ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಶ್ರವಣಬೆಳಗೊಳ ಪಟ್ಟಣದ ಸೆಸ್ಕ್ ಕಚೇರಿ ಆವರಣದಲ್ಲಿ ಅಂದಾಜು ೩೧ ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದಾಖಲೆಗಳ ಕೊಠಡಿ ಕಾಮಗಾರಿಯ ಭೂಮಿಪೂಜೆ ನೆರವೇರಿಸುವ ಮೂಲಕ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚನ್ನರಾಯಪಟ್ಟಣ ಹಾಗೂ ಶ್ರವಣಬೆಳಗೊಳಕ್ಕೆ ವಿದ್ಯುತ್ ಯುಜಿ ಕೇಬಲ್ ಅಳವಡಿಕೆ ಮಾಡಲು ಅನುಮೋದನೆಯಾಗಿದ್ದು, ಅತಿ ಶೀಘ್ರದಲ್ಲಿ ಶ್ರವಣಬೆಳಗೊಳಕ್ಕೆ ಮೊದಲ ಆದ್ಯತೆ ನೀಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಹಾಗೂ ರೈತರಿಗೆ ಬೇಸಿಗೆ ಕಾಲದಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ಇನ್ನಿತರೆ ತೊಂದರೆಯಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶ್ರವಣಬೆಳಗೊಳ ಪಟ್ಟಣ ಸೇರಿದಂತೆ ಹೋಬಳಿಯ ಕೆಲವು ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ ನಿರಂತರ ಜ್ಯೋತಿ ವಿದ್ಯುತ್ ವ್ಯವಸ್ಥೆ ಪೂರೈಕೆ ಮಾಡಲಾಗುವುದು ಎಂದು ಹೇಳಿದರು.

ಶ್ರವಣಬೆಳಗೊಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಎಸ್.ಎಂ.ಲಕ್ಷ್ಮಣ್, ಎಸ್. ಆರ್‌. ಲೋಕೇಶ್, ಸದಸ್ಯ ಕೃಷ್ಣಮೂರ್ತಿ, ಕಾಂತರಾಜಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಂದ್ರ, ಮಹೇಶ್ ಬಾಬು, ಗುತ್ತಿಗೆದಾರ ಮಂಜೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಚಲುವರಾಜ್, ಸಹಾಯಕ ಅಭಿಯಂತರ ಚಂದ್ರಶೇಖರ್, ಸೆಸ್ಕ್ ಸಿಬ್ಬಂದಿ ಹರ್ಷ, ಯಲ್ಲಪ್ಪ, ಪ್ರವೀಣ್, ಸುಮಿತ್ರಾ, ಶಿವಲಿಂಗಪ್ಪ ಮುಂತಾದವರಿದ್ದರು.