ಸಾರಾಂಶ
- ಭಾರತ ಮಾತಾ ಪೂಜನ ಕಾರ್ಯಕ್ರಮದಲ್ಲಿ ಹಿಂಜಾವೇ ಮುಖಂಡ ಜಗದೀಶ್ ಕಾರಂತ್ ವಿಷಾದ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಬೇರೆ ದೇಶಗಳಲ್ಲಿ ಆಯಾ ದೇಶಕ್ಕೆ ಸಂಬಂಧಿಸಿದ ಆಚರಣೆಗಳನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ಆದರೆ, ಭಾರತದಲ್ಲಿ ಅಂತಹ ಸಂಭ್ರಮಗಳು ಕಂಡುಬರುತ್ತಿಲ್ಲ. ಸ್ವಾತಂತ್ರ‍್ಯ ದಿನಾಚರಣೆ, ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳು ಕೂಡ ಸರ್ಕಾರಿ ಆಚರಣೆಗೆ ಸೀಮಿತವಾಗಿರುವುದು ದುರಂತ ಎಂದು ಹಿಂದೂ ಜಾಗರಣ ವೇದಿಕೆ ದಕ್ಷಿಣ ಕ್ಷೇತ್ರೀಯ ಸಂಯೋಜಕ ಜಗದೀಶ್ ಕಾರಂತ್ ಹೇಳಿದರು.
ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಭಾನುವಾರ ಸಂಜೆ ಭಾರತ ವಿಕಾಸ ಪರಿಷತ್ತು, ಸ್ವಾಮಿ ವಿವೇಕಾನಂದ ಶಾಖೆ ವತಿಯಿಂದ ಭಾರತ ಮಾತಾ ಪೂಜನ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸವಾಲುಗಳು ಮತ್ತು ಜನಜಾಗೃತಿ ವಿಷಯವಾಗಿ ಅವರು ಉಪನ್ಯಾಸ ನೀಡಿದರು.ನಿರಂತರ ರಜೆ ಬಂದರಂತೂ ಬಂಧು-ಮಿತ್ರದೊಂದಿಗೆ ಪಿಕ್ನಿಕ್ ಹೋಗುವುದು ಸರ್ವೇಸಾಮಾನ್ಯ. ರಾಷ್ಟ್ರೀಯ ಹಬ್ಬಗಳಲ್ಲಿ ಜನರು ಸಂಭ್ರಮದಿಂದ ಪಾಲ್ಗೊಳ್ಳುವ ವಾತಾವರಣ ಕಡಿಮೆ ಇದೆ. ಸಮಾಜಕ್ಕೆ ಸೂಕ್ತ ದಿಕ್ಕು-ದೆಸೆ, ಮೇಲ್ಪಕ್ಕಿ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ. ಇತಿಹಾಸ ವಿಸ್ಮೃತಿ ಹಾಗೂ ದೇಶದ ಬಗೆಗಿನ ನಿರಭಿಮಾನದಿಂದಾಗಿ ರಾಷ್ಟ್ರೀಯ ಹಬ್ಬಗಳು ಸರ್ಕಾರಿ ಆಚರಣೆಗಳಾಗಿ ಸೀಮಿತವಾಗಿವೆ. ಸಾರ್ವಜನಿಕ ಸಹಭಾಗಿತ್ವ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬಗಳಂದು ಕೇವಲ ಗಾಂಧಿಗಳಿಗೆ ಜೈಕಾರ ಕೇಳಿಬರುತ್ತದೆ. ನೇತಾಜಿ ಸುಭಾಷ್ ಚಂದ್ರ ಬೋಸ್, ವೀರ ಸಾವರ್ಕರ್ ಹೆಸರುಗಳೇ ಕೇಳುವುದಿಲ್ಲ. ಇದಕ್ಕಿಂತ ದೊಡ್ಡ ದ್ರೋಹ ಇನ್ನೊಂದಿಲ್ಲ. ಭಾರತಕ್ಕೆ ಸ್ವಾತಂತ್ರ‍್ಯ ಲಭಿಸಿದ್ದು ಹೋರಾಟದಿಂದಲೇ ಹೊರತು, ಭಿಕ್ಷೆಯಿಂದಲ್ಲ. ಲಕ್ಷಾಂತರ ದೇಶಭಕ್ತರು ಇದಕ್ಕಾಗಿ ತ್ಯಾಗ, ಬಲಿದಾನ ಮಾಡಿದ್ದಾರೆ. ಇದನ್ನೆಲ್ಲಾ ಮುಚ್ಚಿಟ್ಟು, ಕೆಲವೇ ವ್ಯಕ್ತಿಗಳಿಂದ ಸ್ವಾತಂತ್ರ‍್ಯ ಬಂದಿದೆ ಎಂಬ ಸುಳ್ಳನ್ನು ಹರಡಲಾಗಿದೆ. ಹೀಗಾಗಿ, ಇಂದಿನ ಯುವಪೀಳಿಗೆಗೆ ಸ್ವಾತಂತ್ರ‍್ಯದ ಮಹತ್ವ ಗೊತ್ತಿಲ್ಲ ಎಂದರು.ಭಾರತ ವಿಕಾಸ ಪರಿಷತ್ತು, ಸ್ವಾಮಿ ವಿವೇಕಾನಂದ ಶಾಖೆ ಅಧ್ಯಕ್ಷ ಎನ್.ಪಿ. ಮೌನೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಗನೂರು ಬಸಪ್ಪ ಪಿಯು ಕಾಲೇಜು ಪ್ರಾಚಾರ್ಯ ಪ್ರಸಾದ್ ಎಸ್. ಬಂಗೇರಾ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಎಚ್.ಜಯಣ್ಣ ಕಾರ್ಯಕ್ರಮದಲ್ಲಿ ಹಾಜರಿದ್ದರು.
- - -ಬಾಕ್ಸ್ * ಇಸ್ಲಾಂ ಕಾಲಿಟ್ಟ ಕಡೆಗೆಲ್ಲ ನಾಗರೀಕತೆ ನಾಶ ಗಾಂಧಿಯಿಂದಲೇ ಸ್ವಾತಂತ್ರ‍್ಯ ಹೋರಾಟ ಆರಂಭವಾಗಿಲ್ಲ. ಭಾರತದಂತೆ ದೀರ್ಘಕಾಲ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ರಾಷ್ಟ್ರ ಜಗತ್ತಿನಲ್ಲಿ ಮತ್ತೊಂದಿಲ್ಲ. ಇಸ್ಲಾಂ ಕಾಲಿಟ್ಟ ಕಡೆಗೆಲ್ಲ ಅಲ್ಲಿನ ನೆಲ, ನಾಗರೀಕತೆ ಸಂಪೂರ್ಣ ನಾಶವಾಗಿವೆ. ಆದರೆ, ನೂರಾರು ವರ್ಷಗಳ ಇಸ್ಲಾಮೀ ಆಕ್ರಮಣದ ನಡುವೆಯೂ ಜೀವಂತ ಉಳಿದಿರುವ ಏಕೈಕ ಸಮಾಜ ನಮ್ಮದು. ಇಂತಹ ವೀರ ಪರಂಪರೆಯವರನ್ನು ಹೇಡಿಗಳಂತೆ ಬಿಂಬಿಸುವ ಪ್ರಯತ್ನ ಸ್ವಾತಂತ್ರ‍್ಯ ಪೂರ್ವದಿಂದಲೂ ನಡೆದಿದೆ. ಈ ಸಮಾಜ ಹೇಡಿಯಾಗಿದ್ದರೆ ದೇಶಕ್ಕೆ ಸ್ವಾತಂತ್ರವೇ ಸಿಗುತ್ತಿರಲಿಲ್ಲ ಎಂಬುದನ್ನು ಯಾರೂ ಮರೆಯಬಾರದು ಎಂದು ಜಗದೀಶ್ ಕಾರಂತ್ ಸಲಹೆ ನೀಡಿದರು.- - -
-27ಕೆಡಿವಿಜಿ31:ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಸವಾಲುಗಳು ಮತ್ತು ಜನಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಜಗದೀಶ್ ಕಾರಂತ್ ಉದ್ಘಾಟಿಸಿದರು.