ನಂದಿ ಗಿರಿಧಾಮದಲ್ಲಿ 2025ರ ಡಿಸೆಂಬರ್ 31 ರ ಮದ್ಯಹ್ನ 3:00 ಗಂಟೆಯಿಂದ 2026ರ ಜ. 01 ರ ಬೆಳಿಗ್ಗೆ 10:00 ಗಂಟೆಯವರೆಗೆ ಸಾರ್ವಜನಿಕ ನಿಷೇಧಾಜ್ಞೆಯನ್ನು ವಿಧಿಸಿ ಆದೇಶಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹೊಸ ವರ್ಷಾಚರಣೆ ಹಿನ್ನೆಲೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಲಗ್ಗೆ ಹಾಕಿದ್ದು, ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು.ಜಿಲ್ಲೆಯ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಗುರುವಾರವಾದ ಇಂದು 20 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಭೇಟಿ ನೀಡಿ ಗಿರಿಧಾಮದ ಪ್ರಾಕೃತಿಕ ಸೌಂದರ್ಯವನ್ನು ಸವಿದಿದ್ದು, ಸೆಲ್ಫಿ ಸ್ಪಾಟ್ ಅವಲಬೆಟ್ಟ, ಶ್ರೀನಿವಾಸ ಸಾಗರ, ನಂದಿ ದೇಗುಲ ರಂಗಸ್ಥಳಕ್ಕೆ, ಈಶಾ ಕೇಂದ್ರಕ್ಕೆ ಲಕ್ಷಾಂತರ ಪ್ರವಾಸಿಗರ ಭೇಟಿ ಮುಂದುವರೆದಿತ್ತು.
ನೂತನ ವರ್ಷಾಚರಣೆ ಹಿನ್ನೆಲೆಯಲ್ಲಿ 2026ರ ಜ. 1ರಂದು ಹೊಸ ದಿನಾಚರಣೆಯ ಸಂಬಂಧವಾಗಿ ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಸ್ಥಳವಾದ ನಂದಿ ಗಿರಿಧಾಮದ ಪರಿಸರವನ್ನು, ಪಾವಿತ್ರ್ಯತೆಯನ್ನು ಕಾಪಾಡುವ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಪ್ರವಾಸಿಗರು ಆ ದಿನ ನಂದಿ ಗಿರಿಧಾಮಕ್ಕೆ ಬಂದು ಗುಂಪು-ಗುಂಪಾಗಿ ತಿರುಗಾಡುವುದು, ಮದ್ಯಪಾನ ಮಾಡುವುದು, ಪ್ಲಾಸ್ಟಿಕ್ ಬಾಟಲ್ ಗಳನ್ನು ಎಸೆಯುವುದರಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ಇದನ್ನು ತಡೆಗಟ್ಟುವ ಸಲುವಾಗಿ ನಂದಿ ಗಿರಿಧಾಮದಲ್ಲಿ 2025ರ ಡಿಸೆಂಬರ್ 31 ರ ಮದ್ಯಹ್ನ 3:00 ಗಂಟೆಯಿಂದ 2026ರ ಜ. 01 ರ ಬೆಳಿಗ್ಗೆ 10:00 ಗಂಟೆಯವರೆಗೆ ಸಾರ್ವಜನಿಕ ನಿಷೇಧಾಜ್ಞೆಯನ್ನು ವಿಧಿಸಿ ಆದೇಶಿಸಲಾಗಿತ್ತು.ನಂದಿಗಿರಿಧಾಮ ವೀಕ್ಷಣೆಗೆ ಸಹಸ್ರಾರು ಮಂದಿ ಪ್ರವಾಸಿಗರು ವರ್ಷದ ಮೊದಲ ದಿನವಾದ ಗುರುವಾರ ಆಗಮಿಸಿದ್ದು, ಬೆಟ್ಟದಲ್ಲಿ ಮೋಜು, ಮಸ್ತಿಯಲ್ಲಿ ತೊಡಗಿದ್ದ ದೃಶ್ಯಗಳು ಎಲ್ಲೆಡೆ ಕಂಡು ಬಂದವು. ವಿಶೇಷವಾಗಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳ ಸಾರ್ವಜನಿಕರು, ಬೆಂಗಳೂರಿನ ಐಟಿ, ಬಿಟಿ ಉದ್ಯೋಗಿಗಳು, ಸರ್ಕಾರಿ ಅಧಿಕಾರಿಗಳು, ನೌಕರರು, ಖಾಸಗಿ ಉದ್ಯೋಗಿಗಳು, ಪರಿಸರ ಪ್ರಿಯರು ಗಿರಿಧಾಮಕ್ಕೆ ಆಗಮಿಸಿ ಸೂರ್ಯಾಸ್ತದ ಕ್ಷಣಗಳನ್ನು ಬೆಳ್ಳಿ ಮೋಡಗಳ ಮಧ್ಯೆ ಕಣ್ಣು ತುಂಬಿಸಿಕೊಂಡರು.ನಂದಿಗಿರಿಧಾಮಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದ ಹಿನ್ನಲೆ ಬೆಟ್ಟದ ಕೆಳಗಡೆ ಸುಮಾರು 6 ಕಿ.ಮೀ ನಷ್ಟು ಸಂಚಾರ ದಟ್ಟಣೆ ಉಂಟಾಗಿದೆ. ನಂದಿ ಬೆಟ್ಟಕ್ಕೆ ಮೇಲಕ್ಕೆ ಹೋಗಲು ಕೆಳಗಡೆ ಬಾರಲು ಆಗದೆ ಕೆಲವು ಪ್ರವಾಸಿಗರ ಪರದಾಡಿದರು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟರು.
