ದಕ್ಷಿಣ ಕನ್ನಡ ಜಿಲ್ಲಾದ್ಯಂತ ನಡೆಯಲಿ ಪುತ್ತೂರು ಮಾದರಿಯ ‘ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ’

| Published : Feb 04 2025, 12:34 AM IST

ದಕ್ಷಿಣ ಕನ್ನಡ ಜಿಲ್ಲಾದ್ಯಂತ ನಡೆಯಲಿ ಪುತ್ತೂರು ಮಾದರಿಯ ‘ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ’
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಂಡಾರಿಯವರ ಪರಿಕಲ್ಪನೆಯಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ, ಪುತ್ತೂರು ನಗರ ಸಭೆ ವ್ಯಾಪ್ತಿಯಲ್ಲಿ ಕಳೆದ ೧೦ ದಿನಗಳಿಂದ ನಡೆದ ಈ ಸ್ವಚ್ಛತಾ ಅಭಿಯಾನ ಇದೀಗ ರಾಜ್ಯಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಇತರ ತಾಲೂಕುಗಳ ಆಡಳಿತಕ್ಕೂ ಅನುಕರಣೀಯ ಎನಿಸಿದೆ.

ಮೌನೇಶ ವಿಶ್ವಕರ್ಮಕನ್ನಡಪ್ರಭ ವಾರ್ತೆ ಬಂಟ್ವಾಳ

ಅಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ ಎಂಬ ಯಾವ ಭೇದವೂ ಇರಲಿಲ್ಲ.. ಬೆಳಗ್ಗಿನ ಜಾವ ೭ ಗಂಟೆಯ ಚಳಿಗೂ ಅವರು ಕೈಗೆ ಗ್ಲೌಸು ಹಾಕಿಕೊಂಡು ಕಸ ಹೆಕ್ಕುವುದರಲ್ಲಿ ನಿರತರಾಗಿದ್ದರು... ಅವರು ಹೇಳುತ್ತಿದ್ದ ಮಂತ್ರ ಒಂದೇ, ಅದು ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ...ಹೌದು, ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಂಡಾರಿಯವರ ಪರಿಕಲ್ಪನೆಯಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ, ಪುತ್ತೂರು ನಗರ ಸಭೆ ವ್ಯಾಪ್ತಿಯಲ್ಲಿ ಕಳೆದ ೧೦ ದಿನಗಳಿಂದ ನಡೆದ ಈ ಸ್ವಚ್ಛತಾ ಅಭಿಯಾನ ಇದೀಗ ರಾಜ್ಯಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಇತರ ತಾಲೂಕುಗಳ ಆಡಳಿತಕ್ಕೂ ಅನುಕರಣೀಯ ಎನಿಸಿದೆ.ಗ್ರಾಮದ ಸ್ವಚ್ಛತೆಯ ಅರಿವು ಗ್ರಾಮಸ್ಥರಲ್ಲಿ, ಮನೆಮನೆಗಳಲ್ಲಿ ಮೂಡಬೇಕು. ಇದರ ನಿರ್ವಹಣೆಯ ಹೊಣೆ ಹೊತ್ತಿರುವ ಗ್ರಾಮ ಪಂಚಾಯಿತಿ ಆಡಳಿತಗಳೂ ಸ್ವಚ್ಛತೆಯ ಜಾಗೃತಿಯನ್ನು ಎಲ್ಲೆಡೆ ಮೂಡಿಸಬೇಕು ಎಂಬ ಉದ್ದೇಶದಿಂದ ರೂಪುಗೊಂಡ ‘ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ’ ಸ್ವಚ್ಛತಾ ಶ್ರಮದಾನದ ಆಂದೋಲನ ಯಶಸ್ಸು ಕಾಣುತ್ತಿದೆ. ಪ್ರತಿನಿತ್ಯ ತಮ್ಮ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಎಸೆದ ತ್ಯಾಜ್ಯಗಳನ್ನು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶ್ರಮದಾನದ ಮೂಲಕ ತೆರವು ಮಾಡಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಗ್ರಾಮಸ್ಥರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದೆ.