ಕಂಪ್ಲಿ: ನಾಡಪ್ರಭು ಕೆಂಪೇಗೌಡರು ತಮ್ಮ ಆಡಳಿತದಲ್ಲಿ ಪ್ರಜೆಗಳ ಅಭಿವೃದ್ಧಿ, ಸ್ವಾವಲಂಬನೆ ಮತ್ತು ಸುಭದ್ರ ಆರ್ಥಿಕ ವ್ಯವಸ್ಥೆಗೆ ಆದ್ಯತೆ ನೀಡಿದ್ದರು. ಅವರ ದೂರದೃಷ್ಟಿಯ ಆಡಳಿತ, ಜನಪರ ನೀತಿಗಳು ಹಾಗೂ ಉತ್ತಮ ಆಡಳಿತ ವೈಖರಿ ಇಂದಿಗೂ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಪಟ್ಟಣದ ತಹಸೀಲ್ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಕೇವಲ ನಗರ ನಿರ್ಮಾಪಕರಷ್ಟೇ ಅಲ್ಲ, ಸಮರ್ಥ ಆಡಳಿತಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಕೃಷಿ, ವ್ಯಾಪಾರ, ನೀರಾವರಿ, ಭದ್ರತೆ ಹಾಗೂ ಜನರ ಜೀವನಮಟ್ಟ ಸುಧಾರಣೆಗೆ ಅವರು ಕೈಗೊಂಡ ಕ್ರಮಗಳು ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿವೆ. ಪ್ರಜೆಗಳ ಹಿತಾಸಕ್ತಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಆಡಳಿತ ನಡೆಸಿದ ಅವರು, ನ್ಯಾಯ, ಶಿಸ್ತು ಮತ್ತು ಅಭಿವೃದ್ಧಿಗೆ ಸಮಾನ ಪ್ರಾಮುಖ್ಯತೆ ನೀಡಿದ್ದರು ಎಂದು ಹೇಳಿದರು. ಸರ್ಕಾರ ಮಹನೀಯರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ವಿವಿಧ ಜಯಂತ್ಯುತ್ಸವಗಳನ್ನು ಆಚರಿಸುತ್ತಿದೆ. ಸರ್ಕಾರಿ ಶಾಲೆಗಳು, ಕಾಲೇಜುಗಳು ಹಾಗೂ ಕಚೇರಿಗಳಲ್ಲಿ ಸರ್ಕಾರ ಸೂಚಿಸಿರುವ ಎಲ್ಲ ಮಹನೀಯರ ಜಯಂತ್ಯುತ್ಸವಗಳನ್ನು ಕಡ್ಡಾಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು. ಆಯಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವರ ಕರ್ತವ್ಯವಾಗಿದೆ ಎಂದು ಹೇಳಿದರು.ತಹಸೀಲ್ ಕಚೇರಿಯಲ್ಲಿ ನಡೆದ ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಗೈರಾಗಿದ್ದ ತಹಸೀಲ್ ಹಾಗೂ ನಾಡಕಚೇರಿ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಹಸೀಲ್ದಾರ್ ಸೂಚನೆ ನೀಡಿದರು. ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ನಿರ್ಲಕ್ಷ್ಯ ತೋರದೆ ಎಲ್ಲರೂ ಜವಾಬ್ದಾರಿಯಿಂದ ಪಾಲ್ಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಕಂದಾಯ ಇಲಾಖೆಯ ಸಿಬ್ಬಂದಿ ಮಾಲತೇಶ ದೇಶಪಾಂಡೆ, ಲಕ್ಷ್ಮಣನಾಯ್ಕ, ಕೆ. ರಾಘವೇಂದ್ರ, ನೀಲಕಂಠ, ಎಸ್. ರಾಘು, ರಮೇಶ್, ಯಂಕಪ್ಪ ಉಪಸ್ಥಿತರಿದ್ದರು.