ಯಾವ ಸಂತರೂ ಸ್ವಾರ್ಥಕ್ಕಾಗಿ ಯೋಚನೆ ಮಾಡಲಿಲ್ಲ: ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ

| Published : Nov 19 2024, 12:49 AM IST

ಯಾವ ಸಂತರೂ ಸ್ವಾರ್ಥಕ್ಕಾಗಿ ಯೋಚನೆ ಮಾಡಲಿಲ್ಲ: ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ
Share this Article
  • FB
  • TW
  • Linkdin
  • Email

ಸಾರಾಂಶ

ನಾವು ಮಾಡುವ ಕೆಲಸವನ್ನು ಶ್ರದ್ಧೆ ಭಕ್ತಿಯಿಂದ ಮಾಡಿದರೆ ದೇವರು ಒಲಿಯುತ್ತಾನೆ. ಯಾವ ಸಂತರು ಕೂಡ ತನಗೊಬ್ಬನಿಗಾಗಿ ಯೋಚನೆ ಮಾಡಲಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ತಿಳಿಸಿದರು. ಹಾಸನದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನಕದಾಸ ಜಯಂತಿ

ಕನ್ನಡಪ್ರಭ ವಾರ್ತೆ ಹಾಸನ

ನಾವು ಮಾಡುವ ಕೆಲಸವನ್ನು ಶ್ರದ್ಧೆ ಭಕ್ತಿಯಿಂದ ಮಾಡಿದರೆ ದೇವರು ಒಲಿಯುತ್ತಾನೆ. ಯಾವ ಸಂತರು ಕೂಡ ತನಗೊಬ್ಬನಿಗಾಗಿ ಯೋಚನೆ ಮಾಡಲಿಲ್ಲ. ಪ್ರತಿಯೊಬ್ಬರಿಗೂ ಕೂಡ ದೇವರು ಒಲಿಯಲಿ ಎಂದು ಎಲ್ಲೆಡೆ ತಮ್ಮ ಸಾಹಿತ್ಯ, ವಚನ ಹಾಗೂ ಹಾಡಿನ ಮೂಲಕ ಸಾರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರು ಉತ್ತಮವಾದ ತತ್ವ ಸಿದ್ಧಾಂತವನ್ನು ಹೊಂದಿದ್ದರು. ಗುರು ಪರಂಪರೆ ಎಂದರೆ ಯಾರಾದರೂ ಆಗಲಿ ಒಬ್ಬ ಯೋಗ್ಯ ಶಿಷ್ಯ ಬಂದರೆ ಅವರನ್ನು ಗುರುತಿಸಿ ಅಂತವರಿಗೆ ತಮ್ಮ ಒಳ್ಳೆಯ ಸಂದೇಶ ಹಾಗೂ ಎಲ್ಲಾ ಅಭ್ಯಾಸಗಳನ್ನು ಧಾರೆ ಎರೆಯುತ್ತಿದ್ದರು. ೧೫ನೇ ಶತಮಾನದಲ್ಲಿ ಎಲ್ಲರೂ ಒಂದೇ ಎಂಬ ಭಾವದಿಂದ ಹೋರಾಡಿದವರು. ಅದರ ಬಗ್ಗೆ ಸ್ಪಷ್ಟವಾಗಿ ಸರಳವಾಗಿ ಪ್ರತಿಯೊಂದು ಜನರಿಗೂ ಮನಮುಟ್ಟುವಂತೆ ತಿಳಿಸಿದವರು ಎಂದು ಹೇಳಿದರು.

