ಚಿಕ್ಕಮಗಳೂರುಟೀ ಎಸ್ಟೇಟ್ ರಸ್ತೆ ತಿರುವಿನಲ್ಲಿ ಲಾರಿ ಪಲ್ಟಿಯಾದ ಪರಿಣಾಮ ಚಾಲಕ ಗಾಯಗೊಂಡು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದ ಘಟನೆ ಶುಕ್ರವಾರ ಮೂಡಿಗೆರೆ ತಾಲೂಕಿನ ಬಾಳೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಟೀ ಎಸ್ಟೇಟ್ ರಸ್ತೆ ತಿರುವಿನಲ್ಲಿ ಲಾರಿ ಪಲ್ಟಿಯಾದ ಪರಿಣಾಮ ಚಾಲಕ ಗಾಯಗೊಂಡು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದ ಘಟನೆ ಶುಕ್ರವಾರ ಮೂಡಿಗೆರೆ ತಾಲೂಕಿನ ಬಾಳೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೆಳಗೂರು ಟೀ ಎಸ್ಟೇಟ್ ತಿರುವಿನಲ್ಲಿ ಲಾರಿಯೊಂದು ಉರುಳಿಬಿದ್ದಿದ್ದು, ತಿರುವಿನ ಕೆಳಗಡೆಯಿರುವ ಕೂಲಿಲೈನ್ ಮನೆಗೆ ತಾಗಿ ನಿಂತಿದೆ. ಲಾರಿಯಿಂದ ಹೊರಬರಲಾರದೇ ಚಾಲಕ ಸೇರಿ ನಾಲ್ವರು ಸಿಲುಕಿಕೊಂಡಿದ್ದರು. ಆ ಬಳಿಕ ಲಾರಿ ಮೇಲೆತ್ತಿ ಚಾಲಕ ಸಂತೋಷ್ ಸೇರಿದಂತೆ ಎಲ್ಲರನ್ನೂ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ.
ಲಾರಿ ಪಲ್ಟಿಯಾಗಿ ಕೆಳಗೂರು ಟೀ ಎಸ್ಟೇಟ್ ಕೂಲಿ ಲೈನ್ ಒಂದು ಭಾಗಕ್ಕೆ ಹಾನಿಯಾಗಿದೆ. ಲಾರಿ ಇನ್ನೊಂದು ಪಲ್ಟಿ ಯಾಗಿದ್ದರೆ ದೊಡ್ಡ ಮಟ್ಟದ ಅನಾಹುತವಾಗುತ್ತಿತ್ತು. ಲಾರಿ ಮಕಾಡೆ ಬಿದ್ದಿದ್ದು, ಕೇವಲ ಚಕ್ರಗಳೂ ಮಾತ್ರ ಮೇಲೆ ಕಾಣುತ್ತಿವೆ.ಲಾರಿಯಲ್ಲಿ ಚಿಕ್ಕಮಗಳೂರಿನಿಂದ ಹಿರೇಬೈಲಿಗೆ ಸಿಮೆಂಟ್ ಲೋಡ್ ತರಲಾಗುತ್ತಿತ್ತು. ಸ್ಥಳೀಯರು ಮತ್ತು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಿಮೆಂಟ್ ಲೋಡ್ ಮಾಡುವ ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದೆ.
ತಿರುವಿನಲ್ಲಿ ಚಾಲಕನ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಅನುಮಾನ ವ್ಯಕ್ತವಾಗಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.