ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ.

ಬಿಕೆಜಿ ಗ್ಲೋಬಲ್ ಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಬಿ. ಚೈತ್ರಾ

ಸಂಡೂರು: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅಂತಾರಾಷ್ಟ್ರೀಯ ಮಟ್ಟದ ಖೋ ಖೋ ಆಟಗಾರ್ತಿ ಬಿ. ಚೈತ್ರಾ ಅಭಿಪ್ರಾಯಪಟ್ಟರು.

ಪಟ್ಟಣದ ಬಿಕೆಜಿ ಗ್ಲೋಬಲ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ. ಅಲ್ಲದೆ, ಕ್ರೀಡೆಗಳು ನಮ್ಮಲ್ಲಿ ಶಿಸ್ತು, ತಾಳ್ಮೆ, ಸಾಂಘಿಕ ಪ್ರಯತ್ನದ ಮಹತ್ವ, ನಾಯಕತ್ವ ಗುಣ, ಸಹಕಾರ ಮುಂತಾದ ಉತ್ತಮ ಮೌಲ್ಯಗಳನ್ನು ಬೆಳೆಸುತ್ತವೆ ಎಂದರು.

ಬಿಕೆಜಿ ಸಮೂಹ ಸಂಸ್ಥೆಗಳ ಟ್ರಸ್ಟಿ ಡಾ. ನಾಗನಗೌಡರು ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ತರುಣ್ ಜೆ. ಸ್ವಾಗತಿಸಿದರು. ಅತಿಥಿಗಳಿಂದ ಧ್ವಜವಂದನೆ ಸ್ವೀಕರಿಸಲಾಯಿತು. ಶಾಲೆಯ ಜೆಸಿ ಬೋಸ್, ವಿಶ್ವೇಶ್ವರಯ್ಯ, ಎಪಿಜೆ ಅಬ್ದುಲ್ ಕಲಾಂ ಹಾಗೂ ಸಿ.ವಿ. ರಾಮನ್ ಹೌಸ್‌ಗಳ ಜೊತೆಗೆ ಸ್ಕೌಟ್ಸ್, ಗೈಡ್ಸ್ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ವಿದ್ಯಾರ್ಥಿಗಳು ಹೂಪ್ಸ್ ಡ್ಯಾನ್ಸ್, ಲೆಜಿಮ್, ವರ್ಲ್ಡ್ ಕಪ್ ಕ್ರಿಕೆಟ್ ಡ್ರಿಲ್, ಏರೋಬಿಕ್ಸ್ ಹಾಗೂ ಯೋಗ ಪ್ರದರ್ಶನ ನೀಡಿದರು.

ಅತಿಥಿಗಳು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದ ನಂತರ ಕ್ರೀಡೆಗಳು ಆರಂಭಗೊಂಡವು. ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯ ಕೆ.ವಿ. ಮೋಹನ್ ರಾವ್, ಉಪ ಪ್ರಾಚಾರ್ಯ ಸಂತೋಷ್ ಜಟ್ಟಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಸಂಡೂರಿನ ಬಿಕೆಜಿ ಗ್ಲೋಬಲ್ ಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಗಣ್ಯರು ಗೌರವ ವಂದನೆ ಸ್ವೀಕರಿಸಿದರು.