ಸಾರಾಂಶ
ರಬಕವಿ-ಬನಹಟ್ಟಿ: ಜೀವನದ ಮೌಲ್ಯಗಳನ್ನು ಬದುಕಿ ತೋರಿದ ವೈದ್ಯವಿಜ್ಞಾನಿ ಲಿಂಗೈಕ್ಯ ಡಾ.ಸ.ಜ.ನಾಗಲೋಟಿಮಠ ಅವರು ಸರಳ, ಸಜ್ಜನಿಕೆಗೆ ಹೆಸರಾಗಿದ್ದರು. ಅತ್ಯುತ್ತಮ ವೈದ್ಯ ಸಾಹಿತಿಯಾಗಿಯೂ ಸಾರಸ್ವತ ಲೋಕದ ಅಗ್ರಮಾನ್ಯರೆನಿಸಿಕೊಂಡಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಅವರದು ಶಾಶ್ವತ ಸ್ಥಾನ ಪಡೆದ ಅವರ ನಿರಾಡಂಬರ ಜೀವನ ನಮಗೆಲ್ಲಾ ಪ್ರೇರಣೆಯಾಗಿದೆ ಎಂದು ಹಿರಿಯ ಸಾಹಿತಿ ಬನಹಟ್ಟಿ ಜಯವಂತ ಕಾಡದೇವರ ಬಣ್ಣಿಸಿದರು.
ರಾಮಪುರದ ಶ್ರೀಮಹಾದೇವಪ್ಪ ಪರಪ್ಪ ಬಿಳ್ಳೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ರಬಕವಿ-ಬನಹಟ್ಟಿ, ವಲಯ ಘಟಕ ತೇರದಾಳ, ಮಹಾಲಿಂಗಪುರ ಅವರ ಆಶ್ರಯದಲ್ಲಿ ವೈದ್ಯ ಸದಾಶಿವ ಲಿಂಗೈಕ್ಯ ಡಾ.ಸ.ಜ.ನಾಗಲೋಟಿಮಠ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಸ.ಜ.ನಾಗಲೋಟಿಮಠ ಅವರ ಜೀವನ ಸಾಧನೆ ಕುರಿತು ಮಾತನಾಡಿ ಶಾಲಾ ಮಕ್ಕಳು ಸಾಧಕರ ಜೀವನವನ್ನು ಅರಿಯಬೇಕು. ಸಾಧನೆಯತ್ತ ಸಾಗಿ, ಅತ್ಯುನ್ನತ ಸಾಧನೆ ಮಾಡಬೇಕು ಎಂದರು.ಭೂದಾನಿ ಪರಪ್ಪ ಮ. ಬಿಳ್ಳೂರ ಅಧ್ಯಕ್ಷತೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಮಹೇಶ ಘಾಟಗೆ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ಮ.ಕೃ.ಮೇಗಾಡಿ ಪ್ರಾಸ್ತಾವಿಕ ಮಾತುಗಳಾಡಿದರು. ಹಿರಿಯರಾದ ಬಸವಪ್ರಭು ಹಟ್ಟಿ, ತೇರದಾಳ ವಲಯ ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ, ಈರಣ್ಣ ಗಣಮುಖಿ, ಅಪ್ಪಾಸಾಬ ತುಬಚಿ, ಎನ್.ಜಿ.ಅರಳಿಕಟ್ಟಿ ಪಾಲ್ಗೊಂಡಿದ್ದರು. ಕಸಾಪ ಗೌರವ ಕಾರ್ಯದರ್ಶಿ ಶ್ರೀಶೈಲ ಬುರ್ಲಿ ಮಾತನಾಡಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಎ.ಎ.ಮೋಮಿನ್ ಸ್ವಾಗತಿಸಿದರು. ನಜೀರ್‌ಅಹ್ಮದ್ ಆರ್. ನಿರೂಪಿಸಿದರು. ಶಿಕ್ಷಕಿ ಗೀತಾ ಫಕೀರಪುರ ವಂದಿಸಿದರು.