ನನಗೆ ಯಾವ ಕೀಳಿರಿಮೆ ಇಲ್ಲ ಎಂದು ಹೇಳಿದವರಲ್ಲಿ ಕನಕದಾಸರೇ ನಮಗೆ ನಿದರ್ಶನ. ನೀವು ಮಾಡುವ ಪ್ರತಿ ಸಣ್ಣ ಸಣ್ಣ ಕೆಲಸವೇ ದೇವರು. ನಾವು ಮಾಡುವ ಕೆಲಸವನ್ನು ಭಕ್ತಿಯಿಂದ ಮಾಡುವುದರಿಂದ ದೇವರು ಒಲಿಯುತ್ತಾನೆ. ಸಂತರು ಎಲ್ಲರೂ ದೇವರ ಅಮಲಿನಲ್ಲಿ ಇರುತ್ತಿದ್ದರು. ಅವರು ದೇವರು ಒಬ್ಬನಿಗೆ ಮಾತ್ರ ಒಲಿಯಲಿ ಎಂದು ಯೋಚನೆ ಮಾಡುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ದೇವರು ಒಲಿಯಲಿ ಎಂದು ಪ್ರಾರ್ಥಿಸುತ್ತಿದ್ದರು. ತಮ್ಮಲ್ಲಿ ಇದ್ದುದ್ದನ್ನು ಬಿಟ್ಟು ಹೋಗಿ ಅವರು ದೇವರನ್ನು ಹುಡುಕುವಂತಹ ಕೆಲಸ ಮಾಡುತ್ತಿದ್ದರು. ಪುರಂದರದಾಸರು, ಕನಕದಾಸರು ಇವರೆಲ್ಲಾ ತನಗಾಗಿ ಏನನ್ನು ಕೇಳದೇ ಇತರರಿಗಾಗಿ ಬೇಡಿದ್ದಾರೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಮಾತನಾಡಿ, ಕನಕದಾಸರು ಬಹಳ ಸರಳ ವ್ಯಕ್ತಿತ್ವದವರು. ಸರಳತೆಯಿಂದ ಹೇಗೆ ಜೀವನವನ್ನು ಮಾಡಬಹುದು ಎಂದು ತಿಳಿಸಿದವರು. ಆದರೆ ನಾವು ಆ ನಿಟ್ಟಿನಲ್ಲಿ ಸಾಗುತ್ತಿಲ್ಲ. ಕನಕದಾಸರು ಒಂದು ಜಾತಿಗೆ ಸೀಮಿತವಾಗಿಲ್ಲ. ನಾವು ಎಲ್ಲರೂ ಒಂದೇ ಎಂಬ ಭಾವನೆ ಹೊಂದಿದ್ದು, ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವವರೆಗೂ ನಾವು ಉದ್ಧಾರ ಆಗುವುದಿಲ್ಲ. ಇದನ್ನೇ ಕನಕದಾಸರು ಹೇಳಿಕೊಟ್ಟಿದ್ದರು. ಸಮಸ್ತ ಕುಲ ಕೋಟಿ ಜನಾಂಗಕ್ಕೆ ಕನಕದಾಸರ ಜಯಂತಿ ಹೆಚ್ಚು ಪ್ರಚಾರ ಆಗಬೇಕು ಕನಕದಾಸರು ತೋರಿಸಿಕೊಟ್ಟ ಹಾದಿಯಲ್ಲಿ ಬಹಳ ಸರಳ, ಸುಂದರ ಜೀವನ ಮಾರ್ಗದರ್ಶನ ಮಾಡಿಕೊಟ್ಟಿದ್ದಾರೆ. ಅವರ ಆದರ್ಶದಲ್ಲಿ ಸಮಾಜ ನಿರ್ಮಾಣ ಮಾಡುವುದರಲ್ಲಿ ಕೈಜೋಡಿಸೋಣ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಲ್.ಮಲ್ಲೇಶ್ ಗೌಡ ಮಾತನಾಡಿ, ಈ ನೆಲಕ್ಕೆ ಎಲ್ಲಾ ಜನಾಂಗದವರ ಕೊಡುಗೆ ಇದೆ. ಎಲ್ಲರೂ ಈ ನಾಡನ್ನು ಸಮೃದ್ಧಿಗೊಳಿಸಿದ್ದಾರೆ. ಜಗತ್ತಿನ ಎಲ್ಲ ಬೇರು ಸಂಗತಿಗಳು ಈ ನೆಲದಲ್ಲಿ ಸಹಜವಾಗಿ ಅರಳುತ್ತವೆ ಕನ್ನಡ ಸಾಹಿತ್ಯ ಜಗತ್ತಿಗೆ ಒಂದು ಕಿರೀಟ. ಈ ಕಿರೀಟಕ್ಕೆ ಎರಡು ಗರಿಮೆಗಳು ದಾಸ ಸಾಹಿತ್ಯ, ವಚನ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಮುಖಕ್ಕೆ ವಿಶೇಷವಾಗಿ ಗರಿಗಳು ವಚನ ಸಾಹಿತ್ಯ ದಾಸ ಸಾಹಿತ್ಯ. ವಚನ ಸಾಹಿತ್ಯ ಜನಸಾಮಾನ್ಯರ ಬಳಿ ವಿವೇಚನೆಯನ್ನು ತೆಗೆದುಕೊಂಡು ಹೋಗುತ್ತದೆ. ದಾಸ ಸಾಹಿತ್ಯ ಅತ್ಯಂತ ಸರಳವಾದ ಭಾಷೆಯಲ್ಲಿ ಇಬ್ಬರಿಗೂ ಭಕ್ತಿಯ ನೆಲವನ್ನು ಬಿತ್ತುವಂತಹ ಉದ್ದೇಶ ಇತ್ತು. ಭಕ್ತಿಯನ್ನು ಜನರ ಮನಸ್ಸಿನಲ್ಲಿ ಬಿತ್ತಬೇಕು ಎಂದರು.

