ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಅಗತ್ಯವಿದ್ದಷ್ಟು ಬಳಕೆ ಮಾಡಬೇಕು
ಕುಷ್ಟಗಿ: ಇತ್ತೀಚೆಗೆ ಯುವಕರು ಜವಾಬ್ದಾರಿ ಅರಿತುಕೊಳ್ಳದೇ ಕೇವಲ ಮೋಜು ಮಸ್ತಿಗಾಗಿ ಅನೇಕ ರೀತಿಯ ಅಪರಾಧಗಳಲ್ಲಿ ಭಾಗವಹಿಸುತ್ತಿರುವುದು ವಿಪರ್ಯಾಸದ ಸಂಗತಿ, ಮೊಬೈಲ್ ಅನ್ಯ ಕೆಲಸಕ್ಕೆ ಬಳಸದೇ ಜ್ಞಾನಾರ್ಜನೆ, ಉತ್ತಮ ಕಾರ್ಯಗಳಿಗೆ ಮಾತ್ರ ಬಳಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್ ಮಂಜುನಾಥ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ, ವಕೀಲರ ಸಂಘ ಹಾಗೂ ಶಾಲಾ ಕಾಲೇಜುಗಳ ಸಹಯೋಗದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ, ಅಪರಾಧ ತಡೆ ಮಾಸಾಚಾರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಅಗತ್ಯವಿದ್ದಷ್ಟು ಬಳಕೆ ಮಾಡಬೇಕು, ಅನವಶ್ಯಕ ಸಂದೇಶ ರವಾನೆ ಮಾಡಬಾರದು, ಮೊಬೈಲ್ ನಲ್ಲಿ ಮಾಡುವ ಎಲ್ಲ ಚಟುವಟಿಕೆಗಳು ಸೈಬರ್ ಕ್ರೈಂ ಅವರಿಗೆ ಗೊತ್ತಾಗಲಿದ್ದು ಅನವಶ್ಯಕ ಬಳಕೆ ಮಾಡಬಾರದು ಎಂದು ತಿಳಿಸಿದರು.
ಜೀವನದಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಉತ್ತಮ ಶಿಕ್ಷಣ ಪಡೆಯಬೇಕು, ನಿಮ್ಮ ಗಮನ ಶಿಕ್ಷಣದ ಕಡೆ ಮಾತ್ರ ಇರಬೇಕು ಅನ್ಯ ವಿಷಯದ ಕಡೆ ಗಮನ ಕೊಡುವ ಮೂಲಕ ಜೀವನ ಕತ್ತಲೆ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್.ಪೂಜೇರಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದ್ದು, ಪ್ರತಿಯೊಬ್ಬರು ಕಾನೂನು ಹಕ್ಕು ಮತ್ತು ಕರ್ತವ್ಯ ಪಾಲನೆ ಮಾಡಬೇಕು ಎಂದ ಅವರು, ಅಪ್ರಾಪ್ತರು ವಾಹನ ಚಾಲನೆ ಮಾಡಬಾರದು ಅತಿ ಹೆಚ್ಚು ಸೌಂಡ್ ಬರುವಂತಹ ವಾಹನ ಓಡಿಸಬಾರದು ಇದರಿಂದ ಶಬ್ದ ಮಾಲಿನ್ಯ ಉಂಟಾಗುವದರ ಜತೆಗೆ ಆಕಸ್ಮಿಕ ಅಪಘಾತ ಉಂಟಾದರೆ ಯಾವುದೇ ತರಹದ ವಿಮಾ ಸಿಗೋದಿಲ್ಲ ಇಂತಹ ಸಂದರ್ಭದಲ್ಲಿ ವಾಹನ ಮಾಲೀಕರು ಶಿಕ್ಷೆಗೆ ಒಳಪಡುವಂತ ಪರಿಸ್ಥಿತಿ ಒದಗಿ ಬರಬಹುದಾಗಿದ್ದು ಜಾಗೃತಿಯಿಂದ ಇರಬೇಕು ಎಂದರು.
ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿ, ಸಮಾಜದಲ್ಲಿ ಕೆಲ ಮೋಸಗಾರರು ಪ್ಲಾಟುಗಳನ್ನು ಕೊಡಿಸುವದು, ಹಣ ಡಬಲ್ ಮಾಡಿಕೊಡುವದು ಸೇರಿದಂತೆ ಅನೇಕ ತರಹದಲ್ಲಿ ಮೋಸ ಮಾಡುತ್ತಿರುವದು ಗಮನಕ್ಕೆ ಬಂದಿದ್ದು ನಾಗರಿಕರು ಜಾಗರೂಕತೆಯಿಂದ ವ್ಯವಹರಿಸಬೇಕು, ಸೈಬರ್ ಕಳ್ಳರು ಮೊಬೈಲ್ ಹ್ಯಾಕ್ ಮಾಡುತ್ತಿದ್ದು ಯಾವುದೇ ಕಾರಣಕ್ಕೂ ಯಾರಿಗೂ ಓಟಿಪಿ ಹಂಚಿಕೊಳ್ಳಬಾರದು ಅನವಶ್ಯಕ ಆ್ಯಪ್ ಗಳನ್ನು ಬಳಸಬಾರದು ಅಂತಹ ಅನುಮಾನಸ್ಪದ ಘಟನೆಗಳು ಅಥವಾ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೆ ಪೊಲೀಸ್ ಠಾಣೆಯ ಗಮನಕ್ಕೆ ತರಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್.ಆರ್.ನಾಯಕ, ರಾಯನಗೌಡ ಎಲ್. ಇಂದಿರಾ ಸುಹಾಸಿನಿ, ಶಶಿಧರ ಶೆಟ್ಟರ, ಪರಸಪ್ಪ ಗುಜಮಾಗಡಿ, ರಮೇಶ ಮೇಟಿ, ಮರಿಯಪ್ಪ ಲಿಂಗದಳ್ಳಿ, ಆನಂದ ಡೊಳ್ಳಿನ್ , ಮಲ್ಲಿಕಾರ್ಜುನ ಕೊನಸಾಗರ ಸೇರಿದಂತೆ ನ್ಯಾಯಾಂಗ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ, ಶಾಲಾ ಕಾಲೇಜಿನ ವಿದ್ಯಾರ್ಥಿ ಹಾಜರಿದ್ದರು. ಶಿಕ್ಷಕ ರಾಜಮಹ್ಮದ ಕೋಳೂರು ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು, ಪೊಲೀಸ್ ಸಿಬ್ಬಂದಿ ಬಸವರಾಜ ನಿರೂಪಿಸಿದರು, ಶರಣಪ್ಪ ಸ್ವಾಗತಿಸಿದರು.
ಬಾಲ್ಯ ವಿವಾಹ, ಮಹಿಳಾ ದೌರ್ಜನ್ಯ, ಬಾಲ ಕಾರ್ಮಿಕ ಇಂತಹ ಅನಿಷ್ಟ ಪದ್ಧತಿಗಳು ಕಂಡು ಬಂದಲ್ಲಿ ಕಾನೂನು ಸಹಾಯವಾಣಿ 15100, ಮಕ್ಕಳ ಸಹಾಯವಾಣಿ 1098 ಈ ನಂಬರಿಗೆ ಕರೆಮಾಡಿ ಮಾಹಿತಿ ತಿಳಿಸುವ ಮೂಲಕ ದೌರ್ಜನ್ಯ ನಿಯಂತ್ರಣಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಕುಷ್ಟಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಲಗಿ ತಿಳಿಸಿದ್ದಾರೆ.