ಕನಕಪುರ: ತಾಲೂಕು ಕಚೇರಿಯಲ್ಲಿ 6 ವರ್ಷದಿಂದ ನೌಕರನಲ್ಲದ ವ್ಯಕ್ತಿಗೆ ಅಕ್ರಮವಾಗಿ ಕೆಲಸ ಮಾಡಲು ಅವಕಾಶ ನೀಡಿರುವ ತಹಸೀಲ್ದಾರ್, ಉಪ ತಹಸೀಲ್ದಾರ್ ಅವರನ್ನು ತಕ್ಷಣ ಅಮಾನತುಗೊಳಿಸಿ, ಉನ್ನತ ಮಟ್ಟದ ತನಿಖೆಗೆ ಆದೇಶಿಸುವಂತೆ ರಾಜ್ಯ ರೈತಸಂಘದ ಮುಖಂಡ ಕುಮಾರಸ್ವಾಮಿ ಆಗ್ರಹಿಸಿದರು. ತಾಲೂಕು ಕಚೇರಿ ಮುಂದೆ ನೂರಾರು ರೈತರೊಂದಿಗೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ, ಕಂದಾಯ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಉಪವಿಭಾಗಾಧಿಕಾರಿ ಬಿಸ್ನೋಯ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರು ಹಾಗೂ ರೈತರ ಪಹಣಿ, ಖಾತಾ, ಜಾತಿ, ಆದಾಯ ಪ್ರಮಾಣಪತ್ರ, ಕೃಷಿ ಸಂಬಂಧಿತ ದಾಖಲೆಗಳಿಗಾಗಿ ದಿನನಿತ್ಯ ನೂರಾರು ಜನ ಬರುತ್ತಾರೆ. ಆದರೆ ಪ್ರಸ್ತುತ ಕನಕಪುರ ತಾಲೂಕಿನ ತಹಸೀಲ್ದಾರ್, ಉಪ ತಹಸೀಲ್ದಾರ್ ಸರ್ಕಾರಿ ನೌಕರನಲ್ಲದ ಯಾವುದೇ ನೇಮಕಾತಿ ಆದೇಶವಿಲ್ಲದ ಖಾಸಗಿ ವ್ಯಕ್ತಿಯೊಬ್ಬರಿಗೆ ಕಚೇರಿಯಲ್ಲಿ ಕಂಪ್ಯೂಟರ್, ಕಡತಗಳನ್ನು ನಿರ್ವಹಿಸಲು ಹಾಗೂ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲು ಅಕ್ರಮ ಅವಕಾಶ ಮಾಡಿಕೊಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಹರಿಹಾಯ್ದರು. ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಕಳೆದ ವಾರ ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ವಿನಯ್ ಎಂಬ ವ್ಯಕ್ತಿ ಸಿಕ್ಕಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಈ ವ್ಯಕ್ತಿ ರೈತರಿಂದ ಪಹಣಿ ತಿದ್ದುಪಡಿ, ಖಾತೆ ಬದಲಾವಣೆಗೆ ಲಂಚ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಅನಧಿಕೃತ ವ್ಯಕ್ತಿ ಕೈಗೆ ಆಸ್ತಿಪಾಸ್ತಿಯ ಮಹತ್ವದ ದಾಖಲೆಗಳು ಸಿಕ್ಕರೆ ದುರ್ಬಳಕೆ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಈ ವ್ಯಕ್ತಿ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಒತ್ತಾಯಿಸಿದರು.
ಒಬ್ಬ ತಹಸೀಲ್ದಾರ್ ತಮ್ಮ ಕಚೇರಿ ಪಾವಿತ್ರ್ಯತೆ ಕಾಪಾಡುವ ಬದಲು, ಅನಧಿಕೃತ ವ್ಯಕ್ತಿಗಳಿಗೆ ಕಚೇರಿಯನ್ನು ಖಾಸಗಿ ದಂಧೆಯನ್ನಾಗಿ ಮಾಡಿಕೊಟ್ಟಿರುವುದು ಕಂದಾಯ ಇಲಾಖೆಗೆ ಕಪ್ಪುಚುಕ್ಕೆ ಇಟ್ಟಂತೆ. ತಹಸೀಲ್ದಾರ್ ಉಪತಹಸೀಲ್ದಾರ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆ ಪ್ರಾದೇಶಿಕ ಆಯುಕ್ತರು ಅಥವಾ ಐಎಎಸ್ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಿ, ಈ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ದೂರಿದರು.ಪ್ರತಿಭಟನೆಯಲ್ಲಿ ಸ್ಟುಡಿಯೋ ಚಂದ್ರು, ರೈತ ಸಂಘದ ತಾಲೂಕು ಅಧ್ಯಕ್ಷ ಪುಟ್ಟಮಾದೇಗೌಡ, ಜಿಲ್ಲಾ ಕಾರ್ಯದರ್ಶಿ ಕುಮಾರ್, ಮುಖಂಡರಾದ ಶಿವರಾಜು, ರವಿಕುಮಾರ್, ರಂಗಪ್ಪ, ರಾಘವೇಂದ್ರ, ಮಲ್ಲಪ್ಪ, ಕೆಂಪಣ್ಣ ಇತರರು ಪಾಲ್ಗೊಂಡಿದ್ದರು.
ಕೆ ಕೆ ಪಿ ಸುದ್ದಿ 01:ಕನಕಪುರ ತಾಲೂಕು ಕಚೇರಿಯಲ್ಲಿ ಕೆಲಸ ಮಾಡಲು ಖಾಸಗಿ ವ್ಯಕ್ತಿಗೆ ಅವಕಾಶ ಕೊಟ್ಟಿರುವ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.