ಸಾರಾಂಶ
ಸಿ.ಸಿದ್ದರಾಜು, ಮಾದಹಳ್ಳಿ
ಕನ್ನಡಪ್ರಭ ವಾರ್ತೆ ಮಳವಳ್ಳಿಪಟ್ಟಣದ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಸೆ.4ರಂದು ಚುನಾವಣೆ ನಡೆಯಲಿದೆ. ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್- ಜೆಡಿಎಸ್ ಪಕ್ಷಗಳಿಗೆ ಪಕ್ಷೇತರ ಸದಸ್ಯರು ಕೈಗೊಳ್ಳುವ ತೀರ್ಮಾನವೇ ನಿರ್ಣಾಯಕವಾಗಿದೆ.
ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗಧಿಯಾಗಿದೆ. ಅಧಿಕಾರ ಹಿಡಿಯಲು ಕಾಂಗ್ರೆಸ್- ಜೆಡಿಎಸ್ ಸದಸ್ಯರ ನಡುವೆ ತೀವ್ರ ಪೈಪೊಟಿ ಎದುರಾಗಿದೆ. ಇದರ ಜೊತೆಗೆ ಪಕ್ಷೇತರ ಸದಸ್ಯರೇ ಅಧಿಕಾರಕ್ಕೇರಲು ಹೋರಾಟ ನಡೆಸುತ್ತಿದ್ದಾರೆ.23 ಸದಸ್ಯರ ಬಲದ ಪುರಸಭೆಯಲ್ಲಿ ಜೆಡಿಎಸ್ 9, ಕಾಂಗ್ರೆಸ್ 5, ಬಿಜೆಪಿ 2 ಹಾಗೂ 7 ಮಂದಿ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಕಾಂಗ್ರೆಸ್‌ನ ಹಿರಿಯ ಸದಸ್ಯ ಎಂ.ಆರ್.ರಾಜಶೇಖರ್, ಜೆಡಿಎಸ್ ಸಿದ್ದರಾಜು, ಕುಮಾರ್ ಹಾಗೂ ಪಕ್ಷೇತರ ಸದಸ್ಯರಾದ ಪುಟ್ಟಸ್ವಾಮಿ, ಪ್ರಮೀಳಾ, ಸವಿತಾ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದರಲ್ಲಿ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಸಹ ಪ್ರಬಲ ಅಕಾಂಕ್ಷಿಯಾಗಿದ್ದಾರೆ.
ಬಿಜೆಪಿ ಮುಖಂಡ ಮುನಿರಾಜು ಬೆಂಬಲಿಗ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಜೆಡಿಎಸ್ ಬೆಂಬಲದಿಂದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ. ಇವರು ಐದು ಮಂದಿ ಸದಸ್ಯರೊಂದಿಗೆ ಈಗಾಗಲೇ ಮಡಿಕೇರಿಗೆ ಪ್ರವಾಸ ಕೈಗೊಂಡಿದ್ದಾರೆ. ಪಕ್ಷೇತರ ಸದಸ್ಯನಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹಾಗೂ ಸ್ಥಾಯಿ ಸಮಿತಿಗೆ ಜೆಡಿಎಸ್‌ಗೆ ಅಧಿಕಾರ ನೀಡಲು ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ.ಆದರೆ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಅಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಸದಸ್ಯ ಸಿದ್ದರಾಜು ಅವರಿಗೆ ಅಧಿಕಾರ ಕೊಡಿಸಲು ಮುಂದಾಗಿದ್ದಾರೆ. ಅಲ್ಲದೇ, ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಪಕ್ಷೇತರ ಸದಸ್ಯರಿಗೆ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಈ ಸೂತ್ರಕ್ಕೆ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರು ಒಪ್ಪುವರೇ ಎಂಬುದೇ ಕುತುಹಲದ ಪ್ರಶ್ನೆಯಾಗಿದೆ.
