ನೇಹಾ ಹತ್ಯೆ ಪ್ರಕರಣ: ಕಪ್ಪುಪಟ್ಟಿ ಧರಿಸಿ ಆಕ್ರೋಶ

| Published : Apr 25 2024, 01:05 AM IST

ಸಾರಾಂಶ

ನೇಹಾ ಹತ್ಯೆ ಅಮಾನವೀಯ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ.

ಸಂಡೂರು: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಈ ವ್ಯಕ್ತಿಗೆ ಸಹಕರಿಸಿದ ವ್ಯಕ್ತಿಗಳಿಗೂ ಸೂಕ್ತ ಶಿಕ್ಷೆ ನೀಡುವ ಮೂಲಕ ಆಕೆಯ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ತಾಲೂಕು ವೀರಶೈವ ಲಿಂಗಾಯತ ಸಂಘದಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ಸಂಘದ ಪದಾಧಿಕಾರಿಗಳು, ಸದಸ್ಯರು ಕಪ್ಪು ಪಟ್ಟಿಯನ್ನು ಧರಿಸಿ, ಸಂಘದ ಕಚೇರಿಯಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ, ತಮ್ಮ ಮನವಿ ಪತ್ರವನ್ನು ತಹಶೀಲ್ದಾರ್ ಜಿ.ಅನಿಲ್‌ಕುಮಾರ್ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ಚಿತ್ರಿಕಿ ಸತೀಶಕುಮಾರ್, ನೇಹಾ ಹತ್ಯೆ ಅಮಾನವೀಯ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಇಂತಹ ದುಷ್ಕೃತ್ಯಗಳು ಇನ್ನು ಮುಂದೆ ನಡೆಯದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಸಿದರು.ಸಂಘದ ಕಾರ್ಯದರ್ಶಿಗಳಾದ ಜಿ. ವಿರೇಶ್, ಕಿನ್ನೂರೇಶ್ವರ ಮಾತನಾಡಿ, ಬೇರೆ ರಾಜ್ಯಗಳಲ್ಲಿ ಇಂತಹ ಹೇಯ ಕೃತ್ಯಗಳನ್ನು ಎಸಗುವವರಿಗೆ ಮರಣದಂಡನೆ ಶಿಕ್ಷೆ ನೀಡುವಂತೆ, ರಾಜ್ಯದಲ್ಲಿಯೂ ಸೂಕ್ತ ಕಾನೂನನ್ನು ರೂಪಿಸಿ, ಇಂತಹ ದುಷ್ಕರ್ಮಿಗಳಿಗೆ ಮರಣ ದಂಡನೆ ಅಥವಾ ಶೂಟೌಟ್‌ನಂತಹ ಶಿಕ್ಷೆ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಬಿ.ಜಿ. ಮಂಜುಳಾ, ಶಿವಲೀಲಾ ವೀರೇಶ್ ಮಾತನಾಡಿ, ನೇಹಾ ಹಿರೇಮಠ್ ಅವರನ್ನು ಹತ್ಯೆಗೈದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಅಪರಾಧಿಗಳಿಗೆ ಉಗ್ರ ಶಿಕ್ಷೆಯಾಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ. ಸರ್ಕಾರ ಇಂತಹ ದುಷ್ಕರ್ಮಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದರೆ ಮಾತ್ರ, ಇದು ಇತರರಿಗೆ ಪಾಠವಾಗಲಿದೆ. ಇಂತಹ ದುಷ್ಕೃತ್ಯಗಳು ನಿಲ್ಲಲಿವೆ. ಸರ್ಕಾರ ನೇಹಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಉಪಾಧ್ಯಕ್ಷ ಪಿ.ರವಿಕುಮಾರ್, ನಿರ್ದೇಶಕ ಎಸ್.ಟಿ.ಡಿ. ರುದ್ರಗೌಡ, ಮುಖಂಡರಾದ ಜಿ. ಏಕಾಂಬ್ರಪ್ಪ, ಜಿ.ಟಿ. ಪಂಪಾಪತಿ, ಕಿನ್ನೂರೇಶ್ವರ, ಮೇಲುಸೀಮೆ ಶಂಕ್ರಪ್ಪ, ವಿಜಯಕುಮಾರ್, ವಿಶ್ವಮೂರ್ತಿ, ಬಿ.ಜಿ. ಸಿದ್ದೇಶ್, ಗಡಂಬ್ಲಿ ಚನ್ನಬಸಪ್ಪ, ಭುವನೇಶ್‌ಮೇಟಿ, ಅರಳಿ ಕುಮಾರಸ್ವಾಮಿ, ವಿ.ಜೆ. ಶ್ರೀಪಾದಸ್ವಾಮಿ, ಟಿ.ಎಂ. ಶಿವಕುಮಾರ್, ಎಂ.ವಿ. ಹಿರೇಮಠ, ಬಿ.ಎಂ. ಮಹಾಂತೇಶ್, ಮಲ್ಲಿಕಾರ್ಜುನ, ಎಚ್.ಎಂ. ಸುರೇಶ್, ದಕ್ಷಿಣಮೂರ್ತಿ, ಹೇಮಲತಾ, ಮಧುಮತಿ, ಗೋನಾಳ್ ನಿರ್ಮಲಾ, ಎಸ್.ಡಿ. ಪ್ರೇಮಲೀಲಾ, ನಾಗವೇಣಿ, ಪುಷ್ಪಾವತಿ, ಎಚ್.ಎಂ. ವಿಜಯಲಕ್ಷ್ಮಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.