ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಇಂದಿನ ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿಯಾಗಲಿ.
ಕನ್ನಡಪ್ರಭ ವಾರ್ತೆ ಹೊನ್ನಾವರ
ತಾಲೂಕಿನ ಹಳದಿಪುರದ ಆರ್.ಇ.ಎಸ್. ಸಂಯುಕ್ತ ಪದವಿಪೂರ್ವ ವಿದ್ಯಾಲಯದ ಆವರಣದಲ್ಲಿ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಸಂಶೋಧನಾ ಮನೋಭಾವ ಮತ್ತು ಸಮಾಜಮುಖಿ ವಿಷಯಗಳಿಗೆ ಸಂಬಂಧಿಸಿದ ಮಾದರಿ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಕುಮಟಾದ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಪ್ರಾಂಶುಪಾಲ ಎನ್.ಆರ್. ಹೆಗಡೆ ಮಾತನಾಡಿ, ಶಿಕ್ಷಣದ ಬೆಳವಣಿಗೆಗೆ ಗಿಡದ ಬೆಳವಣಿಗೆಯಂತೆಯೇ ಧೈರ್ಯ, ತ್ಯಾಗ ಮತ್ತು ಸಕಾಲಿಕ ಪೋಷಣೆ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಇಂದಿನ ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿಯಾಗಲಿ ಎಂದರು.
ಆರ್.ಇ.ಎಸ್. ಸೊಸೈಟಿಯ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಜಿ.ಸಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳ ತಾಂತ್ರಿಕ ಅಭಿರುಚಿ ಮತ್ತು ಕಲಿಕೆಯ ಮಟ್ಟವನ್ನು ಮೆಚ್ಚಿಕೊಂಡ ಅವರು, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ವೈಜ್ಞಾನಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದಕ್ಕೆ ಸಹಕಾರಿ ಎಂದು ಹೇಳಿದರು.ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಉಪಪ್ರಾಂಶುಪಾಲ ಜಿ.ಎಸ್. ಭಟ್, ಕಾರ್ಯಕ್ರಮದ ನೋಡಲ್ ಅಧಿಕಾರಿ ಜಿ.ಎಸ್. ನಾಯ್ಕ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸುಧೀರ ನಾಯಕ್, ಕಾರ್ಯದರ್ಶಿ ಪ್ರಕಾಶ ನಾಯ್ಕ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸತೀಶ ನಾಯ್ಕ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿನಾಯಕ ಅವಧಾನಿ, ಕ್ಷೇತ್ರ ಸಮನ್ವಯಾಧಿಕಾರಿ ಜಯಶ್ರೀ ನಾಯ್ಕ, ಆರ್.ಇ.ಎಸ್. ಪಪೂ ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಎಸ್. ನಾಯ್ಕ, ಆರ್.ಈ.ಎಸ್. ಪ್ರೌಢಶಾಲೆ ಮುಖ್ಯಾಧ್ಯಾಪಕ ಎಸ್.ಎಚ್. ಪೂಜಾರ್, ಇ.ಸಿ.ಒ. ಪ್ರಮೋದ ನಾಯ್ಕ, ಜಿಲ್ಲಾ ಹಾಗೂ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ಡಯಟ್‌ನ ಉಪನ್ಯಾಸಕರು ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಗಣೇಶನಾಯ್ಕ, ರಾಮಕೃಷ್ಣ ಅಗೇರ, ಷಣ್ಮುಖ ನಾಯ್ಕ, ಪದ್ಮರಾಜ ಪಂಡಿತ, ಮುಕ್ತಾ ನಾಯಕ್ ಹಾಗೂ ಹೇಮಾ ಗುನಗಾ ಕಾರ್ಯನಿರ್ವಹಿಸಿದರು.