‘ಲೇ ನಿನ್ನದು ಜಾಸ್ತಿ ಆಯ್ತು, ನಿನಗೆ  ಗತಿ ಕಾಣಿಸ್ತೀನಿ ಕಣೋ..’ ಹೀಗೆ ಮೃತ ರೌಡಿ  ಬಿಕ್ಲು ಶಿವನಿಗೆ ಮಾಜಿ ಸಚಿವ ಹಾಗೂ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರು ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋವೊಂದು ರಾಜ್ಯ ಅಪರಾಧ ತನಿಖಾ ಇಲಾಖೆ ಗೆ ಲಭಿಸಿದೆ ಎಂದು ತಿಳಿದು ಬಂದಿದೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು : ‘ಲೇ ನಿನ್ನದು ಜಾಸ್ತಿ ಆಯ್ತು, ನಿನಗೆ ಒಂದ್ ಗತಿ ಕಾಣಿಸ್ತೀನಿ ಕಣೋ..’ ಹೀಗೆ ಮೃತ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನಿಗೆ ಮಾಜಿ ಸಚಿವ ಹಾಗೂ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರು ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋವೊಂದು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ಲಭಿಸಿದೆ ಎಂದು ತಿಳಿದು ಬಂದಿದೆ.

ಈ ಹತ್ಯೆ ಪ್ರಕರಣದ ತನಿಖೆಗಿಳಿದ ಸಿಐಡಿ ಅಧಿಕಾರಿಗಳು, ಮೃತ ರೌಡಿ ಬಿಕ್ಲು ಶಿವನ ಮೊಬೈಲ್‌ ಅನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಆಗ ಕಾಲ್‌ ರೆಕಾರ್ಡೆಡ್‌ ಫೋಲ್ಡರ್‌ನಲ್ಲಿ ಶಾಸಕ ಬೈರತಿ ಬಸವರಾಜು ಅವರ ಧ್ವನಿ ಎನ್ನಲಾದ ಆಡಿಯೋ ಸಂಭಾಷಣೆ ಪತ್ತೆಯಾಗಿದೆ. ಇದರಲ್ಲಿ ಬಿಕ್ಲು ಶಿವನಿಗೆ ಶಾಸಕರದ್ದು ಎನ್ನಲಾಗುವ ದನಿಯಲ್ಲಿ ಎಚ್ಚರಿಕೆ ನೀಡುವುದು ಕೇಳಿ ಬಂದಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಈ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೆಣ್ಣೂರು ಜಗದೀಶ್ ಅಲಿಯಾಸ್ ಜಗ್ಗನ ಜತೆ ಕುಂಭಮೇಳ ಯಾತ್ರೆಯ ಪೋಟೋಗಳ ಬಳಿಕ ಬೈರತಿ ಬಸವರಾಜು ಅವರಿಗೆ ಈಗ ಆಡಿಯೋ ಸಹ ಕಂಟಕವಾಗಿದೆ.

ಮಹದೇವಪುರ ಸಮೀಪ ಶಾಸಕ ಬೈರತಿ ಬಸವರಾಜು ಅವರ ಪರಿಚಯಸ್ಥರಿಗೆ ಸೇರಿದ ಭೂಮಿಯನ್ನು ಬಿಕ್ಲು ಶಿವ ಕಬ್ಜ ಮಾಡಿದ್ದ. ಈ ಭೂ ವಿವಾದದಲ್ಲಿ ಮಧ್ಯಪ್ರವೇಶಿಸಿದ ಬಸವರಾಜು ಅವರು, ರೌಡಿ ಬಿಕ್ಲು ಶಿವನ ಮೇಲೆ ಕೋಪಗೊಂಡಿದ್ದರು. ಇದಾದ ನಂತರ ಕೆ.ಆರ್‌.ಪುರ ಸಮೀಪದ ಕಿತ್ತಗನೂರಿನಲ್ಲಿ ಜಮೀನು ವಿಚಾರವಾಗಿ ಶಾಸಕರ ಆಪ್ತ ಹೆಣ್ಣೂರು ಜಗದೀಶ್ ಅಲಿಯಾಸ್ ಜಗ್ಗನ ಜತೆ ಬಿಕ್ಲು ಶಿವನಿಗೆ ವಿವಾದವಾಗಿತ್ತು. ಕೋಟ್ಯಂತರ ರು. ಬೆಲೆಬಾಳುವ ಭೂಮಿ ವಿಚಾರವಾಗಿ ಶಿವ ತಕರಾರು ಮಾಡಿದ್ದು ಶಾಸಕರ ಕಣ್ಣನ್ನು ಕೆಂಪಗಾಗಿಸಿತು. ಆಗಲೇ ಶಿವನಿಗೆ ಕರೆ ಮಾಡಿ ‘ಲೇ ನಿನ್ನದು ಜಾಸ್ತಿ ಆಯ್ತು ನಿನಗೆ ಒಂದು ಗತಿ ಕಾಣಿಸ್ತೀನಿ’ ಎಂದು ಎಚ್ಚರಿಕೆ ಕೊಟ್ಟಿರುವುದಾಗಿ ಎಂದು ತಿಳಿದು ಬಂದಿದೆ.

