ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದ್ದು, ಕ್ಯಾನ್ಸರ್ ರೋಗವನ್ನು ತಡೆಯಲು ಸಾರ್ವಜನಿಕರು ಜಾಗ್ರತರಾಗಿಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್ ಅನುರಾಧ ಹೇಳಿದರು.ಬೆಂ.ಗ್ರಾ. ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ಜಾಗ್ರತಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬದಲಾದ ಜೀವನ ಶೈಲಿ, ಮನಸ್ಥಿತಿ, ಆಹಾರ ಪದ್ಧತಿಯಿಂದ ಕ್ಯಾನ್ಸರ್ ನಂತಹ ರೋಗಗಳು ಬರಲಾರಂಭಿಸಿದವು. ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಬರುತ್ತಿದೆ, ಯುವ ಸಮೂಹ ದುಶ್ಚಟಗಳಿಗೆ ದಾಸರಾಗದೆ ಉತ್ತಮ ಜೀವನ ನಡೆಸಿ ಎಂದರು.ಪ್ರಸಕ್ತ ದಿನಗಳಲ್ಲಿ ಮಹಿಳೆಯರಲ್ಲೂ ಕೂಡ ಹೆಚ್ಚಾಗಿ ಕ್ಯಾನ್ಸರ್ ಕಂಡು ಬರುತ್ತಿದೆ. ಆರಂಭಿಕ ಹಂತದಲ್ಲಿ ಲಕ್ಷಣಗಳು ಕಂಡು ಬಂದಲ್ಲಿ ಭಯ ಪಡದೆ ಚಿಕಿತ್ಸೆ ಪಡೆಯಬೇಕು. ಮೊದಲ ಹಂತದಲ್ಲೇ ಪತ್ತೆ ಹಚ್ಚಿದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಮೂಲಕ ಪೂರ್ಣವಾಗಿ ಗುಣಪಡಿಸಬಹುದು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಇಲಾಖೆ ಹೆಚ್ಚು ಹೆಚ್ಚು ಜಾಗ್ರತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ.ಸೋನಿಯಾ ಮಾತನಾಡಿ, ಕ್ಯಾನ್ಸರ್ ಬಂದರೆ ಸಾವು ಎಂಬ ಭಾವನೆ ಅನೇಕರಲ್ಲಿದೆ. ಆ ಮನೋಭಾವ ಹೋಗಬೇಕು. ಕ್ಯಾನ್ಸರ್ ರೋಗಿಗಳು ಕೂಡ ಸಾವನ್ನು ಗೆದ್ದು ಎಲ್ಲರಂತೆ ಜೀವನ ನಡೆಸಬಹುದು. ಹಾಗೆ ಕ್ಯಾನ್ಸರ್ ಬಾರದ ಹಾಗೆ ತಡೆಯುವುದು ಕೂಡ ಅತೀ ಮುಖ್ಯ. ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಲಕ್ಷಣಗಳು ತಿಳಿದ ಕೂಡಲೇ ಆಸ್ಪತ್ರೆಗೆ ಪರೀಕ್ಷಿಸಬೇಕು. ಆದರೇ ಮಹಿಳೆಯರು ಮುಜುಗರ ಪಡುತ್ತಾ ಹಾಗೆ ಉಳಿಯುತ್ತಾರೆ. ಯಾರು ಕೂಡ ಮುಜುಗರ ಪಡದೆ ಪ್ರಥಮ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕು.ಕ್ಯಾನ್ಸರ್ ಎಂದರೆ ಜನರು ಭಯ ಪಡುತ್ತಾರೆ. ಇದು ಒಂದು ಗುಣಪಡಿಸಬಹುದಾದ ಖಾಯಿಲೆ. ಸಾರ್ವಜನಿಕರು ಕೂಡ ಆಧುನಿಕ ಜೀವನಶೈಲಿ, ಫಾಸ್ಟ್ ಫುಡ್, ಧೂಮಪಾನ, ಮಧ್ಯಪಾನ ಸೇವನೆಗಳಿಂದ ದೂರವಿರಿ. ನಿಯಮಿತ ಗುಣಮಟ್ಟದ ಆಹಾರ ಸೇವನೆ, ಮನೋಶೈಲಿ, ಉತ್ತಮ ಯೋಗಾಭ್ಯಾಸ ಜೀವನದಲ್ಲಿ ರೂಢಿಸಿಕೊಂಡಲ್ಲಿ ರೋಗಗಳು ಮನುಷ್ಯನ ಹತ್ತಿರ ಸುಳಿಯುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುನೀಲ್ ಕುಮಾರ್ ಎಂ.ಸಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಹೇಮಾವತಿ ಎ.ವಿ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಸಂಜಯ್, ಡಾ.ರಾಜೇಶ್ವರಿ, ಸಮುದಾಯ ಆರೋಗ್ಯಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.