ಡಿಸೆಂಬರ್ 13ರಂದು ರಾಷ್ಟ್ರೀಯ ಲೋಕ ಅದಾಲತ್

| Published : Nov 05 2025, 01:03 AM IST

ಸಾರಾಂಶ

ರಾಷ್ಟ್ರೀಯ ಲೋಕ ಆದಾಲತ್ ಕುರತಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ ವಾಸುದೇವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಡಿಸೆಂಬರ್ 13 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದ್ದು, ಹೆಚ್ಚಿನ ಪ್ರಕರಣಗಳ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸುವ ಉದ್ದೇಶ ಹೊಂಂದಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ ಹೇಳಿದರು.

ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದಲ್ಲಿ ಮಂಗಳವಾರ ಲೋಕ ಅದಾಲತ್ ಆಯೋಜನೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕಳೆದ ಜುಲೈ 12 ರಂದು ನಡೆದ ಲೋಕ ಅದಾಲತ್ ಸಂದರ್ಭದಲ್ಲಿ, ಚಾಲ್ತಿಯಲ್ಲಿ ಇದ್ದ 2,848 ಪ್ರಕರಣಗಳನ್ನು ಹಾಗೂ 94,782 ವ್ಯಾಜ್ಯಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ 3 ಜೋಡಿಗಳನ್ನು ಪುನಃ ಒಂದು ಮಾಡಲಾಗಿದೆ ಎಂದರು.

ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಸದ್ಯ 49,017 ಪ್ರಕರಣಗಳು ಬಾಕಿಯಿವೆ. ಈ ಪೈಕಿ 3,137 ಪ್ರಕರಣಗಳನ್ನು ಮುಂಬರುವ ಲೋಕ ಅದಾಲತ್‍ನಲ್ಲಿ ಇತ್ಯರ್ಥಗೊಳಿಸಲು ಗುರುತಿಸಲಾಗಿದೆ. 5,566 ಚೆಕ್ ಅಮಾನ್ಯೀಕರಣ ಪ್ರಕರಣಗಳಲ್ಲಿ 402, ರಾಜಿಯಾಗಬಹುದಾದ 227 ಕ್ರಿಮಿನಲ್ ಪ್ರಕರಣಗಳಲ್ಲಿ 37, ಆಸ್ತಿ ವಿಭಾಗದ 4,279 ಪ್ರಕರಣಗಳ ಪೈಕಿ 353, ಮೋಟಾರು ವಾಹನ ಕಾಯ್ದೆಯಡಿ ದಾಖಲಾದ 389 ಪ್ರಕರಣಗಳ ಪೈಕಿ 92, ನಿರ್ದಿಷ್ಟ ಪರಿಹಾರ ಕೋರಿರುವ 836 ಪ್ರಕರಣಗಳ ಪೈಕಿ 64, ಗಣಿಗಾರಿಕೆಗೆ ಸಂಬಂಧಿಸಿದ 112 ಪ್ರಕರಣಗಳಲ್ಲಿ 01 ಹಾಗೂ ವೈವಾಹಿಕ ಸಂಬಂಧದ 877 ಪ್ರಕರಣಗಳ ಪೈಕಿ 60 ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ ಎಂದು ನ್ಯಾಯಾಧೀಶ ರೋಣ ವಾಸುದೇವ ಮಾಹಿತಿ ನೀಡಿದರು.

ಕಳೆದ ಜುಲೈ 01 ರಿಂದ ನವೆಂಬರ್ 14 ವರಗಿನ 90 ದಿನಗಳ ಅವಧಿಯಲ್ಲಿ, ವಿಶೇಷ ಮಧ್ಯಸ್ಥಿಕೆ ಅಭಿಯಾನದಲ್ಲಿ 71 ಪಕ್ರರಣಗಳನ್ನು ವಿಲೇವಾರಿ ಮಾಡಲಾಗಿದೆ. ಮಧ್ಯಸ್ಥಿಕೆ ಅಭಿಯಾನದಲ್ಲಿ ವಿಲೇವಾರಿ ಮಾಡಲು ನ್ಯಾಯಾಲಯದಲ್ಲಿ ಚಾಲ್ತಿಯಿದ್ದ 1,545 ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ 30 ಚೆಕ್ ಅಮಾನ್ಯ, 6 ಮೋಟಾರ್ ಕಾಯ್ದೆ, 5 ಕೌಟುಂಬಿಕ, 16 ಪಾಲು ವಿಭಾಗ ಹಾಗೂ 14 ಸಿವಿಲ್ ಪ್ರಕರಣಗಳು ಸೇರಿ 71 ಪ್ರಕರಣಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಇನ್ನೂ 10 ದಿನಗಳ ಕಾಲ ಅಭಿಯಾನ ನಡೆಯಲಿದ್ದು, ಇನ್ನೂ ಹೆಚ್ಚಿನ ಪ್ರಕರಣಗಳನ್ನು ವಿಲೇವಾರಿ ಮಾಡುವ ವಿಶ್ವಾಸವನ್ನು ನ್ಯಾಯಾಧೀಶ ರೋಣ ವಾಸುದೇವ ವ್ಯಕ್ತಪಡಿಸಿದರು.

