ಮಹಿಳೆಯರ ಸಾಧನೆ ಬೇರೆ ಯಾರು ಮಾಡಲಾರರು

| Published : Feb 05 2025, 12:34 AM IST

ಸಾರಾಂಶ

ಮಹಿಳೆಯರು ಮಾಡುವ ಸಾಧನೆಯನ್ನು ಬೇರೆಯಾರು ಮಾಡಲಾರರು, ಅದನ್ನು ಅರಿತು ಮಹಿಳೆಯರು ಮುಂದೆ ನಡೆಯಬೇಕು ಎಂದು ಅಂತಾರಾಷ್ಟ್ರೀಯ ಓಲಂಪಿಕ್ಸ್‌ ಜಿಮ್ನಾಸ್ಟ್‌, ಪದ್ಮಶ್ರೀ ಪುರಸ್ಕೃತೆ ದೀಪಾ ಕರ್ಮಾಕರ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಮಹಿಳೆಯರು ಮಾಡುವ ಸಾಧನೆಯನ್ನು ಬೇರೆಯಾರು ಮಾಡಲಾರರು, ಅದನ್ನು ಅರಿತು ಮಹಿಳೆಯರು ಮುಂದೆ ನಡೆಯಬೇಕು ಎಂದು ಅಂತಾರಾಷ್ಟ್ರೀಯ ಓಲಂಪಿಕ್ಸ್‌ ಜಿಮ್ನಾಸ್ಟ್‌, ಪದ್ಮಶ್ರೀ ಪುರಸ್ಕೃತೆ ದೀಪಾ ಕರ್ಮಾಕರ ಹೇಳಿದರು.

ನಗರದ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಲಿಂ.ಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡ 20ನೇ ಶರಣ ಸಂಸ್ಕೃತಿ ಉತ್ಸವದ 3ನೇ ದಿನದ ಮಹಿಳಾ ಸಮಾವೇಶದಲ್ಲಿ ಕಾಯಕಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ನಾವು ನಮ್ಮ ಮನದಿಂದ ಗುರಿಯ ಕಡೆಗೆ ಗಮನ ಹರಿಸಬೇಕು ಎಂದರು.ಮಹಿಳೆಯರು ಎನನ್ನು ಸಾಧಿಸಲಾರರು ಎಂದು ಗ್ರಾಮಗಳಲ್ಲಿ ಹೇಳುತ್ತಾರೆ. ಆದರೆ, ನಾನು ಒಬ್ಬ ಗ್ರಾಮೀಣ ಭಾಗದ ಮಹಿಳೆಯಾಗಿ ಮಾಡಿ ತೋರಿಸಿದ್ದೇನೆ. ಮಹಿಳೆಯರು ಎಂದು ಸೋಲನ್ನು ಸರಳವಾಗಿ ಒಪ್ಪಿಕೊಳ್ಳಬಾರದು. ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಅವರನ್ನು ಸಮಾಜ ಗೌರವಿಸಿ ಧೈರ್ಯ ತುಂಬುವ ಕಾರ್ಯ ಮಾಡಬೇಕು. ಆ ಕಾರ್ಯ ಗೋಕಾಕನ ಶೂನ್ಯ ಸಂಪಾದನ ಮಠ ಮಾಡುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು.ಮಣಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಈ ಭಾಗದ ಜನರು ಬದುಕುವಂತ ಬದುಕು ಸುಂದರವಾಗಿಟ್ಟುಕೊಳ್ಳುವಂತೆ ಹೇಳುವ ಉತ್ಸವವೇ ಗೋಕಾಕ ನಾಡಿನ ಶರಣ ಸಂಸ್ಕೃತಿ ಉತ್ಸವ. 12ನೇ ಶತಮಾನದ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಪ್ರಮುಖ ಗೌರವವನ್ನು ಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಂಬತ್ತಿ ಜನ 30 ಸೆಕೆಂಡಿನ್‌ ರಿಲ್ಸ್‌ ಮಾಡಿ ಜೀವನ ನಡೆಸುತ್ತಿರುವ ಈ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಒಬ್ಬ ಸಾಧಕರಾಗಿ ಮಾಡುವ ಕಾರ್ಯ ಇಂದು ಮಾಡಬೇಕು. ಬಾಂಡರಿ ಹೊಡೆಯುವವರನ್ನು ಗೌರವಿಸುವ ತವಕದಲ್ಲಿ ಬಾಂಡರಿ ಕಾಯುವ ಯೋಧರನ್ನು ನಾವು ಮರೆಯಬಾರದು. 12ನೇ ಶತಮಾನದಲ್ಲಿ ಬಸವಾದಿ ಶಿವ ಶರಣರು ಮಹಿಳೆಯರಿಗೆ ಬಹು ದೊಡ್ಡ ಸ್ಥಾನವನ್ನು ಕೊಟ್ಟಿದ್ದಾರೆ. ಅದನ್ನು ಅರಿತು ನಾವು ಇಂದು ಮಹಿಳೆಯರನ್ನು ಗೌರವಿಸಿ ಅವರನ್ನು ಸಾಧಕರನ್ನಾಗಿ ಮಾಡುವ ಮಹತ್ವದ ಕಾರ್ಯಮಾಡಬೇಕಾಗಿದೆ ಎಂದು ತಿಳಿಸಿದರು.ರವೀಂದ್ರಾ ಏನರ್ಜಿ ಲಿಮಿಟೆಡ್‌ನ ಸಂಸ್ಥಾಪಕರಾದ ಡಾ.ವಿದ್ಯಾ ಮರಕುಂಬಿ ಉದ್ಘಾಟಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹಿಳೆಯರನ್ನು ಸತ್ಕರಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ಶೋಭಾ ಗಸ್ತಿ, ಚಿಕ್ಕೋಡಿ ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ, ಗೌರಿ ಮಾಂಜರೇಕರ್, ಭಾರತಿ ಮರೆನ್ನವರ, ಉತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಕೊಟಗಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರುಗಳಾದ ಆರ್.ಎಲ್.ಮಿರ್ಜಿ, ಎಸ್.ಕೆ.ಮಠದ ನಿರೂಪಿಸಿ, ವಂದಿಸಿದರು.ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳದೇ ಧೈರ್ಯದಿಂದ ಸಾಗಿ: ದೀಪಾ ಕರ್ಮಾಕರ