ಶಾಸಕರ ವಿರುದ್ಧ ಆಯುಕ್ತರಿಗೆ ದೂರು:

ಭೂ ವಿವಾದ ಸಂಬಂಧ ಶಾಸಕ ಬೈರತಿ ಬಸವರಾಜು ಜತೆ ಗಲಾಟೆ ಬಳಿಕ ಭೀತಿಗೊಂಡು ರಕ್ಷಣೆ ಕೋರಿ ಪೊಲೀಸರಿಗೆ ರೌಡಿ ಬಿಕ್ಲು ಶಿವ ಮೊರೆಯಿಟ್ಟಿದ್ದ. ಅಂದು ನಗರ ಪೊಲೀಸ್ ಆಯುಕ್ತರು ಹಾಗೂ ಭಾರತಿನಗರ ಪೊಲೀಸರಿಗೆ ಪ್ರತ್ಯೇಕವಾಗಿ ತನಗೆ ಶಾಸಕ ಬೈರತಿ ಬಸವರಾಜು ಮತ್ತು ಅವರ ಆಪ್ತ ಹೆಣ್ಣೂರು ಜಗದೀಶ್‌ನಿಂದ ಜೀವ ಬೆದರಿಕೆ ಇದೆ ಎಂದು ಆತ ದೂರು ಕೊಟ್ಟಿದ್ದ. ಆದರೆ ಈ ದೂರಿನ ಬಗ್ಗೆ ಭಾರತಿ ನಗರ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಮಾತುಗಳಿವೆ. ಆದರೆ ತಮಗೆ ಸಲ್ಲಿಸಿದ ದೂರಿನ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅವರಿಗೆ ಅಂದಿನ ಆಯುಕ್ತರು ಸೂಚಿಸಿದ್ದರು. ಈ ಬಗ್ಗೆ ವಿಚಾರಣೆಗೆ ಕೆ.ಆರ್‌.ಪುರ ಉಪ ವಿಭಾಗದ ಅಧಿಕಾರಿಗಳಿಗೆ ಡಿಸಿಪಿ ವಹಿಸಿದರು. ಆದರೆ ಪ್ರಾಣ ರಕ್ಷಣೆ ಕೋರಿದ ಶಿವನನ್ನು ಮಾತ್ರ ವಿಚಾರಣೆ ನಡೆಸಿದ ಅಧಿಕಾರಿಗಳು, ಹೆಣ್ಣೂರು ಜಗದೀಶ್ ಅಥವಾ ಶಾಸಕ ಬೈರತಿ ಬಸವರಾಜು ಅವರ ತಂಟೆಗೆ ಹೋಗದೆ ವರದಿ ಕೊಟ್ಟಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ.

ಹೀಗಾಗಿ ಬಿಕ್ಲು ಶಿವನ ಪ್ರಾಣ ಭೀತಿಗೆ ಪೂರಕವಾಗಿ ಆಡಿಯೋವೊಂದು ಪತ್ತೆಯಾಗಿರುವುದು ಹತ್ಯೆ ತನಿಖೆಗೆ ಮಹತ್ವದ ಪುರಾವೆ ಸಿಕ್ಕಂತಾಗಿದೆ.

 ಧ್ವನಿ ಪರೀಕ್ಷೆ ಸಾಧ್ಯತೆ?

ಆಡಿಯೋದಲ್ಲಿ ದನಿ ಸತ್ಯಾಸತ್ಯತೆ ತಿಳಿಯಲು ಶಾಸಕ ಬೈರತಿ ಬಸವರಾಜು ಅವರನ್ನು ಧ್ವನಿ ಪರೀಕ್ಷೆಗೊಳಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಈ ಆಡಿಯೋವು ಮಹತ್ವದ ತಾಂತ್ರಿಕ ಪುರಾವೆಯಾಗಿದೆ. ಹೀಗಾಗಿ ಧ್ವನಿ ಪರೀಕ್ಷೆ ಅತ್ಯಗತ್ಯವಾಗುತ್ತದೆ. ಆದರೆ ಶಾಸಕರ ಪ್ರಾಥಮಿಕ ಹಂತದ ವಿಚಾರಣೆ ಬಳಿಕ ಮುಂದಿನ ಕ್ರಮ ಜರುಗಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.