ಗ್ರಾಪಂ ಅಧ್ಯಕ್ಷ ಸೇರಿದಂತೆ ಸದಸ್ಯರಿಗೆ ಆಹ್ವಾನ ನೀಡದೆ ಭೂಮಿ ಪೂಜೆ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷ ರವಿರಾಜ್, ಸದಸ್ಯ ಆನಂದ್, ಮಂಗಳಮ್ಮ ಅವರು ಶಾಸಕರ ಎದುರೇ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 1.31 ಕೋಟಿ ರು. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಭೂಮಿ ಪೂಜೆ ನೆರವೇರಿಸಿದರು.ದೊಡ್ಡಬ್ಯಾಡರಹಳ್ಳಿಯಲ್ಲಿ 20 ಲಕ್ಷ ರು., ತಾಳಶಾಸನ ಗ್ರಾಮದಲ್ಲಿ 41.50 ಲಕ್ಷ ರು., ತಿಮ್ಮನಕೊಪ್ಪಲು ಗ್ರಾಮದಲ್ಲಿ 23 ಲಕ್ಷ ರು. ಹಾಗೂ ದೊಡ್ಡ ಬ್ಯಾಡರಹಳ್ಳಿಯಲ್ಲಿ 47 ಲಕ್ಷ ರು. ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಆರ್ ಡಿಪಿಆರ್ ಇಲಾಖೆ ಅನುದಾನದ 1.31 ಕೋಟಿ ರು. ವೆಚ್ಚದಲ್ಲಿ ದೊಡ್ಡಬ್ಯಾಡರಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರಸ್ತೆ, ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.ಮನೆಬಾಗಿಲಿಗೆ ಸರ್ಕಾರಿ ಸೌಲಭ್ಯ ಯೋಜನೆಯಿಂದ ಉತ್ತಮ ಸ್ಪಂದನೆ ಬರುತ್ತಿದೆ. ಚಿಕ್ಕಬ್ಯಾಡರಹಳ್ಳಿಯಲ್ಲಿ ನಡೆದ ಗ್ರಾವಲ್ ಗುಂಡಿ ತೆರವಿನಲ್ಲಿ ಯಾವುದೇ ರಾಜಕೀಯ ಮಾಡಿಲ್ಲ. ರೈತಸಂಘ ಕಾರ್ಯಕರ್ತರನ್ನು ಬಿಟ್ಟು ಜೆಡಿಎಸ್- ಬಿಜೆಪಿ ಕಾರ್ಯಕರ್ತರ ಗ್ರಾವಲ್ ಗುಂಡಿಯನ್ನು ಮಾತ್ರ ತೆರವುಗೊಳಿಸಿದ್ದಾರೆ ಎಂಬ ಆರೋಪ ಸುಳ್ಳು. ನಾವು ಪಕ್ಷಾತೀತವಾಗಿ ತೆರವುಗೊಳಿಸುತ್ತಿದ್ದೇವೆ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷ ರವಿರಾಜ್, ಸದಸ್ಯರಾದ ಎಸ್.ಆನಂದ್, ಕೆ.ಮನು, ಮಂಗಳಮ್ಮ, ಭಾರತಿ, ಶಿವಲಿಂಗೇಗೌಡ, ಇಂಜಿನಿಯರ್ ಗಳಾದ ಅಭಿಷೇಕ್, ಪ್ರಜ್ವಲ್, ಮುಖಂಡರಾದ ತಿಮ್ಮೇಗೌಡ, ತಮ್ಮೇಗೌಡ, ಬಸವ, ಪ್ರಶಾಂತ್, ಮಹದೇವಪ್ಪ, ಟಿ.ಸಿ.ಮಂಜುನಾಥ್, ಸೋಮು, ಪುಟ್ಟಪ್ಪ, ನಂಜುಂಡಪ್ಪ, ಸೋಮಣ್ಣ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಮುಖಂಡರು ಹಾಜರಿದ್ದರು.ಗ್ರಾಪಂ ಸದಸ್ಯರ ಆಕ್ರೋಶ:
ಗ್ರಾಪಂ ಅಧ್ಯಕ್ಷ ಸೇರಿದಂತೆ ಸದಸ್ಯರಿಗೆ ಆಹ್ವಾನ ನೀಡದೆ ಭೂಮಿ ಪೂಜೆ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷ ರವಿರಾಜ್, ಸದಸ್ಯ ಆನಂದ್, ಮಂಗಳಮ್ಮ ಅವರು ಶಾಸಕರ ಎದುರೇ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ತಾಳಶಾಸನ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಲು ಆಗಮಿಸಿದಾಗ ಗ್ರಾಪಂ ಅಧ್ಯಕ್ಷ ರವಿರಾಜ್, ಸದಸ್ಯ ಆನಂದ್ ಅವರು ತಡೆದು ಅಭಿವೃದ್ಧಿ ಕಾಮಗಾರಿಯಲ್ಲೂ ರಾಜಕೀಯ ಮಾಡುತ್ತಿದ್ದೀರಾ ಎಂದು ಶಾಸಕರು ಹಾಗೂ ಅಧಿಕಾರಿಗಳನ್ನು ಪ್ರಶ್ನಿಸಿದರು.
ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದೆ ಭೂಮಿ ಪೂಜೆ ನಡೆಸುವುದು ಸರಿಯಲ್ಲ. ಇದು ರಾಜಕೀಯ ದುರುದ್ದೇಶವಾಗಿದೆ. ನಮ್ಮನ್ನು ಸಹ ಸ್ಥಳೀಯವಾಗಿ ಆಯ್ಕೆಮಾಡಿ ಕಳುಹಿಸಿದ್ದಾರೆ. ಸ್ಥಳೀಯ ಸದಸ್ಯರಿಗೆ ಆಹ್ವಾನಿಸದೆ ಭೂಮಿ ಪೂಜೆ ನಡೆಸುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.