ಮಂಡ್ಯ ತಾಲೂಕಿನ ಬೇಲೂರು ಗ್ರಾಪಂ ವ್ಯಾಪ್ತಿಯ ದ್ವಾರಕ ನಗರದಲ್ಲಿ ಸೆಸ್ಕ್ ವತಿಯಿಂದ ಸ್ಥಾಪಿಸಲು ಮುಂದಾಗಿರುವ ೬೬/೧೧ ಕೆವಿ ಸಾಮರ್ಥ್ಯದ ವಿದ್ಯುತ್ ಉಪ ಕೇಂದ್ರವನ್ನು ನಗರ ಭಾಗದಿಂದ ಹೊರಕ್ಕೆ ಸ್ಥಳಾಂತರಿಸಬೇಕು ಎಂದು ದ್ವಾರಕನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಆಗ್ರಹ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಬೇಲೂರು ಗ್ರಾಪಂ ವ್ಯಾಪ್ತಿಯ ದ್ವಾರಕ ನಗರದಲ್ಲಿ ಸೆಸ್ಕ್ ವತಿಯಿಂದ ಸ್ಥಾಪಿಸಲು ಮುಂದಾಗಿರುವ ೬೬/೧೧ ಕೆವಿ ಸಾಮರ್ಥ್ಯದ ವಿದ್ಯುತ್ ಉಪ ಕೇಂದ್ರವನ್ನು ನಗರ ಭಾಗದಿಂದ ಹೊರಕ್ಕೆ ಸ್ಥಳಾಂತರಿಸಬೇಕು ಎಂದು ದ್ವಾರಕನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಎಂ.ಬಸವರಾಜು ಒತ್ತಾಯಿಸಿದರು.

ದ್ವಾರಕನಗರದಲ್ಲಿ ಹಾದು ಹೋಗಿರುವ ೬೬ ಕೆವಿ ವಿದ್ಯುತ್ ಮಾರ್ಗದ ಕೆಳ ಭಾಗದ ಸ್ಥಳವು ಬಡಾವಣೆಯ ಉದ್ಯಾನಕ್ಕಾಗಿ ಮೀಸಲಿಡಲಾಗಿದೆ. ಇಲ್ಲಿ ಬಡಾವಣೆಯ ಮಕ್ಕಳ ಆಟೋಟ ಚಟುವಟಿಕೆಗಳಿಗೆ, ಬಡಾವಣೆಯ ಜನರ ಸಮುದಾಯ ಕಾರ್ಯಕ್ರಮಗಳಿಗೆ ಸದ್ಬಳಕೆಯಾಗಲಿದೆ ಎಂದರು.

ಈ ಸ್ಥಳವೂ ಸಿಎ ನಿವೇಶನ ಅಥವಾ ಬೇರಾವುದೇ ಮೈದಾನ ಆಗಿರುವುದಿಲ್ಲ. ಬಡಾವಣೆ ರಚನೆಯ ವಿನ್ಯಾಸ ನಕ್ಷೆಯಲ್ಲೂ ಉದ್ಯಾನ ಎಂದೇ ಗುರುತಿಸಲಾಗಿದೆ. ಇಲ್ಲಿ ಅಪಾಯಕಾರಿ ವಿದ್ಯುತ್ ಉಪಕೇಂದ್ರ ಸ್ಥಾಪಿಸುವುದು ಸೂಕ್ತವಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿ, ಜಿಪಂ ಸಿಇಒ, ಇಒ, ಪಿಡಿಒಗಳಿಗೆ ಮನವಿ ನೀಡಲಾಗಿದೆ. ಈ ಸಂಬಂಧ ಪರಿಶೀಲನೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಬಡಾವಣೆಯಿಂದಾಚೆಗೆ ಬಯಲು ಪ್ರದೇಶವಿದ್ದು, ಅಲ್ಲಿ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಸೆಸ್ಕ್ ಅಧ್ಯಕ್ಷರೂ ಆದ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ದಾಸಯ್ಯ, ಚಂದ್ರೇಗೌಡ, ಸದಸ್ಯೆ ಕರುಣ ಹೊರವಲಯ ಒಕ್ಕೂಟದ ಅಧ್ಯಕ್ಷ ಎಚ್.ಆರ್.ಅಶೋಕ್ ಇದ್ದರು.

ಇಂದು ಷಷ್ಠಿ ಪೂಜಾ ಮಹೋತ್ಸವ

ಶ್ರೀರಂಗಪಟ್ಟಣ: ಪುಟ್ಟಣದ ಪುರಸಭಾ ವ್ಯಾಪ್ತಿಯ ಗಂಜಾಂನ ವಾಟರ್ ಪಂಪ್ ಹೌಸ್ ಬಳಿ ಸುಬ್ರಮಣ್ಯ ಷಷ್ಠಿ ಪೂಜಾ ಮಹೋತ್ಸವದ ಅಂಗವಾಗಿ ಡಿ.26ರ ಬೆಳಗ್ಗೆ ೧೧ ಗಂಟೆಗೆ ಉತ್ತಕ್ಕೆ ಪೂಜೆ ನೆರವೇರಿಸಿದ ಬಳಿಕ ಮಹಾಮಂಗಳಾರತಿ ಯೊಂದಿಗೆ ಸಾವಿರಾರು ಮಂದಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ ಷಷ್ಠಿ ಪೂಜಾ ಆಯೋಜಕರು ಕೋರಿದ್ದಾರೆ.

ಇಂದು ಷಷ್ಠಿ ಆಚರಣೆ

ಪಾಂಡವಪುರ: ತಾಲೂಕಿನ ಕಸಬಾ ಹೋಬಳಿಯ ಕೆನ್ನಾಳು ಗ್ರಾಮದಲ್ಲಿ ನ.26 ರಂದು ಶ್ರೀಲಕ್ಷ್ಮೀದೇವಿ ದೇವಸ್ಥಾನದ 37ನೇ ವರ್ಷದ ಷಷ್ಠಿ ಹಬ್ಬ ನಡೆಯಲಿದೆ. ಶ್ರೀಲಕ್ಷ್ಮೀದೇವಿ (ಕೆನ್ನಾಳು ಚಿಕ್ಕಮ್ಮ) ಜೀರ್ಣೋದ್ಧಾರ ಸಮಿತಿ ಟ್ರಸ್ಟ್‌ನಿಂದ ನಡೆಯುವ ಕಾರ್ಯಕ್ರಮದಲ್ಲಿ ದೇವಿಗೆ ಹೋಮ, ಅಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನೆರವೇರಲಿದೆ. 11ಗಂಟೆಗೆ ಅಮ್ಮನವರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಕಳಸ ಪೂಜಾ ಕಾರ್ಯ, ಮಂಗಳವಾದ್ಯ ಸಹಿತ ಭಕ್ತಾದಿಗಳ ಸಮ್ಮುಖದಲ್ಲಿ ಕೈಗೊಳ್ಳಲಾಗುತ್ತದೆ. ಮಧ್ಯಾಹ್ನ 1ಕ್ಕೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.