ಹಸಿ ಕಸ, ಒಣ ಕಸ, ವಿಷ ಕಸಗಳನ್ನು ಭಿನ್ನತೆಯನ್ನು ಅರಿತು ಅದನ್ನು ಪ್ರತ್ಯೇಕವಾಗಿ ವಿಂಗಡಿಸಿ, ವಿಲೇವಾರಿ ನಡೆಸಿದರೆ ಕಸಗಳು ಸಮಸ್ಯೆಯನ್ನು ತಂದೊಡ್ಡುವುದಿಲ್ಲ ಮತ್ತು ಎಲ್ಲೆಂದರಲ್ಲಿ ಕಸ ಎಸೆಯದೆ, ಗ್ರಾಮ ಪಂಚಾಯಿತಿಗಳ ಸ್ವಚ್ಛ ವಾಹಿನಿ ವಾಹನಗಳಿಗೆ ಕಸವನ್ನು ಕೊಡುವ ಮೂಲಕ ಗ್ರಾಮದ ಸ್ವಚ್ಛತೆಗೆ ಎಲ್ಲರೂ ಸಹಕರಿಸುವಂತೆ ಗ್ರಾಮಸ್ಥರಲ್ಲಿ ಕರಪತ್ರ, ಜಾಥಾ, ಬೀದಿನಾಟಕಗಳ ಮೂಲಕ ನಡೆದ ಜಾಗೃತಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.ಪುತ್ತೂರು ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳೂ ಕೂಡ ನಿಯೋಜಿತ ನೋಡಲ್‌ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ನಡೆಸಿದ ಪ್ರತೀ ಕಾರ್ಯಕ್ರಮಗಳು ಗ್ರಾಮದೆಲ್ಲೆಡೆ ಜಾಗೃತಿಗೆ ಕಾರಣವಾಗಿದೆ. ಸ್ವಚ್ಛತಾ ಶ್ರಮದಾನದ ಆಂದೋಲನದ ಬಳಿಕ ಕೆಲ ಗ್ರಾಮಗಳಲ್ಲಿ ವರ್ತಕರು ತಮ್ಮ ಗ್ರಾಮದಲ್ಲಿ ವಾರಕ್ಕೊಮ್ಮೆ ಸ್ವಚ್ಛತಾ ಶ್ರಮದಾನ ನಡೆಸುವ ಕುರಿತಾಗಿ ತೀರ್ಮಾನಗಳನ್ನು ಕೈಗೊಂಡಿರುವುದು ಉತ್ತಮ ಬೆಳವಣಿಗೆ. ಸ್ವಚ್ಛತಾ ನಿಯಮವನ್ನು ಉಲ್ಲಂಘಿಸಿದ ಹಲವು ಪ್ರಕರಣಗಳನ್ನು ಗುರುತಿಸಿ ದಂಡ ವಿಧಿಸಿ, ಎಚ್ಚರಿಕೆ ನೀಡಿದ ಘಟನೆಗಳಿಗೂ ಈ ಅಭಿಯಾನ ಕಾರಣವಾಗಿದ್ದು ವಿಶೇಷ.ವಿದ್ಯಾರ್ಥಿಗಳಿಗೆ ಸ್ವಚ್ಛತಾ ಪಾಠ:ಗ್ರಾಮ ಗ್ರಾಮಗಳಲ್ಲೂ ನಡೆದಿರುವ ಸ್ವಚ್ಛತೆ ಕುರಿತ ಜಾಥಾದಲ್ಲಿ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ಭಾಗವಹಿಸುವ ಮೂಲಕ ಸ್ವಚ್ಛತಾ ಪಾಠವನ್ನು ಅರ್ಥೈಸಿಕೊಂಡಿದ್ದಾರೆ. ಜೊತೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸ್ವಚ್ಛತೆಯ ಪಾಠವನ್ನು ಅರ್ಥೈಸಲು ಹಲವು ಗ್ರಾಮ ಪಂಚಾಯಿತಿಗಳು ಸಂಸಾರ ಜೋಡುಮಾರ್ಗ ತಂಡದ ಬೀದಿ ನಾಟಕವನ್ನೂ ಏರ್ಪಡಿಸಿತ್ತು. ಈ ಅಭಿಯಾನದ ಅಂಗವಾಗಿ ಮನೆಗಳಿಂದ ಒಣಕಸಗಳನ್ನು ತಂದು ಕೊಟ್ಟ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಮುಖೇನ ತ್ಯಾಜ್ಯ ವಿಂಗಡಣೆಯ ಬಗ್ಗೆ ೩೪ ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವೀರಮಂಗಲ ಪಿಎಂ ಶ್ರೀ ಶಾಲೆಯ ವಿದ್ಯಾರ್ಥಿಗಳ ತಂಡ ಕಸದ ಕಷ್ಟ ಎನ್ನುವ ಬೀದಿನಾಟಕವನ್ನು ಅಭಿನಯಿಸುವ ಮೂಲಕ ಗ್ರಾಮಸ್ಥರಲ್ಲಿ ವಿಶೇಷ ಜಾಗೃತಿಗೂ ಕಾರಣವಾಗಿದೆ.ಎಲ್ಲ ತಾಲೂಕಿಗಳಿಗೂ ಮಾದರಿ:

