ಹಳ್ಳಿಯಿಂದ ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳುವ ಸಂದರ್ಭದಲ್ಲಿ ತಮ್ಮನ್ನು ತಾವು ಗಟ್ಟಿಮಾಡಿಕೊಳ್ಳುವ ಜೊತೆಗೆ ಅನೇಕರಿಗೆ ಆಧಾರಸ್ಥಂಭವಾಗಿ ನಿಂತವರು ಡಾ. ರಾಜೀವ್‌ರವರು. ತಾವು ಎಷ್ಟೇ ಎತ್ತರಕ್ಕೆ ಏರಿದರೂ ಬೆಳೆದು ಬಂದ ಹಾದಿಯನ್ನು ಎಂದಿಗೂ ಮರೆಯದ ಮಾಣಿಕ್ಯ ಅವರು. ರಾಜೀವ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಹಾಸನಕ್ಕೇ ಬಹುದೊಡ್ಡ ಕಾಣಿಕೆಯನ್ನು ಡಾ. ರಾಜೀವ್‌ರವರು ನೀಡಿದ್ದಾರೆ ಎಂದು ವಿವರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ರೋಗಿಗಳನ್ನು ಪ್ರೀತಿಯಿಂದ ಕಾಣಬೇಕು. ಅವರ ನೋವನ್ನು ಸಮಾಧಾನದಿಂದ ಕೇಳಬೇಕು, ರೋಗಿಗಳ ಪರಿಸ್ಥಿತಿಯನ್ನು ಅರಿತು ಚಿಕಿತ್ಸೆ ನೀಡುವ ವೇದ್ಯರ ಅವಶ್ಯಕತೆ ಇಂದಿನ ಸಮಾಜಕ್ಕೆ ಇದೆ ಎಂದು ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆಂಚೇಗೌಡ ತಿಳಿಸಿದರು. ಅವರು ನಗರದ ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವಾರ್ಷಿಕೋತ್ಸವ "ವಿಸ್ಮಯ ೨೦೨೫ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವೈದ್ಯ ವಿದ್ಯಾರ್ಥಿಗಳು ತಾವು ಉಪಚರಿಸುವ ರೋಗಿಗಳನ್ನು ಪ್ರೀತಿಯಿಂದ ಕಂಡು ಓದಿದ ವಿದ್ಯಾಸಂಸ್ಥೆಗೆ ಮತ್ತು ತಂದೆತಾಯಿಗಳಿಗೆ ಗೌರವ ತರುವಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.ಹಳ್ಳಿಯಿಂದ ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳುವ ಸಂದರ್ಭದಲ್ಲಿ ತಮ್ಮನ್ನು ತಾವು ಗಟ್ಟಿಮಾಡಿಕೊಳ್ಳುವ ಜೊತೆಗೆ ಅನೇಕರಿಗೆ ಆಧಾರಸ್ಥಂಭವಾಗಿ ನಿಂತವರು ಡಾ. ರಾಜೀವ್‌ರವರು. ತಾವು ಎಷ್ಟೇ ಎತ್ತರಕ್ಕೆ ಏರಿದರೂ ಬೆಳೆದು ಬಂದ ಹಾದಿಯನ್ನು ಎಂದಿಗೂ ಮರೆಯದ ಮಾಣಿಕ್ಯ ಅವರು. ರಾಜೀವ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಹಾಸನಕ್ಕೇ ಬಹುದೊಡ್ಡ ಕಾಣಿಕೆಯನ್ನು ಡಾ. ರಾಜೀವ್‌ರವರು ನೀಡಿದ್ದಾರೆ ಎಂದು ವಿವರಿಸಿದರು. ಮತ್ತೋರ್ವ ಮುಖ್ಯ ಅತಿಥಿ ಬೆಂಗಳೂರಿನ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಕಿರಣ್ ಕುಮಾರ್ ಕೆಂಪೇಗೌಡ ಮಾತನಾಡಿ, ರಾಜೀವ್ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ಹಾಸನ ಸುತ್ತಮುತ್ತ ಮಾತ್ರವಲ್ಲದೇ ದೂರದ ಜಿಲ್ಲೆಗಳಲ್ಲಿಯೂ ಜನಮನ್ನಣೆ ಪಡೆದಿದೆ. ಇದು ಆಸ್ಪತ್ರೆ ಮತ್ತು ಕಾಲೇಜಿನ ಸೇವೆ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳು ಪರಸ್ಪರ ಗೌರವಭಾವ ಬೆಳೆಸಿಕೊಂಡು ವೃತ್ತಿಯಲ್ಲಿ ಕೇವಲ ವೈದ್ಯರಾಗಿ ಉಳಿಯದೆ ಡಾ. ವಿ ರಾಜೀವ್‌ರವರಂತೆ ಇನ್ನಷ್ಟು ಜನರಿಗೆ ಉದ್ಯೋಗ ಕಲ್ಪಿಸಿಕೊಡುವಂತಾಗಬೇಕು ಎಂದು ಹೇಳಿದರು.ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ ಎನ್ ರತ್ನ ಅಧ್ಯಕ್ಷೀಯ ಭಾಷಣ ಮಾಡುತ್ತಾ, ಡಾ. ವಿ ರಾಜೀವ್‌ರವರ ಕನಸಿನ ಕೂಸಾದ ಆಯುರ್ವೇದ ಮಹಾವಿದ್ಯಾಲಯವು ಒಳ್ಳೆಯ ಬೆಳವಣಿಗೆಯನ್ನು ಕಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಕಾಣುವ ಕನಸು ಇದೆ. ಸ್ನಾತಕೋತ್ತರ ಪದವಿಯನ್ನೂ ಪ್ರಾರಂಭಿಸುವ ಆಸೆ ಇದೆ ಎಂದು ತಿಳಿಸಿದರು.ಸಂಸ್ಥೆಯ ಉಪಾಧ್ಯಕ್ಷ ಡಾ. ರಂಜಿತ್ ರಾಜೀವ್ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಕ್ರೀಡೆಯಲ್ಲಿಯೂ ಸಹಾ ಮುಂಚೂಣಿಯಲ್ಲಿದ್ದು, ಆಯುರ್ವೇದ ಮಹಾವಿದ್ಯಾಲಯವು ಶಿಕ್ಷಣ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಹೆಚ್ಚು ಮಾಡಿಕೊಳ್ಳಲು ಪ್ರತಿನಿತ್ಯ ಸಮಯ ನೀಡಿ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಡಾ. ಎಸ್ ಎ ನಿತಿನ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜೀವ್ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ಆರು ವರ್ಷಗಳಲ್ಲಿ ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶದೊಂದಿಗೆ ಅನೇಕ ರ್‍ಯಾಂಕ್‌ಗಳನ್ನು ಪಡೆದಿದ್ದಾರೆ. ಕಾಲೇಜು ಉತ್ತಮ ಆಯುರ್ವೇದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಹಾಗೂ ಸುತ್ತಮುತ್ತಲ ರಾಜ್ಯಗಳಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಮುಂದೆ ಸ್ನಾತಕೋತ್ತರ ವಿಷಯಗಳನ್ನು ಕಾಲೇಜಿನಲ್ಲಿ ತರುವುದರ ಜೊತೆಗೆ ವಿಶ್ವಮಾನ್ಯ ಗುಣಮಟ್ಟದ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಆಸ್ಪತ್ರೆ ಮತ್ತು ಕಾಲೇಜಿನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಸಿಬ್ಬಂದಿಯನ್ನು ಗುರುತಿಸಿ ಗೌರವಿಸಲಾಯಿತು. ಕಾಲೇಜಿನ ವಾಷಿಕೋತ್ಸವದ ಅಂಗವಾಗಿ ನಡೆಸಿದ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ. ದೀಪ್ತಿ ಪಾಟೀಲ್ ಸ್ವಾಗತಿಸಿದರು. ಡಾ. ಕೃಷ್ಣಪ್ರಿಯ ವಂದಿಸಿದರು. ಡಾ. ಡಯಾನ ಮತ್ತು ಡಾ. ಮೋನಿಕ ಸಿಂಗ್ ಕಾರ್ಯಕ್ರಮ ನಿರೂಪಿಸಿದರು.