ಹೋರಾಟ ರೂಪಿಸುವ ಮಂಡ್ಯದ ಮಣ್ಣಿನಲ್ಲಿ ವಿಶೇಷ ಗುಣವಿದೆ : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

| Published : Sep 02 2024, 02:10 AM IST / Updated: Sep 02 2024, 01:18 PM IST

ಹೋರಾಟ ರೂಪಿಸುವ ಮಂಡ್ಯದ ಮಣ್ಣಿನಲ್ಲಿ ವಿಶೇಷ ಗುಣವಿದೆ : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಅಂದರೆ ಇಂಡಿಯಾ ಅನ್ನುತ್ತಾರೆ. ಇಲ್ಲಿನ ಹೋರಾಟಗಳಲ್ಲಿ ಅಷ್ಟೊಂದು ಶಕ್ತಿ ಇದೆ. ಹೋರಾಟದಲ್ಲಿ ಸಿಗುವ ಸುಖ ಅಧಿಕಾರದಲ್ಲಿರುವಾಗ ಸಿಗುವುದಿಲ್ಲ. ನಾನು ಕೂಡ ನಮ್ಮ ಭಾಗದಲ್ಲಿ ನೀರಿಗಾಗಿ ಹೋರಾಟ ಮಾಡಿಕೊಂಡು ಬಂದವನೇ ಆದ್ದರಿಂದ ಇದು ನನ್ನ ಸ್ವಂತ ಅನಿಸಿಕೆ.

 ಮಂಡ್ಯ :  ನಾಡು, ನುಡಿ, ಗಡಿ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸುವ ಮಂಡ್ಯದ ಮಣ್ಣಿನಲ್ಲಿ ವಿಶೇಷ ಗುಣವಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಕರ್ನಾಟಕ ಸಂಘದಲ್ಲಿ ಜನದನಿ ಸಾಂಸ್ಕೃತಿಕ ಟ್ರಸ್ಟ್, ಕರ್ನಾಟಕ ಸಂಘದ ಜೊತೆಗೂಡಿ ಕೊಡಮಾಡುವ 27ನೇ ವರ್ಷದ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ, ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಮತ್ತು ಎಚ್.ಶಾರದಮ್ಮ ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಹೋರಾಟದ ಮನೋಭಾವನೆಯನ್ನು ಇಂದಿಗೂ ಜೀವಂತವಾಗಿರಿಸಿಕೊಂಡು ಬಂದಿರುವ ಇಲ್ಲಿನ ಜನರಲ್ಲಿ ಸ್ವಾರ್ಥದ ಪ್ರತೀಕವಿಲ್ಲ ಬದಲಿಗೆ ಪ್ರೀತಿಯ ಪ್ರತೀಕವಿದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಕರ್ನಾಟಕ ಏಕೀಕರಣದವರೆಗೂ ಮಂಡ್ಯದ ಹೋರಾಟದ ಕೊಡುಗೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ ಎಂದರು.

ಮಂಡ್ಯ ಅಂದರೆ ಇಂಡಿಯಾ ಅನ್ನುತ್ತಾರೆ. ಇಲ್ಲಿನ ಹೋರಾಟಗಳಲ್ಲಿ ಅಷ್ಟೊಂದು ಶಕ್ತಿ ಇದೆ. ಹೋರಾಟದಲ್ಲಿ ಸಿಗುವ ಸುಖ ಅಧಿಕಾರದಲ್ಲಿರುವಾಗ ಸಿಗುವುದಿಲ್ಲ. ನಾನು ಕೂಡ ನಮ್ಮ ಭಾಗದಲ್ಲಿ ನೀರಿಗಾಗಿ ಹೋರಾಟ ಮಾಡಿಕೊಂಡು ಬಂದವನೇ ಆದ್ದರಿಂದ ಇದು ನನ್ನ ಸ್ವಂತ ಅನಿಸಿಕೆ ಎಂದರು.

ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಕೆಆರ್‌ಎಸ್ ಆಣೆಕಟ್ಟೆಯಲ್ಲಿ ನೀರು ಸೋರಿಕೆಯಾಗುತ್ತಿದ್ದನ್ನು ಗಮನಿಸಿದೆ. ಗೋಣಿ ಚೀಲಗಳನ್ನು ಅಡ್ಡಲಾಗಿ ಇರಿಸಲಾಗಿತ್ತು. ಇದರಿಂದ ಸಾಕಷ್ಟು ನೀರು ಸೋರಿಕೆಯಾಗುತ್ತಿತ್ತು. ಒಂದು ಹನಿ ನೀರಿಗಾಗಿ ನಾವು ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ಮಾಡುತ್ತೇವೆ. ಇಲ್ಲಿ ಇಷ್ಟು ಪ್ರಮಾಣದ ನೀರು ಸೋರಿಕೆಯಾಗುತ್ತಿದೆಯಲ್ಲ ಎಂದು ಮನಗಂಡು 16 ಗೇಟ್‌ಗಳನ್ನು ಆಧುನೀಕರಗೊಳಿಸಿದೆ. ನಾನು ಮಾಡಿಸಿದ್ದು ಅನ್ನುವುದಕ್ಕಿಂದ ನನ್ನ ಕರ್ತವ್ಯವಾಗಿತ್ತು ಎಂದರು.

