ಫೆ 22ರಿಂದ ನಾಲ್ಕು ದಿನ ನಿರ್ದಿಗಂತ ಉತ್ಸವ: ನಟ ಪ್ರಕಾಶ ರಾಜ್

| Published : Feb 04 2025, 12:34 AM IST

ಸಾರಾಂಶ

ಫೆ. ೨೨ರಂದು ಬೆಳಗ್ಗೆ ೯.೩೦ಕ್ಕೆ ಗಣೇಶ ಎನ್. ದೇವಿ ಉತ್ಸವಕ್ಕೆ ಚಾಲನೆ ನೀಡುವರು. ೧೦.೩೦ಕ್ಕೆ ರಾಜೇಂದ್ರ ಚೆನ್ನಿ ಆಶಯ ಭಾಷಣ ಮಂಡಿಸುವರು. ೧೨ ಗಂಟೆಗೆ ಶಕೀಲ್ ಅಹ್ಮದ್ ನಿರ್ದೇಶನದ ಅನಾಮಿಕನ ಸಾವು ನಾಟಕ ನಡೆಯಲಿದೆ.

ಧಾರವಾಡ:

ನಿರ್ದಿಗಂತ ಸಂಸ್ಥೆ ವತಿಯಿಂದ ಫೆ. ೨೨ರಿಂದ ೨೫ರ ವರೆಗೆ ನಗರದ ಸೃಜನಾ ರಂಗ ಮಂದಿರದಲ್ಲಿ ನಿರ್ದಿಗಂತ ಉತ್ಸವ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಸಂಸ್ಥಾಪಕ, ನಟ ಪ್ರಕಾಶ ರಾಜ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. ೨೨ರಂದು ಬೆಳಗ್ಗೆ ೯.೩೦ಕ್ಕೆ ಗಣೇಶ ಎನ್. ದೇವಿ ಉತ್ಸವಕ್ಕೆ ಚಾಲನೆ ನೀಡುವರು. ೧೦.೩೦ಕ್ಕೆ ರಾಜೇಂದ್ರ ಚೆನ್ನಿ ಆಶಯ ಭಾಷಣ ಮಂಡಿಸುವರು. ೧೨ ಗಂಟೆಗೆ ಶಕೀಲ್ ಅಹ್ಮದ್ ನಿರ್ದೇಶನದ ಅನಾಮಿಕನ ಸಾವು ನಾಟಕ, ೩ ಗಂಟೆಗೆ ಶ್ರೀ ಮಂಜುನಾಥ ಶ್ರೀಕೃಷ್ಣ ಪಾರಿಜಾತ ಬಯಲಾಟ ಸಂಘದಿಂದ ಶ್ರೀಕೃಷ್ಣ ಪಾರಿಜಾತ ಪ್ರದರ್ಶನ, ೪ ಗಂಟೆಗೆ ನೆಲ-ಜಲ-ಬದುಕು ಕುರಿತು ಕೃಪಾಕರ ಸೇನಾನಿ ಮಾತನಾಡುವರು. ಸಂಜೆ ೫.೩೦ಕ್ಕೆ ರಾಘವ ಕಮ್ಮಾರ ತಂಡದಿಂದ ರಂಗಸಂಗೀತ ಹಾಗೂ ರಾತ್ರಿ ೭ ಗಂಟೆಗೆ ಶ್ರವಣ ಹೆಗ್ಗೋಡು ನಿರ್ದೇಶನದ ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್ ನಾಟಕ ಪ್ರದರ್ಶನವಾಗಲಿದೆ ಎಂದರು.

ಫೆ. ೨೩ರಂದು ಬೆಳಗ್ಗೆ ೯.೩೦ಕ್ಕೆ ಮೊದಲ ದಿನ ಪ್ರದರ್ಶನಗೊಂಡ ನಾಟಕಗಳ ಕುರಿತು ಚರ್ಚೆ, ೧೦.೩೦ಕ್ಕೆ ಸಮಕಾಲೀನ ರಂಗಭೂಮಿ: ಕಸಬುಗಾರಿಕೆಯ ಹುಡುಕಾಟ ಕುರಿತು ಕೆ.ವೈ. ನಾರಾಯಣಸ್ವಾಮಿ ಮಾತನಾಡಲಿದ್ದಾರೆ. ಮಧ್ಯಾಹ್ನ ೧೨ ಗಂಟೆಗೆ ಡಾ. ಸವಿತಾ ರಾಣಿ ನಿರ್ದೇಶನದ ರಶೀದಿ ಟಿಕೆಟ್ ನಾಟಕವನ್ನು ನಿರ್ದಿಗಂತ ತಂಡ ಪ್ರಸ್ತುತಪಡಿಸಲಿದೆ. ೩ ಗಂಟೆಗೆ ಕಥಾ-ಕಾವ್ಯ ಕಾರಣ ಕುರಿತು ಆರಿಫ್ ರಾಜ, ಚಿದಾನಂದ ಸಾಲಿ, ಅನಸೂಯ ಕಾಂಬ್ಳಿ, ಟಿ.ಎಸ್. ಗೊರವರ, ೪ ಗಂಟೆಗೆ ಸಮಕಾಲೀನ ಸೃಜನಶೀಲತೆಯ ಸ್ವರೂಪ ಕುರಿತು ವಿನಯ ಒಕ್ಕುಂದ ಮಾತನಾಡುವರು. ಸಂಜೆ ೫.೩೦ಕ್ಕೆ ಕಲ್ಯಾಣ ಕರ್ನಾಟಕ ಸೂಫಿಯಾನ್ ಗ್ರುಪ್‌ನಿಂದ ಕವ್ವಾಲಿ ಹಾಗೂ ೭ ಗಂಟೆಗೆ ಶಕೀಲ್ ಅಹ್ಮದ್ ನಿರ್ದೇಶನದ ತಿಂಡಿಗೆ ಬಂದ ತುಂಡೇರಾಯ ನಾಟಕವನ್ನು ನಿರ್ದಿಗಂತ ತಂಡ ಪ್ರಸ್ತುತಪಡಿಸಲಿದೆ ಎಂದರು.