10 ಲಕ್ಷ ಜನಸಂಖ್ಯೆಗೆ 50 ನ್ಯಾಯಾಧೀಶರು ಇರುಬೇಕು ಎಂಬುದನ್ನು ಸುಪ್ರಿಂ ಕೋರ್ಟ್ ಸಹ ಒಪ್ಪಿದೆ. ಆದರೆ ವಾಸ್ತವವಾಗಿ ನ್ಯಾಯಾಲಯಗಳಲ್ಲಿ ಇಷ್ಟು ಸಂಖ್ಯೆಯ ನ್ಯಾಯಾಧೀಶರು ಇಲ್ಲದಿರುವುದರಿಂದ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಧೀಶರುಗಳ ಮೇಲೆ ಹೆಚ್ಚುವರಿ ಕಾರ್ಯಭಾರದ ಹೊರೆಯಿದೆ. ಜಿಲ್ಲೆಯ ಜನಸಂಖ್ಯೆ 15 ಲಕ್ಷ ಎಂದು ಅಂದಾಜಿಸಿದರೆ, ನ್ಯಾಯಾಧೀಶರ ಸಂಖ್ಯೆ 75 ಇರಬೇಕು. ಸದ್ಯ 22 ನ್ಯಾಯಾಧೀಶರು ಕೆಲಸ ನಿರ್ವಹಿಸುತ್ತಿದ್ದಾರೆ. ಒಬ್ಬ ನ್ಯಾಯಾಧೀಶರ ಮೇಲೆ 3 ನ್ಯಾಯಾಧೀಶರ ಕಾರ್ಯಭಾರದ ಒತ್ತಡವಿದೆ. ಆದಾಗ್ಯೂ ಜಿಲ್ಲೆಯಲ್ಲಿ ತ್ವರಿತವಾಗಿ ನ್ಯಾಯ ಒದಗಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ನ್ಯಾಯಾಧೀಶ ರೋಣ ವಾಸುದೇವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಡಿಸೆಂಬರ್ 13 ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‍ನ ಸದುಪಯೋಗ ಪಡಿಸಿಕೊಂಡು ಪಕ್ಷಕಾರರು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭ ಹಾಗೂ ಶೀಘ್ರವಾಗಿ ಯಾವುದೇ ಶುಲ್ಕ, ಖರ್ಚು ವೆಚ್ಚವಿಲ್ಲದೇ ತೀರ್ಮಾನ ಮಾಡಿಕೊಳ್ಳಬಹುದು. ಕಕ್ಷಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಲೋಕ ಅದಾಲತ್‍ನಲ್ಲಿ ಭಾಗವಹಿಸಬಹುದು. ಸಾರ್ವಜನಿಕರು ಲೋಕ ಅದಾಲತ್ ಕುರಿತು ಹೆಚ್ಚಿನ ಪ್ರಶ್ನೆ ಮತ್ತು ಮಾಹಿತಿ ಬೇಕಾದಲ್ಲಿ ಇ-ಮೇಲ್ dlsachitradurga3@gmail.com ಹಾಗೂ ಸದಸ್ಯ ಕಾರ್ಯದರ್ಶಿಯವರ ಕಚೇರಿ ಮೊಬೈಲ್ ಸಂಖ್ಯೆ 9141193935 ಹಾಗೂ ದೂರವಾಣಿ ಸಂಖ್ಯೆ 08194- 222322 ಕ್ಕೆ ಸಂಪರ್ಕಿಸಬಹುದು ಎಂದು ನ್ಯಾಯಾಧೀಶ ರೋಣ ವಾಸುದೇವ ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಉಪಸ್ಥಿತರಿದ್ದರು.