ಮಂಡ್ಯ ಮೋರ್ ದೆನ್ ಇಂಡಿಯಾ ಆಗಬೇಕಾದರೆ ಶಿಕ್ಷಣ ಬಹಳ ಮುಖ್ಯ. ಇದನ್ನು ಸರ್ಕಾರ ಸಮಾಜ ಎಲ್ಲವೂ ಸೇರಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಅವರ ಶಿಕ್ಷಣಕ್ಕೆ ಆದ್ಯತೆ ಕೊಡಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಅವರಿಗೆ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಹಾಗೂ ಮೈಸೂರು ವಿವಿ ಕುಲ ಸಚಿವರಾದ ವಿ.ಆರ್.ಶೈಲಜಾ ಅವರಿಗೆ ದೇವಮ್ಮ ಇಂಡುವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾದೇಗೌಡನಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು.ಎಂ.ಆರ್.ದೀಪಿಕಾ ಹಾಗೂ ಇಂಡುವಾಳು ಸರ್ಕಾರಿ ಪೌಢಶಾಲೆ ವಿದ್ಯಾರ್ಥಿ ಐ.ವಿ.ಚರಣ್, ಕೊತ್ತತ್ತಿ ಸ್ನೇಹ, ಪಿ.ಜೆ.ಮಾದೇಶ ಅವರಿಗೆ ಪ್ರತಿಭಾ ಪರುಸ್ಕಾರ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜುಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಡಾ.ಸಿದ್ದರಾಮಯ್ಯ ಹಾಗೂ ಡಾ.ಎಚ್.ಸಿದ್ದಪ್ಪ ಭಾಗವಹಿಸಿದ್ದರು.

ರೈತರು ಉಳಿದರೆ ಮಾತ್ರ ದೇಶ ಸಮೃದ್ಧ: ಬಸವರಾಜ ಬೊಮ್ಮಾಯಿ

ಮಂಡ್ಯ:

ರೈತರು ಉಳಿದರೆ ಮಾತ್ರ ಈ ದೇಶ ಸಮೃದ್ಧವಾಗಿರಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಆಳುವವರು ಆಡಳಿತ ನಡೆಸುತ್ತಿದ್ದಾರೆ. ಆಡಳಿತ ನಡೆಸುವವರು ಆಳುವವರ ಬಾಲಗೊಂಚಿಗಳಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಪ್ರಜಾಪ್ರಭುತ್ವ ಗಟ್ಟಿಯಾಗಲು ನಮ್ಮ ಕೆಲಸವನ್ನು ನಾವು ಶ್ರದ್ಧೆಯಿಂದ ಮಾಡಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ. ನಾಡಿನ ರೈತರು ಭೂಮಿತಾಯಿಗೆ ಬೆವರು ಹರಿಸಿ ಬಂಗಾರದ ಬೆಳೆ ಬೆಳೆಯುತ್ತಾರೆ. ಅಂತಹವರ ಜೀವನ ಸದಾ ಹಸಿರಾಗಿರಬೇಕು ಎಂದರು.

ಒಂದು ಕಾಲದಲ್ಲಿ ಯಾರಿಗೆ ಜಮೀನಿತ್ತೋ ಅವರು ರಾಜ್ಯವನ್ನಾಳುತ್ತಿದ್ದರು. 16-17ನೇ ಶತಮಾನದಲ್ಲಿ ಯಾರ ಬಳಿ ಹಣವಿತ್ತೋ ಅವರು ಆಡಳಿತ ನಡೆಸುತ್ತಿದ್ದರು. ಆದರೆ, 21ನೇ ಶತಮಾನದಲ್ಲಿ ಜಮೀನಿದ್ದವರು ಅಲ್ಲ. ಹಣವಿದ್ದವರೂ ಅಲ್ಲ. ಜ್ಞಾನದ ಶಕ್ತಿ ಇರುವವರು ಮಾತ್ರ ಜಗತ್ತನ್ನು ಆಳುತ್ತಾರೆ. ಜ್ಞಾನ ಇವತ್ತು ಮಹತ್ವ ಪಡೆಯುತ್ತಿದೆ ಎಂದರು.

ಇಂದು ಭೂಮಿ ಎಷ್ಟಿದೆ ಅಷ್ಟೆ ಇದೆ. ಭೂಮಿ ಅವಲಂಬಿತ ರೈತರು ಹೆಚ್ಚಾಗಿದ್ದಾರೆ. 20 ವರ್ಷದ ಹಿಂದೆ 10 ಎಕರೆ ಇದ್ದರೆ ಈಗ ಮಕ್ಕಳು ಮೊಮ್ಮಕ್ಕಳಿಗೆ ಒಂದೊಂದು ಎಕರೆ ಇಟ್ಟುಕೊಂಡು ಬದುಕು ರೂಪಿಸಿಕೊಳ್ಳುವಂತಾಗಿದೆ ಎಂದು ವಿಶ್ಲೇಷಿಸಿದರು.