ಜಿಲ್ಲೆಯ ಬಂಟ್ವಾಳ, ಮೂಡುಬಿದಿರೆ, ಮಂಗಳೂರು, ಬೆಳ್ತಂಗಡಿ, ಸುಳ್ಯ ತಾಲೂಕುಗಳಲ್ಲಿ ಹಾದು ಹೋಗುವ ಹೆದ್ದಾರಿ ಬದಿಯಲ್ಲಿಯೂ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಕಂಡು ಬಂದಿದ್ದು, ಈ ತಾಲೂಕುಗಳಲ್ಲಿಯೂ ಈ ಅಭಿಯಾನ ನಡೆಸುವುದು ಸೂಕ್ತ ಎನ್ನುವ ಅಭಿಪ್ರಾಯ ಕೇಳಿಬಂದಿದೆ. ಬಂಟ್ವಾಳ ತಾಲೂಕಿನ ನೇರಳಕಟ್ಟೆ, ಮಾಣಿ, ಸಜಿಪಮುನ್ನೂರು ಪರಿಸರದ ಹಲವು ಕಡೆಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯಗಳ ರಾಶಿ ಮತ್ತೆ ಕಂಡು ಬರುತ್ತಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪುತ್ತೂರು ಮಾದರಿಯ ‘ನಮ್ಮ ಸಂಸ್ಕೃತಿ- ಸ್ವಚ್ಛ ಸಂಸ್ಕೃತಿ’ ಅಭಿಯಾನ ಜಿಲ್ಲಾದ್ಯಂತ ನಡೆಸಿದರೆ ಹೆಚ್ಚಿನ ಜನಜಾಗೃತಿ ಸಾಧ್ಯ ಎನ್ನುವ ಅಭಿಪ್ರಾಯ ಕೇಳಿಬಂದಿದೆ................ಜ.೨೧ರಿಂದ ೩೧ರ ವರೆಗೆ ನಡೆದ ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ ಅಭಿಯಾನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸ್ವಚ್ಛ ಮನಸ್ಸುಗಳ ಸಹಕಾರದೊಂದಿಗೆ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಈ ಜಾಗೃತಿ ನಿರಂತರವಾಗಿಸುವ ಹೊಣೆ ಪ್ರತಿಯೊಬ್ಬರದ್ದು.

। ನವೀನ್‌ ಭಂಡಾರಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ, ಪುತ್ತೂರು

--------------------ಪುತ್ತೂರು ಮಾದರಿಯಲ್ಲೇ ಬಂಟ್ವಾಳದಲ್ಲಿಯೂ ಸ್ವಚ್ಛತಾ ಅಭಿಯಾನ ನಡೆಸಬೇಕೆನ್ನುವ ಇರಾದೆ ಇದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು.

। ಸಚಿನ್‌ ಕುಮಾರ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ, ಬಂಟ್ವಾಳ