ಕಡಿಮೆ ಫಲಿತಾಂಶದ 21 ಶಾಲೆಗಳಿಗೆ ನೋಟಿಸ್‌!

| Published : May 11 2024, 12:33 AM IST

ಸಾರಾಂಶ

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ತೇರ್ಗಡೆಯಾಗಿರುವ ಬಾಲಕರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಜೊತೆಗೆ ಕಳೆದ ಬಾರಿ 99 ಶಾಲೆಗಳು ಕಡಿಮೆ ಫಲಿತಾಂಶ ಪಡೆದಿದ್ದವು. ಈ ಬಾರಿ ಈ ಸಂಖ್ಯೆಯಲ್ಲೂ 21ಕ್ಕೆ ಇಳಿಕೆಯಾಗಿದೆ. ಆದರೆ, ಫಲಿತಾಂಶ ಸುಧಾರಣೆಗೆ ನಾನಾ ಪ್ರಯತ್ನದ ಹೊರತಾಗಿಯೂ ಕೆಲ ಶಾಲೆಗಳು ಉತ್ತಮ ಫಲಿತಾಂಶ ಪಡೆಯುವಲ್ಲಿ ಹಿಂದೆ ಬಿದ್ದಿರುವುದು ಶಿಕ್ಷಣ ಇಲಾಖೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಗಣೇಶ್ ತಮ್ಮಡಿಹಳ್ಳಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಶಿವಮೊಗ್ಗ ಜಿಲ್ಲೆಗೆ ಸಿಹಿ ನೀಡಿದ್ದು, ಬಂಪರ್‌ ಬಹುಮಾನ ಎಂಬಂತೆ ಕಳೆದ ಬಾರಿ 28ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 3ನೇ ಸ್ಥಾನಕ್ಕೇರಿದೆ. ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿರುವ ಹೊರತಾಗಿಯೂ 21 ಶಾಲೆಗಳಲ್ಲಿ ಶೇ. 70ಕ್ಕಿಂತ ಕಡಿಮೆ ಫಲಿತಾಂಶ ಬಂದಿದೆ. ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಲು ಡಿಡಿಪಿಐ ಮುಂದಾಗಿದ್ದಾರೆ !.

ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಭಾರಿ ಏರಿಕೆ ಕಂಡಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ. ಎಂದಿನಂತೆ ಬಾಲಕಿಯರೇ ಈ ಬಾರಿಯೂ ಹೆಚ್ಚು ತೇರ್ಗಡೆಯಾಗಿದ್ದಾರೆ. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ತೇರ್ಗಡೆಯಾಗಿರುವ ಬಾಲಕರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಜೊತೆಗೆ ಕಳೆದ ಬಾರಿ 99 ಶಾಲೆಗಳು ಕಡಿಮೆ ಫಲಿತಾಂಶ ಪಡೆದಿದ್ದವು. ಈ ಬಾರಿ ಈ ಸಂಖ್ಯೆಯಲ್ಲೂ 21ಕ್ಕೆ ಇಳಿಕೆಯಾಗಿದೆ. ಆದರೆ, ಫಲಿತಾಂಶ ಸುಧಾರಣೆಗೆ ನಾನಾ ಪ್ರಯತ್ನದ ಹೊರತಾಗಿಯೂ ಕೆಲ ಶಾಲೆಗಳು ಉತ್ತಮ ಫಲಿತಾಂಶ ಪಡೆಯುವಲ್ಲಿ ಹಿಂದೆ ಬಿದ್ದಿರುವುದು ಶಿಕ್ಷಣ ಇಲಾಖೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಯಾವ್ಯಾವ ಶಾಲೆಗಳಲ್ಲಿ ಕಡಿಮೆ ಫಲಿತಾಂಶ?

ಭದ್ರಾವತಿಯ ಶ್ರೀ ಕೃಷ್ಣ ಪ್ರೌಢಶಾಲೆ, ಜನತಾ ಪ್ರೌಢಶಾಲೆ, ಕರ್ನಾಟಕ ಪಬ್ಲಿಕ್‌ ಶಾಲೆ, ರಾಜೀವ್‌ ಗಾಂಧಿ ಮೆಮೋರಿಯಲ್‌ ಪ್ರೌಢಶಾಲೆ, ಶ್ರೀ ಗುರುಮಹಾರುದ್ರೇಶ್ವರ ಪ್ರೌಢ ಶಾಲೆ, ಭದ್ರಾ ಪ್ರೌಢಶಾಲೆ, ಸರ್ಕಾರಿ ಜೂನಿಯರ್‌ ಕಾಲೇಜು, ಶಿವಮೊಗ್ಗ ತಾಲೂಕಿನ ಅಶೋಕ ಪ್ರೌಢಶಾಲೆ, ಎಸ್‌ಟಿ ಆಂಥೋನಿಸ್‌ ಹಿರಿಯ ಪ್ರಾಥಮಿಕ ಶಾಲೆ, ತುಂಗಾ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಮಿಳಘಟ್ಟ, ಶ್ರೀ ಜಗದೂರು ಸಚ್ಚಿದಾನಂದ ಶಾಲೆ, ಮಹಾರಾಣಿ ಬಾಲಕಿಯರ ಪ್ರೌಢಶಾಲೆ, ಶ್ರೀ ಸಂಗಮೇಶ್ವರ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಸೂಳೆಬೈಲು, ಶ್ರೀ ವೀಣಾ ಶಾರದ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ದುರ್ಗಿಗುಡಿ, ಶಿಕಾರಿಪುರ ತಾಲೂಕಿನ ಅಲ್ಲಮ ಪ್ರಭು ಪ್ರೌಢಶಾಲೆ, ಶ್ರೀ ವೀರಾಂಜನೇಯ ಪ್ರೌಢಶಾಲೆ, ಡಾ.ರಾಜ್‌ಕುಮಾರ್‌ ಪ್ರೆಸಿಡೆಂಟಲ್‌ ಪ್ರೌಢ ಶಾಲೆಗಳು ಕಡಿಮೆ ಫಲಿತಾಂಶ ಪಡೆದಿವೆ.