ಒಬ್ಬರಿಗೆ ಶಿವ ತತ್ವವನ್ನು ಬಿತ್ತಬೇಕು ಎಂಬ ಹಂಬಲ ಇದ್ದರೆ ಇನ್ನೊಬ್ಬರಿಗೆ ಹರಿತತ್ವ ಬಿತ್ತಬೇಕು ಎಂಬ ಹಂಬಲ ಇತ್ತು. ವಚನಕಾರರು ಶಿವ ತತ್ವವನ್ನು ಬಿಂಬಿಸುತ್ತಾರೆ. ದಾಸರು ಅರಿತತ್ವವನ್ನು ಬಿಂಬಿಸುತ್ತಾರೆ. ಎರಡು ಕಾಲದಲ್ಲಿ ಸಮಾಜದಲ್ಲಿ ಅತ್ಯಂತ ಕೆಳ ವರ್ಗದಲ್ಲಿ ಬಂದಂತಹ ಚಿಂತಕರು ಸಿಗುತ್ತಾರೆ. ಕೆಳ ವರ್ಗದಲ್ಲಿ ಜನಿಸಿ ದಾಸರಲ್ಲಿ ಶ್ರೇಷ್ಠ ದಾಸರಾಗುತ್ತಾರೆ. ಅದು ಸಾಧಾರಣವಾದ ಸಂಗತಿಯಲ್ಲ ಎಂದು ತಿಳಿಸಿದರು.

ಬಿ.ಆರ್.ಸಿ. ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಜಿ. ಪರಮೇಶ್ ಮಡಬಲು ಮಾತನಾಡಿ, ಕನಕದಾಸರು ನಡೆದು ಬಂದ ದಾರಿ, ಅವರು ಸಾರಿದ ಹಿತವಚನ ಸೇರಿದಂತೆ ಅವರ ಜೀವನ ಚರಿತ್ರೆಯನ್ನು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಈ. ಕೃಷ್ಣೇಗೌಡ, ತಾಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷ ಲಿಂಗೇಗೌಡ, ಬಿ.ಟಿ.ಸತೀಶ್, ಸಮಾಜದ ಮುಖಂಡ ನವಿಲೆ ಅಣ್ಣಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಎಂ.ಮಹಾಲಿಂಗಯ್ಯ, ಮುಖಂಡ ಸಣ್ಣೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾಕ್ಟರ್ ಎಚ್.ಪಿ. ತಾರನಾಥ್ ಇತರರು ಹಾಜರಿದ್ದರು.