ಜೆಡಿಎಸ್‌ಗೆ ಅಧಿಕಾರ ತಪ್ಪಿಸುವರೇ ಶಾಸಕರು:ಕಳೆದ 2023ರ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್‌ನ ಒಂದೆರಡು ಸದಸ್ಯರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಅಲ್ಲದೇ, 7 ಮಂದಿ ಪಕ್ಷೇತರ ಸದಸ್ಯರಲ್ಲಿ ಕೆಲ ಸದಸ್ಯರು ಕಾಂಗ್ರೆಸ್ ಪರ, ಇನ್ನೂ ಕೆಲವರು ಜೆಡಿಎಸ್ ನೊಂದಿಗೆ ಗುರುತಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿರುವುದರಿಂದ ಕೆಲ ಅಸಮಾಧಾನಿತ ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರನ್ನು ಕಾಂಗ್ರೆಸ್‌ಗೆ ಸೆಳೆದು ಪುರಸಭೆ ಅಧಿಕಾರ ಹಿಡಿಯಲು ಮುಂದಾಗಿರುವ ಜೆಡಿಎಸ್‌ಗೆ ಪಿ.ಎಂ.ನರೇಂದ್ರಸ್ವಾಮಿ ಟಾಂಗ್ ನೀಡಲು ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಸೇರಿ ಪುರಸಭೆ ಅಧಿಕಾರ ಹಿಡಿಯುತ್ತಾರೆ ಎಂದು ಮೇಲ್ನೊಟ್ಟಕ್ಕೆ ಕಂಡು ಬಂದರೂ ಜೆಡಿಎಸ್‌ನಿಂದ ಸಿದ್ದರಾಜು, ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೊಟಿ ಎದುರಾಗಿದೆ. ಇಬ್ಬರಲ್ಲಿ ಯಾರು ಯಾರಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುತ್ತಾರೆ ಎಂಬ ತೀರ್ಮಾನದಲ್ಲಿ ಅಸಮಾಧಾನಿತ ಸದಸ್ಯರ ನಿರ್ಧಾರ ಗೊತ್ತಾಗುತ್ತದೆ.ಒಂದು ವೇಳೆ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎಂಬಂತೆ ಅಸಮಧಾನಿತರನ್ನು ಸೆಳೆದು ಕಾಂಗ್ರೆಸ್ ಸದಸ್ಯ ರಾಜಶೇಖರ್ ಅಧಿಕಾರ ಹಿಡಿಯುತ್ತಾರೆ ಎನ್ನುವುದನ್ನು ಕಡೆಗಣಿಸುವಂತಿಲ್ಲ.
ಮೊದಲ ಅವಧಿಯಲ್ಲಿ ಕ್ಷೇತ್ರದಲ್ಲಿ ಡಾ.ಕೆ.ಅನ್ನದಾನಿ ಶಾಸಕರಾಗಿದ್ದರು. ಪಕ್ಷೇತರರು, ಬಿಜೆಪಿ ಬೆಂಬಲದೊಂದಿಗೆ ಜೆಡಿಎಸ್ ಅಧಿಕಾರ ಹಿಡಿದಿತ್ತು. ಅಧ್ಯಕ್ಷರಾಗಿ ರಾಧಾ ನಾಗರಾಜು ಹಾಗೂ ಉಪಾಧ್ಯಕ್ಷರಾಗಿ ಟಿ.ನಂದಕುಮಾರ್ ಹಾಗೂ ಎಂ.ಟಿ ಪ್ರಶಾಂತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪಿ.ಎಂ.ನರೇಂದ್ರಸ್ವಾಮಿ ಶಾಸಕರಾಗಿದ್ದಾರೆ. ಪುರಸಭೆಯಲ್ಲಿ 2ನೇ ಅವಧಿಗೆ ಅಧ್ಯಕ್ಷ - ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಪಕ್ಷೇತರ ಸದಸ್ಯರೇ ನಿರ್ಣಾಯಕವಾಗಿದ್ದು, ಜೆಡಿಎಸ್- ಕಾಂಗ್ರೆಸ್ ಅಥವಾ ಪಕ್ಷೇತರ ಸದಸ್ಯರು ಇವರೇ ನಿರ್ದಿಷ್ಟವಾಗಿ ಅಧಿಕಾರ ಹಿಡಿಯುತ್ತಾರೆ ಎಂದು ಹೇಳಲಾಗದು. ಚುನಾವಣೆಗೆ ಇನ್ನು ಎರಡು ದಿನ ಕಾಲಾವಕಾಶವಿದೆ. ಅಲ್ಲಿಯವರೆಗೆ ಕುತೂಹಲದಿಂದ ಕಾಯಬೇಕಿದೆ.