ಸಾರಾಂಶ
ದತ್ತಿ ಉಪನ್ಯಾಸ । ಅರಕಲವಾಡಿ ಸರ್ಕಾರಿ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್ತಿಂದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಾಮರಾಜನಗರಸುತ್ತೂರು ಶ್ರೀಮಠದ ಪೀಠಾಧಿಪತಿಯಾಗಿದ್ದ ಶಿವರಾತ್ರಿ ರಾಜೇಂದ್ರ ಶ್ರೀಗಳು ನಾಡಿನಾದ್ಯಂತ ನೂರಾರು ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸಿ, ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ವಿನಯ್ ತಿಳಿಸಿದರು.
ತಾಲೂಕಿನ ಅರಕಲವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ ಸಂಸ್ಥಾಪಕರ ದಿನಾಚರಣೆ ಹಾಗೂ ದತ್ತಿ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸ ನೀಡಿ, ರಾಜೇಂದ್ರ ಶ್ರೀಗಳು ಶಿಕ್ಷಣದ ಮಹತ್ವವನ್ನು ಅರಿತಿದ್ದರು. ಶಾಲಾ-ಕಾಲೇಜುಗಳನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ಜಾತಿ-ಧರ್ಮಗಳ ಭೇದವಿಲ್ಲದೆ ಸಹಾಯ ಮಾಡಿದರು ಎಂದು ಹೇಳಿದರು.ಉತ್ತಮ ಆರೋಗ್ಯ ಸೇವೆ ನೀಡಲು ಆಸ್ಪತ್ರಗಳ ನಿರ್ಮಾಣ, ಶರಣ ಸಾಹಿತ್ಯದ ಪ್ರಚಾರ-ಪ್ರಸಾರಕ್ಕಾಗಿ ಶರಣ ಸಾಹಿತ್ಯ ಪರಿಷತ್ತು, ಪುಸ್ತಕ ಪ್ರಕಟಣೆಗಾಗಿ ಗ್ರಂಥಮಾಲೆ, ಸಹಕಾರ ಸಂಘಗಳು, ಸಂಗೀತ ಸಭಾ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜದ ಎಲ್ಲ ವರ್ಗಗಳ ಏಳ್ಗೆಗೆ ಶ್ರಮಿಸಿದರು. ಬಡತನದ ಕಾಲದಲ್ಲಿ ತಮ್ಮ ಚಿನ್ನದ ಕರಡಿಗೆ, ರುದ್ರಾಕ್ಷಿಯ ಚಿನ್ನದ ಕವಚಗಳನ್ನು ಮಾರಾಟ ಮಾಡಿ, ಪಡಿತರ ಒದಗಿಸಿದರು. ವಿದ್ಯಾರ್ಥಿಗಳಿಗೆ ನಡು ರಾತ್ರಿಯಲ್ಲೂ ಆಹಾರ ಒದಗಿಸಿದ ಮಾತೃ ಹೃದಯಿಗಳು ಶ್ರೀ ರಾಜೇಂದ್ರ ಶ್ರಿಗಳು ಎಂದು ಶ್ರೀಗಳ ಸೇವೆ ಸ್ಮರಿಸಿದರು.
ಶ್ರೀಗಳಿಗೆ ಶರಣ ಸಾಹಿತ್ಯ, ವಚನ ಸಾಹಿತ್ಯದ ಕುರಿತು ಅಪಾರ ಅಭಿಮಾನವಿತ್ತು. ಶರಣರು ಅಚ್ಚಕನ್ನಡದ ಬೇಸಾಯಗಾರರು. ಭಗವಂತನನ್ನು ಭಕ್ತರ ಕೈಗೆಟುಕಿಸಿದವರು. ಮಹಿಳಾ ಸಮಾನತೆ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದವರು. ಕಾಯಕ-ದಾಸೋಹದ ಮಹತ್ವ ಸಾರಿದವರು. ಪ್ರಜಾಪ್ರಭುತ್ವದ ಬೀಜವನ್ನು ಈ ನೆಲದಲ್ಲಿ ಬಿತ್ತಿದ ಪ್ರಥಮರು. ವಿಶ್ವದ ಮೊದಲ ಸಂಸತ್ತನ್ನು ಸ್ಥಾಪಿಸಿದವರು. ಶ್ರಮಿಕರೆಲ್ಲ ಸೇರಿ ತಮ್ಮ ಅನುಭವವನ್ನು ಅನುಭಾವವಾಗಿಸಿ ವಚನ ಸಾಹಿತ್ಯವನ್ನು ರಚಿಸಿದರು. ಇಂದಿಗೂ ಪ್ರಸ್ತುತವಾಗಿದ್ದಾರೆ. ಸರಳವಾದ ಭಾಷೆಯಲ್ಲಿರುವುದರಿಂದ ಯಾರದೇ ಸಹಾಯವಿಲ್ಲದೆ ಓದಿ ಅರ್ಥೈಸಿಕೊಳ್ಳಬಹುದು. ಅವುಗಳನ್ನು ಅಧ್ಯಯನ ಮಾಡಿ ವಚನಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಆಶಯದೊಂದಿಗೆ ರಾಜೇಂದ್ರ ಶ್ರೀಗಳು ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡಿದ್ದರು. ಹೀಗಾಗಿ ಅವರ ಜನ್ಮ ದಿನಾಚರಣೆಯನ್ನು ಸಂಸ್ಥಾಪಕರ ದಿನವಾಗಿ ಆಚರಿಸಲಾಗುತ್ತಿದೆ ಎಂದರು.ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಚನಕಾರರ ಪರಿಚಯ ಮಾಡಿಕೊಟ್ಟರು. ದತ್ತಿ ದಾಸೋಹಿಗಳಾದ ಕಿಲಗೆರೆ ರತ್ನಮ್ಮ ಮತ್ತು ಬಸವರಾಜು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಾಗರಾಜು ವಹಿಸಿದ್ದರು. ಕಸಾಪ ಮಾಜಿ ಅಧ್ಯಕ್ಷ ಎ.ಎಂ.ನಾಗಮಲ್ಲಪ್ಪ, ಶಸಾಪದ ಪ್ರಧಾನ ಕಾರ್ಯದರ್ಶಿ ಬಿ.ಕೆ.ರವಿಕುಮಾರ್, ಶಸಾಪ ತಾಲೂಕು ಅಧ್ಯಕ್ಷ ಆರ್.ಎಸ್.ಲಿಂಗರಾಜು, ನಗರ ಘಟಕದ ಅಧ್ಯಕ್ಷ ಎಂ. ಸುಂದರ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.