ಜಿಲ್ಲೆಯ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದಿರುವ ನಂದಿ ಭೋಗನಂದೀಶ್ವರ ದೇವಾಲಯ, ರಂಗಸ್ಥಳದ ಶ್ರೀ ರಂಗನಾಥ ಸ್ವಾಮೀ ದೇವಾಲಯ ಆವಲಗುರ್ಕಿಯ ಈಶಾ ಫೌಂಡೇಶನ್, ಗೌರಿಬಿದನೂರಿನ ವಿದುರಾಶ್ವತ್ಥ, ಚಿಂತಾಮಣಿಯ ಕೈಲಾಸಗಿರಿ, ಕೈವಾರ, ಮುರಗಮಲ್ಲ, ಬಾಗೇಪಲ್ಲಿ ಗಡಿದಂ ದೇವಾಲಯ ಹಾಗೂ ಸೆಲ್ಫಿ ಸ್ಪಾಟ್ ಅವಲಬೆಟ್ಟಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ವಿಶೇಷವಾಗಿ ನಂದಿ ಬೆಟ್ಟ, ಆವಲಗುರ್ಕಿಯ ಈಶಾ ಫೌಂಡೇಶನ್ ಮತ್ತು ಅವಲಬೆಟ್ಟಕ್ಕೆ ಯುವಕ, ಯುವತಿಯರ ಸಂಖ್ಯೆ ಅಧಿಕವಾಗಿದೆ. ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ವೀಕ್ಷಣೆಗೂ ಪ್ರವಾಸಿಗರು ಭೇಟಿ ನೀಡಿದರು.ಹೋಟೆಲ್, ಬಾರ್ ರೆಸ್ಟೋರೆಂಟ್‌ಗಳು ಪುಲ್:
ನೂತನ ವರ್ಷಾಚರಣೆ ಭಾಗವಾಗಿ ಪ್ರವಾಸೋದ್ಯಮ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ತಮ್ಮ ಕುಟುಂಬ ಸಮೇತರಾಗಿ ಪ್ರವಾಸಿಗರು ಆಗಮಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹೆದ್ದಾರಿ ಅಕ್ಕಪಕ್ಕದ ಹೋಟೆಲ್ ಸೇರಿದಂತೆ ಬಾರ್ ಅಂಡ್ ರೆಸ್ಟೋರೆಂಟ್‌ಗಳು ಭರ್ತಿ ಆಗಿದ್ದವು. ಪ್ರವಾಸಿಗರ ದಟ್ಟಣೆಯಿಂದ ಹೋಟೆಲ್‌ಗಳು ರಷ್ ಆಗಿದ್ದವು, ಬಾರ್, ಡಾಬಾಗಳಲ್ಲಿ ಜನದಟ್ಟಣೆ ಕುಂಡು ಬಂತು. ಪ್ರವಾಸಿಗರು ನಿರೀಕ್ಷೆಗೂ ಮೀರಿ ಆಗಮಿಸಿದ್ದರಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ವಾಹನಗಳ ದಟ್ಟಣೆ ಕಂಡು ಬಂದು ಕೆಲಕಾಲ ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕಾಯಿತು. ಜಿಲ್ಲೆಯ ಪ್ರವಾಸಿ ತಾಣಗಳ ಬಳಿ ಕೂಡ ವ್ಯಾಪಾರ ವಹಿವಾಟು ಜೋರಾಗಿತ್ತು.ಸಿಕೆಬಿ- 4 ನೂತನ ವರ್ಷಾಚರಣೆ ಹಿನ್ನಲೆ ಆವಲಗುರ್ಕಿಯ ಈಶಾ ಪೌಂಡೇಶನ್ ನಲ್ಲಿ ತುಂಬಿ ತುಳುಕುತ್ತಿದ್ದ ಪ್ರವಾಸಿಗರು