ಮೀನುಗಾರರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಮೀನುಗಾರಿಕೆ ಉದ್ಯಮದ ಪುನಶ್ಚೇತನ್ಕಾಗಿ ಹೊಸಹೊಸ ಯೋಜನೆ ಜಾರಿಗೆ ತರುತ್ತಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಮೀನುಗಾರರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಮೀನುಗಾರಿಕೆ ಉದ್ಯಮದ ಪುನಶ್ಚೇತನ್ಕಾಗಿ ಹೊಸಹೊಸ ಯೋಜನೆ ಜಾರಿಗೆ ತರುತ್ತಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ತಾಲೂಕಿನ ಹೊಳೆಬಾಗಿಲಿನಲ್ಲಿ ಸೋಮವಾರ ಮೀನುಗಾರಿಕೆ ಇಲಾಖೆಯಿಂದ ಶರಾವತಿ ಹಿನ್ನೀರಿಗೆ ಬಲಿತ ಮೀನುಮರಿಯನ್ನು ಬಿತ್ತನೆ ಮಾಡಿ ಮಾತನಾಡಿದ ಅವರು, ಶರಾವತಿ ಹಿನ್ನೀರು ಪ್ರದೇಶದಲ್ಲಿ ಸುಮಾರು ೮೭ ಲಕ್ಷ ಬಲಿತ ಮೀನು ಮರಿಯನ್ನು ಬಿಡಲಾಗುತ್ತಿದೆ ಎಂದರು.

ಶರಾವತಿ ಹಿನ್ನೀರಿನಲ್ಲಿ ೬೭ ಲಕ್ಷ, ತಲಕಳಲೆ ಡ್ಯಾಂಗೆ ೧೨ ಲಕ್ಷ ಮತ್ತು ಶಿರೂರು ಕೆರೆಗೆ ೨ ಲಕ್ಷ ಬಲಿತ ಮರಿಗಳನ್ನು ಬಿತ್ತನೆ ಮಾಡಲಾಗುತ್ತಿದೆ. ಇದರ ಜೊತೆಗೆ ನದಿ ತಟದಲ್ಲಿ ಮೀನುಗಾರರ ಸಂಘದ ಜೊತೆ ಇಲಾಖೆ ವತಿಯಿಂದ ಮೀನು ಬೆಳೆಸುವ ಕೆಲಸವನ್ನು ಮಾಡಲಾಗುತ್ತಿದೆ. ಮೀನುಗಾರರಿಗೆ ಸಾಧನಾ ಸಲಕರಣೆಗಳಾದ ಬೋಟು, ಬಲೆ, ಉಕ್ಕಡ ಇನ್ನಿತರ ಸಾಮಗ್ರಿಗಳನ್ನು ಕೊಡಲಾಗುತ್ತದೆ ಎಂದರು.

ಮೀನುಗಾರರಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಚಾಲ್ತಿಯಲ್ಲಿದೆ. ತಾಲೂಕಿಗೆ ೪೯ ಮನೆಗಳು ಬಂದಿದೆ. ಆದರೆ ಅರ್ಜಿ ಸಲ್ಲಿಸಿದ ಮೀನುಗಾರರ ಕುಟುಂಬದ ಬಳಿ ಅವರ ಸ್ವಾಧೀನದಲ್ಲಿರುವ ಜಾಗಕ್ಕೆ ಹಕ್ಕುಪತ್ರ ಇಲ್ಲವಾಗಿದೆ. ಹಿಂದೆ ೨೫ ಕುಟುಂಬಗಳಿಗೆ ಮನೆ ನೀಡಿದೆ. ಉಳಿದವರಿಗೆ ಮನೆ ನೀಡಲು ಅಗತ್ಯ ಯೋಜನೆ ರೂಪಿಸಿದೆ. ಮೀನುಗಾರರ ಬದುಕು ಹಸನಾಗಬೇಕು. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಅವರದ್ದೆ ಸ್ವಂತ ಸೂರಿನಲ್ಲಿ ಅವರು ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ಮೀನುಗಾರರ ಕುಟುಂಬ ಇದೆಯೋ ಅವರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಬಿ.ಎ.ಇಂದೂಧರ ಬೇಸೂರು, ನವೀನ್ ಗೌಡ, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಅನಿತಾ ಕುಮಾರಿ, ಹಂಜಾ ಇನ್ನಿತರರು ಹಾಜರಿದ್ದರು.

ಯಾವ ಗುಂಪಿನಲ್ಲಿಯೂ ಇಲ್ಲ

ನಾನು ಯಾವ ಗುಂಪಿನಲ್ಲಿಯೂ ಇಲ್ಲ. ನನ್ನದು ಕಾಂಗ್ರೆಸ್ ಗುಂಪು. ಪಕ್ಷದ ಹೈಕಮಾಂಡ್ ಏನನ್ನು ಸೂಚಿಸುತ್ತದೆಯೋ ಅದನ್ನು ಅನುಸರಿಸುತ್ತೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಪತ್ರಕರ್ತರ ಜೊತೆ ಮಾತನಾಡಿದ ಅವರು, ನಾನೊಬ್ಬ ಕಾಂಗ್ರೆಸ್ಸಿಗ. ಯಾವ ಬಣದ ಜೊತೆಯೂ ಗುರುತಿಸಿಕೊಳ್ಳುವುದಿಲ್ಲ. ನನಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರು ಕೆಲಸ ಮಾಡಿ ಕೊಡುತ್ತಾರೆ. ಇಂತಹ ಹೊತ್ತಿನಲ್ಲಿ ಬಣದ ಹಿಂದೆ ಹೋಗುವುದಿಲ್ಲ ಎಂದು ಸ್ಟಷ್ಟಪಡಿಸಿದರು. ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಿದ್ಯಮಾನ ಬೇಸರ ತರಿಸಿದೆ. ಕೇಂದ್ರ ನಾಯಕರು ತಕ್ಷಣ ಗೊಂದಲಕ್ಕೆ ಪರಿಹಾರ ಸೂಚಿಸಬೇಕು. ಪಕ್ಷದ ಜೊತೆ ಇದ್ದರೆ, ಹೈಕಮಾಂಡ್ ಮಾತಿಗೆ ಬದ್ದವಿದ್ದರೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ವಿಶ್ವಾಸವಿದೆ. ಹಿಂದಿನಿಂದಲೂ ನಾನು ಹೈಕಮಾಂಡ್ ಮಾತಿಗೆ ಬದ್ದನಾಗಿದ್ದವನು ಎಂದು ಹೇಳಿದರು.