ಗೋಕಾಕ: ಯುವಪೀಳಿಗೆ ಯಾವಾಗಲೂ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳದೇ ಧೈರ್ಯದಿಂದ ಮುಂದೆ ಸಾಗಿದರೇ ಸಾಧಕರಾಗಲು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅಂತಾರಾಷ್ಟ್ರೀಯ ಓಲಂಪಕ್ಸ್‌ ಜಿಮ್ನಾಸ್ಟ್‌ ದೀಪಾ ಕರ್ಮಾಕರ ಹೇಳಿದರು. ನಗರದ ಶೂನ್ಯ ಸಂಪಾದನ ಮಠದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಬಿ.ಸಿ.ಎ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಪಾಲಕರು ಹೆಚ್ಚಿನ ಮಹತ್ವ ನೀಡಿ ವಿದ್ಯಾಭ್ಯಾಸ ಮಾಡಿಸಬೇಕು. ನಮ್ಮಲ್ಲಿ ಏನಿಲ್ಲ ಅದರ ಬಗ್ಗೆ ತೆಲೆಕೆಡಿಸಿಕೊಳ್ಳುವುದನ್ನು ಬಿಟ್ಟು ಇದ್ದ ಸಂಪನ್ಮೂಲಗಳನ್ನು ಬಳಸಿಕೊಂಡು ನಾವು ಸಾಧಕರಾಗಬೇಕು. ದೇಶಕ್ಕಾಗಿ ಇನ್ನಷ್ಟು ಕಾಲ ಆಟವಾಡಬೇಕೆನ್ನುವುದು ನನ್ನ ಆಸೆಯಾಗಿತ್ತು. ಆದರೆ, ಆರೋಗ್ಯ ಸ್ವಂದಿಸದ ಕಾರಣ ನಾನು 31ನೇ ವಯಸ್ಸಿನಲ್ಲೇ ಕ್ರೀಡಾ ಜೀವನಕ್ಕೆ ವಿದಾಯ ಹೇಳಬೇಕಾಯಿತು. ಈಗ ನಾನು ನನ್ನಲ್ಲಿ ಅಡುಗಿರುವ ಅನುಭವಗಳನ್ನು ಇತರ ಕ್ರೀಡಾಪಟುಗಳಿಗೆ ಕಲಿಸುವ ಕಾರ್ಯದಲ್ಲಿ ನಿರತರಾಗಿದ್ದೇನೆ. ನಾನು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ್ದು, ನಮ್ಮ ತಂದೆ ಒಬ್ಬ ಕ್ರೀಡಾಪಟು, ಅವರ ಮಾರ್ಗದರ್ಶನದಲ್ಲಿ ನಾನು ಒಬ್ಬ ಸಾಧಕಿಯಾಗಿದ್ದೇನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಡಿವೇಶ ಗವಿಮಠ, ಪ್ರಾಚಾರ್ಯರಾದ ಅರ್ಪಾಣಾ ಕುಲಕರ್ಣಿ ಉಪಸ್ಥಿತರಿದ್ದರು.