ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತೊಡೆದುಹಾಕಿ, ವ್ಯವಸ್ಥೆಯಲ್ಲಿನ ನ್ಯೂನತೆ ಸರಿಪಡಿಸಿ ದಕ್ಷತೆಯನ್ನು ಹೆಚ್ಚಿಸುವ ಏಕೈಕ ದೃಷ್ಟಿಯಿಂದ ವಿಬಿ ರಾಮ್ ಜೀ ಕಾಯ್ದೆಯನ್ನು ರೂಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತೊಡೆದುಹಾಕಿ, ವ್ಯವಸ್ಥೆಯಲ್ಲಿನ ನ್ಯೂನತೆ ಸರಿಪಡಿಸಿ ದಕ್ಷತೆಯನ್ನು ಹೆಚ್ಚಿಸುವ ಏಕೈಕ ದೃಷ್ಟಿಯಿಂದ ವಿಬಿ ರಾಮ್ ಜೀ ಕಾಯ್ದೆಯನ್ನು ರೂಪಿಸಲಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತಿಳಿಸಿದರು.

ಮನರೇಗಾದಲ್ಲಿ ಭ್ರಷ್ಟಾಚಾರ ಮತ್ತು ಹಣಕಾಸಿನ ಸೋರಿಕೆ, ದುರ್ಬಲ ಮೇಲ್ವಿಚಾರಣೆ ಮತ್ತು ಸಾಮಾಜಿಕ ಹೊಣೆಗಾರಿಕೆಯಲ್ಲಿ ಅನುಷ್ಠಾನಗೊಳಿಸುವ ಏಜೆನ್ಸಿಗಳು, ಲೆಕ್ಕಪರಿಶೋಧನಾ ಕಾರ್ಯ ವಿಧಾನಗಳು ಮತ್ತು ಕುಂದುಕೊರತೆ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆ ಇತ್ತು. ಕಳಪೆ ಮೇಲ್ವಿಚಾರಣೆ, ದುರ್ಬಲ ತಾಂತ್ರಿಕ ಯೋಜನೆ ಮತ್ತು ಡಿಜಿಟಲ್ ಸಾಧನಗಳ ಪರಿಣಾಮಕಾರಿಯಲ್ಲದ ಬಳಕೆಯಿಂದಾಗಿ ಸರಿಯಾದ ನಿಟ್ಟಿನಲ್ಲಿ ಜಾರಿಯಾಗಲಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಬಿ ರಾಮ್ ಜೀ ಕಾಯ್ದೆ ಭಾರತದ ಗ್ರಾಮೀಣ ಉದ್ಯೋಗ ಮತ್ತು ಅಭಿವೃದ್ಧಿ ಚೌಕಟ್ಟಿನ ನಿರ್ಣಾಯಕ ಸುಧಾರಣೆಗೆ ಅನುವು ಮಾಡಿಕೊಟ್ಟಿದೆ. ಈ ಕಾಯ್ದೆ ೨೦೦೫ರ ಮನರೇಗಾ ಬದಲಿಗೆ ಹೊಸ ಕಾಯ್ದೆಯಾಗಿ ಆಧುನಿಕ, ಸಾಂಸ್ಥಿಕ ಚೌಕಟ್ಟನ್ನು ರೂಪಿಸಲಾಗಿದ್ದು, ಅದು ಜೀವನೋಪಾಯ ಭದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ವಿಕಸಿತ ಭಾರತ ೨೦೪೭ರ ರಾಷ್ಟ್ರೀಯ ಮುನ್ನೋಟಕ್ಕೆ ಪೂರಕವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಬಲೀಕರಣ, ಪ್ರಗತಿ, ಸಮನ್ವಯ ಮತ್ತು ಪರಿಪಕ್ವತೆ ತತ್ವಗಳನ್ನಾಧರಿಸಿರುವ ಈ ಕಾಯ್ದೆ, ಗ್ರಾಮೀಣ ಉದ್ಯೋಗ ವ್ಯವಸ್ಥೆಯಲ್ಲಿ ಪರಿವರ್ತನೆ ತರುವುದಲ್ಲದೆ, ಕಲ್ಯಾಣ ಮಧ್ಯಸ್ಥಿಕೆಯನ್ನು ಅಭಿವೃದ್ಧಿಯ ಏಕೀಕೃತ ಸಾಧನವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇದು ಗ್ರಾಮೀಣ ಕುಟುಂಬಗಳಿಗೆ ಆದಾಯ ಭದ್ರತೆಯನ್ನು ಬಲವರ್ಧನೆಗೊಳಿಸುವುದಲ್ಲದೆ, ಆಡಳಿತ ಮತ್ತು ಹೊಣೆಗಾರಿಕೆಯನ್ನು ಆಧುನೀಕರಣಗೊಳಿಸುತ್ತದೆ. ದೀರ್ಘಕಾಲದ ಮತ್ತು ಉತ್ಪಾದಕ ಗ್ರಾಮೀಣ ಸ್ವತ್ತುಗಳನ್ನು ಸೃಷ್ಟಿಸುವ ಮೂಲಕ ವೇತನ ಉದ್ಯೋಗದೊಂದಿಗೆ ಸಂಯೋಜನೆಗೊಂಡಿದೆ ಎಂದರು.

ಕೇಂದ್ರ- ರಾಜ್ಯಗಳ ಒಳಗೊಳ್ಳುವಿಕೆಯ ಭಾಗವಾಗಿ ಶೇ. ೬೦:೪೦ ಆಧಾರದಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮನರೇಗಾ ಸರಾಸರಿಗೆ ಹೋಲಿಸಿದರೆ ರಾಜ್ಯಗಳು ಸುಮಾರು ೧೭ ಸಾವಿರ ಕೋಟಿ ರು. ಲಾಭ ಗಳಿಸುವ ನಿರೀಕ್ಷೆ ಇದೆ. ಈ ಮಾದರಿಯು ರಾಜ್ಯ ಸ್ವಾಯತ್ತತೆಯನ್ನು ಕಾಪಾಡಿ ಹಣಕಾಸಿನ ಶಿಸ್ತನ್ನು ಬಲಪಡಿಸುತ್ತದೆ ಎಂದು ಪ್ರತಿಪಾದಿಸಿದರು.

ಈ ಯೋಜನೆಯ ಬಗ್ಗೆ ವಿರೋಧಿಗಳು ಅಪಪ್ರಚಾರದಲ್ಲಿ ತೊಡಗಿವೆ. ಇದು ಸರಿಯಲ್ಲ. ಅದರ ಒಳ ಹೊಕ್ಕು ಸೌವಲತ್ತುಗಳ ಬಗ್ಗೆ ಪರಾಮರ್ಶೆ ಮಾಡಿದರೆ ಮಾತ್ರ ಇದರ ನಿಜ ಸ್ವರೂಪದ ಮಾಹಿತಿ ಲಭ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್, ಮುಖಂಡರಾದ ಎಸ್. ಸಚ್ಚಿದಾನಂದ, ಸಿ.ಟಿ.ಮಂಜುನಾಥ್. ಎಚ್.ಆರ್. ಅಶೋಕ್‌ಕುಮಾರ್, ನಾಗಾನಂದ ಗೋಷ್ಠಿಯಲ್ಲಿದ್ದರು.