ಫೆ. ೨೪ರಂದು ಬೆಳಗ್ಗೆ ೯.೩೦ಕ್ಕೆ ಹಿಂದಿನ ದಿನದ ನಾಟಕಗಳ ಚರ್ಚೆ, ೧೦.೩೦ಕ್ಕೆ ವೃತ್ತಿ ರಂಗಭೂಮಿಯ ಸಾತಥ್ಯತೆಯ ಪ್ರಶ್ನೆ ಕುರಿತು ಪ್ರಕಾಶ ಗರುಡ ಮಾತನಾಡುವರು. ೧೨ ಗಂಟೆಗೆ ಹೊಸಕೋಟೆಯ ಬಹುತ್ವ ಪ್ರತಿಷ್ಠಾನ ತಂಡದಂದ ಸಹನಾ ಪಿಂಜರ್ ನಿರ್ದೇಶನದ ಸುಣ್ಣದ ಗೊಂಬೆ ನಾಟಕ, ೩ ಗಂಟೆಗೆ ರಜನಿ ಗರುಡ ನಿರ್ದೇಶನದಲ್ಲಿ ಅದ್ಭುತ ರಾಮಾಯಣ ತೊಗಲು ಗೊಂಬೆಯಾಟ ಪ್ರದರ್ಶನವಾಗಲಿದೆ. ೪ ಗಂಟೆಗೆ ತತ್ವಪದ-ಅಂತರಂಗ ಕುರಿತು ರೆಹಮತ್ ತರಿಕೆರೆ ಮಾತನಾಡುವರು. ೫.೩೦ಕ್ಕೆ ಸಮತೆಯ ಹಾಡುಗಳು, ೭ ಗಂಟೆಗೆ ಮಂಗಳೂರಿನ ಸ್ತಿತ್ವ ತಂಡದಿಂದ ಅರುಣ ಲಾಲ್ ನಿರ್ದೇಶನದ ಮತ್ತಾಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಫೆ. ೨೫ರಂದು ಬೆಳಗ್ಗೆ ೯.೩೦ಕ್ಕೆ ನಾಟಕಗಳ ಚರ್ಚೆ, ೧೦.೩೦ಕ್ಕೆ ಜನಪದ ರಂಗ ಪ್ರದರ್ಶನ ಮತ್ತು ಸ್ಥಿತ್ಯಂತರಗಳು ಕುರಿತು ವಿಕ್ರಂ ವಿಸಾಜಿ ಮಾತನಾಡಲಿದ್ದಾರೆ. ೧೨ ಗಂಟೆಗೆ ನಿರ್ದಿಗಂತ ತಂಡದಿಂದ ಅಮಿತ ರೆಡ್ಡಿ ನಿರ್ದೇಶನದ ಮೈ ಮನಗಳ ಸುಳಿಯಲ್ಲಿ ನಾಟಕ, ೩ ಗಂಟೆಗೆ ಸಿದ್ದಾಪುರದ ಶ್ರೀ ಗುರುಪ್ರಸಾದ ಜನಪದ ತಂಡದಿಂದ ಚೌಡಕಿ ಪದ ಪ್ರಸ್ತುತವಾಗಲಿದೆ. ೪ ಗಂಟೆಗೆ ಜನ ಚಳವಳಿ: ಹೋರಾಟದ ಹಾದಿಗಳು ಕುರಿತು ಮೇಟಿ ಮಲ್ಲಿಕಾರ್ಜುನ ಮಾತನಾಡುವರು. ಸಂಜೆ ೫.೩೦ಕ್ಕೆ ಮೈಸೂರಿನ ನಾವು ಬ್ಯಾಂಡ್ ತಂಡದಿಂದ ಸಂಗೀತ, ೭ ಗಂಟೆಗೆ ಧಾರವಾಡದ ಆಟಮಾಟ ತಂಡದಿಂದ ಮಹದೇವ ಹಡಪದ ನಿರ್ದೇಶನದ ಗುಡಿಯ ನೋಡಿರಣ್ಣ ನಾಟಕ ಪ್ರದರ್ಶನವಾಗಲಿದೆ ಎಂದರು.

ಈಗಾಗಲೇ ಮಂಗಳೂರಿನಲ್ಲಿ ಏರ್ಪಡಿಸಿದ್ದ ಉತ್ಸವಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇದೀಗ ಉತ್ತರ ಕರ್ನಾಟಕ ಭಾಗದ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಧಾರವಾಡದಲ್ಲಿ ಆಯೋಜಿಸಲಾಗಿದೆ. ಪ್ರತಿ ವರ್ಷ ಹೊಸ ಹೊಸ ನಾಟಕಗಳನ್ನು ಸಿದ್ಧಪಡಿಸಲಾಗುತ್ತಿದೆ. ಮಕ್ಕಳಿಗೆ ರಂಗದ ಮೂಲಕವೇ ಪಠ್ಯಾಭ್ಯಾಸ ತಿಳಿಸುವ ನಿಟ್ಟಿನಲ್ಲಿ ಶಾಲಾ ರಂಗ ಪ್ರಯಾಣ ಆರಂಭಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಕಾಶ ಗರುಡ, ಮಹಾದೇವ ಹಡಪದ, ಸಮೀರ ಜೋಶಿ, ಇತರರು ಇದ್ದರು.