ಸಾರಾಂಶ
ಚಾಮರಾಜನಗರದ ನ್ಯಾಯಾಲಯ ರಸ್ತೆಯಲ್ಲಿರುವ ಶ್ರೀರಾಮಚಂದ್ರ ಪ್ರೌಢಶಾಲೆಯಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕನಕದಾಸರ ಕೀರ್ತನೆಗಳು ಎಲ್ಲರ ಮನಸ್ಸಿನಲ್ಲಿ ಇದೆ. ಜಾತಿ ಪದ್ದತಿಯ ವಿರುದ್ಧ ಕೀರ್ತನೆಗಳ ಮೂಲಕ ಸಂದೇಶಗಳನ್ನು ನೀಡಿದವರು ಕನಕದಾಸರು ಎಂದು ಶ್ರೀರಾಮಚಂದ್ರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮಾದಯ್ಯ ತಿಳಿಸಿದರು.ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಶ್ರೀರಾಮಚಂದ್ರ ಪ್ರೌಢಶಾಲೆಯಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ನಮ್ಮ ದೇಶಕ್ಕೆ ಕೊಡುಗೆ ನೀಡಿರುವರಲ್ಲಿ ಸಾಧು, ಸಂತರು, ಬಹಳ ಜನ ಇದ್ದಾರೆ. ಅವರ ವಿಚಾರಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು, ವಿದ್ಯೆ ಜೊತೆಯಲ್ಲಿ ಬೆಳಗಿನ ಸಮಯದಲ್ಲಿ ಧ್ಯಾನ ಮಾಡುವುದರಿಂದ ಮನಸ್ಸು ಶುದ್ಧವಾಗುತ್ತದೆ ಎಂದು ಹೇಳಿದರು.ಸಂಸ್ಥೆಯ ಕಾರ್ಯದರ್ಶಿ ರುದ್ರಮೂರ್ತಿ ಮಾತನಾಡಿ, ಕನಕದಾರು ತಮ್ಮ ಜೀವನವನ್ನೇ ದೇವರ ಧ್ಯಾನಕ್ಕೆ ಮುಡುಪಾಗಿಟ್ಟಿದ್ದರು. ಅವರು ಹತ್ತಿರವಿದ್ದ ಚಿನ್ನದ ಒಡವೆಗಳನ್ನು ಬಡವರಿಗೆ ದಾನಮಾಡಿ, ದಾಸರಾಗಿ ಎಲ್ಲರ ಮನಸ್ಸಿಗೆ ಹತ್ತಿರವಾದರು. ಭಕ್ತಿಯಿಂದ ಮಾತ್ರ ನೆಮ್ಮದಿ ಸಾಧ್ಯವಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಧ್ಯಾನದಿಂದ ಮಾತ್ರ ಎಲ್ಲವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕನಕದಾಸರು ೧೫- ೧೬ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಜನಪ್ರಿಯವಾಗಿದ್ದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದಾರು. ಸಾಮಾನ್ಯವಾಗಿ ಪ್ರತೀ ವರ್ಷ ಕಾರ್ತಿಕ ಮಾಸದ ೧೮ನೇ ದಿನದಂದು ಕನಕದಾಸ ಜಯಂತಿ ಆಚರಿಸಲಾಗುತ್ತದೆ. ನಮ್ಮ ಕರ್ನಾಟಕ ಸರ್ಕಾರ ೨೦೦೮ ರಿಂದ ಕನಕದಾಸ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಪ್ರೌಢಶಾಲೆ ಮುಖ್ಯಶಿಕ್ಷಕಿ ರತ್ನಮ್ಮ ಮಾತನಾಡಿ, ಕನಕದಾಸರು ಕವಿಗಳೂ ಮತ್ತು ಸಂತರು. ಕುಲ ಕುಲ ಎಂದು ಹೊಡೆದಾಡದಿರಿ ಎಂಬ ಸಂದೇಶವನ್ನು ಕನಕದಾಸರು ಸಾರಿದರು ಎಂದರು.