ನೆಮ್ಮೆಲೆ ಗ್ರಾಮದ ಶ್ರೀ ದುರ್ಗಿ ದೇವಿಯ ವಾರ್ಷಿಕ ಉತ್ಸವ ಹಾಗೂ ಪುತ್ತರಿ ನಮ್ಮೆ ವಿಜೃಂಭಣೆಯಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಶೇಷ ಪೌರಾಣಿಕ ಹಿನ್ನೆಲೆಯೊಂದಿಗೆ ಪ್ರಸಿದ್ಧಿ ಪಡೆದಿರುವ ನೆಮ್ಮಲೆ ಗ್ರಾಮದ ಶ್ರೀದುರ್ಗಿ ದೇವಿಯ ವಾರ್ಷಿಕ ಉತ್ಸವ ಹಾಗೂ ಪುತ್ತರಿ ನಮ್ಮೆ ವಿಜ್ರಂಭಣೆಯಿಂದ ಹಾಗೂ ಶ್ರದ್ಧಾ ಭಕ್ತಿಯಿಂದ ಜರುಗಿತು. 2ರಂದು ಮಂಗಳವಾರ ಕೊಡಿಮರ ನಿಲ್ಲಿಸುವುದರೊಂದಿಗೆ ಆರಂಭವಾದ ಹಬ್ಬವು 3ರಂದು ನೆರ್ಪು ಹಾಗೂ 4ರಂದು ದೇವರ ಅವಭೃತ ಸ್ನಾನ ಹಾಗೂ ಪುತ್ತರಿ ಕದಿರು ಕೊಯ್ಯುವುದು ಹಾಗೂ ದೇವರ ಅಲಂಕೃತ ವಿಗ್ರಹ ದರ್ಶನ ಹಾಗೂ ನೃತ್ಯದೊಂದಿಗೆ ಸಮಾಪ್ತಿಯಾಯಿತು.ಊರಿನ ತಕ್ಕ ಮುಖ್ಯಸ್ಥರಾದ ಚೆಟ್ಟಂಗಡ ಹ್ಯಾರಿ ನಾಣಯ್ಯ, ಅರ್ಚಕರಾದ ಡಿ.ಪಿ. ಜಯಂತ, ಡಿ.ಪಿ.ಜಯಚಂದ್ರ, ಊರಿನ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಕುಂಞಂಗಡ ಕೃಷ್ಣ ಭೀಮಯ್ಯ ಹಾಗೂ ಆಡಳಿತ ಮಂಡಳಿಯವರ ಮುಂದಾಳತ್ವದಲ್ಲಿ ನಡೆದ ಉತ್ಸವದಲ್ಲಿ ಗುರುವಾರ ಅಪರಾಹ್ನ ವಿವಿಧ ವಿಧಿ ವಿಧಾನ ಹಾಗೂ ಪೂಜಾ ಕೈಂಕರ್ಯಗಳು ನಡೆದು ಸಂಜೆ 7 ಗಂಟೆಗೆ ದೇವರ ದರ್ಶನ ಹಾಗೂ ನೃತ್ಯ ಪ್ರದರ್ಶನ 8 ಗಂಟೆಗೆ ದೇವರ ಅವಭೃತ ಸ್ನಾನ, 9-15ಕ್ಕೆ ದೇವರ ಕದಿರು ಕೊಯ್ಯುವುದು, ದೇವಸ್ಥಾನದ ನೃತ್ಯ ಪ್ರದಕ್ಷಿಣೆ, ವಸಂತಪೂಜೆಯೊಂದಿಗೆ ನಮ್ಮೆ ಶ್ರದ್ಧಾ ಭಕ್ತಿಯಿಂದ ಜರುಗಿತು. ನೂರಾರು ಸಂಖ್ಯೆಯಲ್ಲಿ ಸೇರಿದ ಭಕ್ತಾಧಿಗಳು ಹಬ್ಬದ ಆಚರಣೆಯನ್ನು ಕಣ್ತುಂಬಿಕೊಳ್ಳುವುದರೊಂದಿಗೆ ದೇವಿಯ ಆಶೀರ್ವಾದ ಪಡೆದುಕೊಂಡರು.