತರ ಜಮೀನಿಗೆ ಒಂದು ಹನಿ‌ ನೀರು ಹೋಗಿದ್ದರೆ ರಾಜಕೀಯ ಬಿಟ್ಟು ಹೋಗುವುದಾಗಿ ಸವಾಲು ಹಾಕಿದರು.ಚಡಚಣ ಏತ ನೀರಾವರಿಯು ₹ 422 ಕೋಟಿ ವೆಚ್ಚದಲ್ಲಿದ್ದು, ಭೂ ಸ್ವಾಧೀನ ಸೇರಿದಂತೆ ಒಟ್ಟು ₹ 500ಕ್ಕೂ ಅಧಿಕ ಕೋಟಿ ವೆಚ್ಚದ ಕಾಮಗಾರಿ ಹಾಳಾಗಿದ್ದಕ್ಕೆ ಯಾರು ಹೊಣೆ?. ಇಲ್ಲಿನ ಚಡಚಣ, ಹಾವಿನಾಳ, ದೂಡಿಹಾಳ, ಹಾಲಳ್ಳಿ, ಬರಡೋಲ, ಶಿರಾಡೋಣ, ರೇವತಗಾಂವ ಏಳು ಹಳ್ಳಿಗಳ ಜಮೀನುಗಳಿಗೆ ಯಾವುದೇ ನೀರು ಹೋಗಿಲ್ಲ ಎಂದು ಆರೋಪಿಸಿದರು.ಸರ್ಕಾರಿ ಮೆಡಿಕಲ್ ಕಾಲೇಜು ಆಗಲಿ:

ನನ್ನದೂ ಕೂಡ ಸರ್ಕಾರಿ ಮೆಡಿಕಲ್ ಕಾಲೇಜು ಆಗಬೇಕು ಎಂಬ ಆಶಯವಿದೆ. ಪಿಪಿಟಿ ಕಾಲೇಜು ಬೇಡ ಎಂದು ಹೋರಾಟ ಮಾಡುವವರ ಜತೆಗಿದ್ದೇನೆ. ಸರ್ಕಾರದ್ದೇ ಮೆಡಿಕಲ್ ಕಾಲೇಜು ಇರಬೇಕು. ಎಷ್ಟೊತ್ತಿದ್ದರೂ ಅದು ಆಗಲೇಬೇಕು ಎಂದು ಹೇಳಿದರು.ಆದರ್ಶ ಗ್ರಾಮಕ್ಕಿಲ್ಲ ಅನುದಾನ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಸಂಸದರ ಆದರ್ಶ ಗ್ರಾಮವನ್ನಾಗಿ ನಾನು ಮಾದರಿ ಗ್ರಾಮ ಮಾಡಲೆಂದು ತಾಲೂಕಿನ ಮಕಣಾಪುರ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದೇ‌ನೆ. ಅಲ್ಲಿ ಈಗಾಗಲೇ ರಸ್ತೆ, ಬಸ್ ನಿಲ್ದಾಣ, ದೇವಸ್ಥಾನ, ಆಸ್ಪತ್ರೆ ಕಟ್ಟಿಸಿದ್ದೇನೆ. ಆದರೆ, ಇದಕ್ಕೆ ವಿಶೇಷ ಅನುದಾನ ಕೊಡಿ ಎಂದು ನಾನು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಅವರಿಂದ ಇದುವರೆಗೂ ಉತ್ತರ ಬಂದಿಲ್ಲ. ಇದಾದ ಮೇಲೆ ಮತ್ತೆ ಎರಡು ಹೊಸ ಹಳ್ಳಿಗಳನ್ನು ತೆಗೆದುಕೊಳ್ಳಿ ಎಂದಿದ್ದರು. ವಿಶೇಷ ಅನುದಾನವಿಲ್ಲದ ಕಾರಣ ನಾನು ರಿಜೆಕ್ಟ್ ಮಾಡಿ ಕಳಿಸಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಿ.ಎಸ್.ಪಾಟೀಲ, ಭೀಮನಗೌಡ ಬಿರಾದಾರ, ವಿಜಯ ಜೋಶಿ ಉಪಸ್ಥಿತರಿದ್ದರು.ಕೋಟ್‌ಏಳು ಗ್ರಾಮಗಳ 22,771 ಎಕರೆ ಜಮೀನಿಗೆ ಭೀಮಾ‌ ಬ್ಯಾರೇಜ್‌ನಿಂದ 1.20 ಟಿಎಂಸಿ ನೀರು ಹೋಗಬೇಕಿತ್ತು. ಇದುವರೆಗೂ ನೀರು ಹೋಗಿಲ್ಲ. ರಾಜ್ಯ ಸರ್ಕಾರ ಯಾವುದೇ ಸ್ಥಿತಿಯಲ್ಲಿ ಇದನ್ನು ಪೂರ್ಣಗೊಳಿಸಬೇಕು. ಈ ಭಾಗದಲ್ಲಿ ಪೈಪಲೈನ್ ಹಾಕುವ ವ್ಯವಸ್ಥೆ ಸರಿಯಾಗಿಲ್ಲ. ಈ ಕುರಿತು ಈಗಾಗಲೇ ಸಿಎಂ, ಡಿಸಿ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಒಂದು ತಿಂಗಳೊಳಗೆ ಪೈಪಲೈನ್ ಸರಿಪಡಿಸಿ ನೀರು ಬಿಡದಿದ್ದರೆ ಚಡಚಣ ಭಾಗದ ರೈತರನ್ನು ಕರೆದುಕೊಂಡು ಚಡಚಣ ತಹಸೀಲ್ದಾರ್‌ ಕಚೇರಿ ಎದುರು ಹೋರಾಟ ಮಾಡಬೇಕಾಗುತ್ತದೆ.ರಮೇಶ ಜಿಗಜಿಣಗಿ, ಸಂಸದ