ಸಾರಾಂಶ
ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ವತಿಯಿಂದ ಮಾರಿಕಾಂಬಾ ದೇವಸ್ಥಾನದ ಸಹಯೋಗದೊಂದಿಗೆ ಮಾ.14ರಿಂದ 17ರವರೆಗೆ ರಾಷ್ಟ್ರಮಟ್ಟದ ಆಹ್ವಾನಿತ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ಖೋಖೋ ಪಂದ್ಯಾವಳಿ ಆಯೋಜಿಸಲಾಗಿದೆ
ತೀರ್ಥಹಳ್ಳಿ: ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ವತಿಯಿಂದ ಮಾರಿಕಾಂಬಾ ದೇವಸ್ಥಾನದ ಸಹಯೋಗದೊಂದಿಗೆ ಮಾ.14ರಿಂದ 17ರವರೆಗೆ ರಾಷ್ಟ್ರಮಟ್ಟದ ಆಹ್ವಾನಿತ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ಖೋಖೋ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹೇಳಿದರು.
50 ಲಕ್ಷ ರು. ವೆಚ್ಚದ ಪಂದ್ಯಾವಳಿಯಲ್ಲಿ 8 ಪುರುಷ ಹಾಗೂ 6 ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. 31 ವರ್ಷಗಳ ಹಿಂದೆ ಪ್ರಾರಂಭವಾಗಿರುವ ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ವತಿಯಿಂದ ನಡೆಯುತ್ತಿರುವ 2ನೇ ರಾಷ್ಟ್ರಮಟ್ಟದ ಪಂದ್ಯವಾಗಿದ್ದು, ರಾಷ್ಟ್ರೀಯ ಖೋಖೋ ಫೆಡರೇಶನ್ ಮಾನ್ಯತೆಯೊಂದಿಗೆ ನಡೆಯುವ ಈ ಪಂದ್ಯಾವಳಿಯಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ರಾಷ್ಟ್ರದ ಬಹುತೇಕ ಎಲ್ಲ ಖ್ಯಾತನಾಮ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಪುರುಷರ ವಿಭಾಗದಲ್ಲಿ ಮುಂಬೈ, ಪಶ್ಚಿಮ ರೈಲ್ವೆ, ಮಹಾರಾಷ್ಟ್ರ, ಕೋಲ್ಹಾಪುರ, ಎಎಂಎಸ್ ಪುಣೆ, ಕೇರಳ, ಖೇಲೋ ಇಂಡಿಯಾ, ಆಂಧ್ರ ಪ್ರದೇಶ ಹಾಗೂ ಕನಾಟಕ ತಂಡಗಳು. ಮಹಿಳಾ ವಿಭಾಗದಲ್ಲಿ ದೆಹಲಿ, ಕೇರಳ, ಮಹಾರಾಷ್ಟ್ರ, ಕೊಲ್ಹಾಪುರ, ಆರ್‌ಎಫ್ ಮುಂಬೈ, ಉಸ್ಮಾನಾಬಾದ್ ಮತ್ತು ಕರ್ನಾಟಕ ತಂಡಗಳು ಭಾಗವಹಿಸಲಿವೆ. ಪಂದ್ಯಗಳ ವೀಕ್ಷಣೆಗೆ ಸುಮಾರು ಮೂರು ಸಾವಿರ ಮಂದಿ ಕೂರಬಹುಬಹುದಾದ ಗ್ಯಾಲರಿಯನ್ನೂ ವ್ಯವಸ್ಥೆಗೊಳಿಸಲಾಗಿದೆ ಎಂದರು.
ಲೀಗ್ ಕಂ ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಪ್ರತಿದಿನ ಸಂಜೆ 4 ಗಂಟೆಗೆ ಪಂದ್ಯಗಳು ಪ್ರಾರಂಭವಾಗಲಿದೆ. ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಮಹಿಳೆಯರು ಮಕ್ಕಳ ಮನರಂಜನೆಗಾಗಿ ಜಾಯಿಂಟ್ ವೀಲ್, ಕೊಲಂಬಸ್ ಮುಂತಾದ ಮನರಂಜನೆಗಳಲ್ಲದೇ ವಿಶೇಷವಾದ ಆಹಾರ ಮಳಿಗೆಗಳನ್ನು ವ್ಯವಸ್ಥೆಗೊಳಿಸಲಾಗಿದೆ. ವಾಹನ ಪಾರ್ಕಿಂಗ್‍ಗೆ ವಿಶಾಲ ಸ್ಥಳಾವಕಾಶ ಕಲ್ಪಿಸಲಾಗಿದೆ. ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾಗುವುದು ಎಂದೂ ಹೇಳಿದರು.ಸುಧೀರ್ ಶೆಟ್ಟಿ, ಕ್ಲಬ್ಬಿನ ಸ್ಥಾಪಕ ಅಧ್ಯಕ್ಷ ಎನ್.ಆರ್.ನಾಗರಾಜ್, ಎಚ್.ಪಾಂಡುರಂಗಪ್ಪ, ನಾಗೇಂದ್ರ, ಮುನ್ನೂರು ಮೋಹನ್ ಶೆಟ್ಟಿ, ರಾಮದಾಸ್ ಪ್ರಭು, ವಿಶಾಲ್ ಕುಮಾರ್, ಶಚ್ಚೀಂದ್ರ ಹೆಗ್ಡೆ ಇದ್ದರು.