132 ಶಾಲೆಗಳಿಗೆ ಶೇ.100 ಫಲಿತಾಂಶ:

ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಒಟ್ಟು 132 ಶಾಲೆಗಳಿಗೆ ಶೇ.100 ರಷ್ಟು ಫಲಿತಾಂಶ ಲಭಿಸಿದೆ. ಇದರಲ್ಲಿ 37 ಸರ್ಕಾರಿ, ಸಾಮಾಜಿಕ ಕಲ್ಯಾಣ ಇಲಾಖೆಯ 24 ಶಾಲೆಗಳು, ಅನುದಾನಿತ 10, ಅನುದಾನ ರಹಿತ 61 ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. ಭದ್ರಾವತಿಯಲ್ಲಿ 19, ಹೊಸನಗರದಲ್ಲಿ 19, ಸಾಗರದಲ್ಲಿ 18, ಶಿಕಾರಿಪುರದಲ್ಲಿ 27, ಶಿವಮೊಗ್ಗದಲ್ಲಿ 17, ಸೊರಬದಲ್ಲಿ 15. ತೀರ್ಥಹಳ್ಳಿಯಲ್ಲಿ 17 ಶಾಲೆಗಳಿವೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮೇಲುಗೈ

ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ಪರೀಕ್ಷೆ ಬರೆದಿದ್ದ ಗ್ರಾಮೀಣದ ಭಾಗದ 13,299 ವಿದ್ಯಾರ್ಥಿಗಳ ಪೈಕಿ 12016 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.90.35 ರಷ್ಟು ಫಲಿತಾಂಶ ಬಂದಿದೆ.

ಇನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದ 9729 ನಗರ ಪ್ರದೇಶದ ವಿದ್ಯಾರ್ಥಿಗಳ ಪೈಕಿ 8404 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.86ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ತೀರ್ಥಹಳ್ಳಿ ಪ್ರಥಮ, ಭದ್ರಾವತಿಗೆ ಕೊನೆ ಸ್ಥಾನ:

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಫಲಿತಾಂಶ ಪಡೆದ ಜಿಲ್ಲೆಯಲ್ಲಿ 7 ತಾಲೂಕುಗಳ ಪೈಕಿ ತೀರ್ಥಹಳ್ಳಿ (94.24) ಮೊದಲ ಸ್ಥಾನದಲ್ಲಿದ್ದು, ಭದ್ರಾವತಿ (ಶೇ.83.87) ಕೊನೆ ಸ್ಥಾನದಲ್ಲಿದೆ. ಉಳಿದಂತೆ ಸೊರಬ (ಶೇ.92.79) ದ್ವಿತೀಯ, ಹೊಸನಗರ (ಶೇ.92.66) ತೃತೀಯ, ಸಾಗರ (ಶೇ.92.37) ನಾಲ್ಕನೇ, ಶಿಕಾರಿಪುರ ( ಶೇ.90.34) ಐದನೇ ಹಾಗೂ ಶಿವಮೊಗ್ಗ (ಶೇ.85.56) ಆರನೇ ಸ್ಥಾನದಲ್ಲಿವೆ.

---------

ಕಳೆದ ಬಾರಿ 99 ಶಾಲೆಗಳು ಶೇ.70ಕ್ಕಿಂತ ಕಡಿಮೆ ಫಲಿತಾಂಶ ಪಡೆದಿದ್ದವು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಹೆಚ್ಚಾಗಿ ದಾಖಲಾತಿ ಆಗಿರುವುದು. ಜೊತೆಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳು ಶಾಲೆಗೆ ಹೆಚ್ಚಿನ ದಿನ ಗೈರಾಗುವುದು. ಬಹುತೇಕ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ, ಈ ಎಲ್ಲ ಕಾರಣದಿಂದ ಆ ಶಾಲೆಗಳಲ್ಲಿ ಫಲಿತಾಂಶ ಕಡಿಮೆ ಬಂದಿರಬಹುದು. ಫಲಿತಾಂಶ ಕಡಿಮೆ ಬಂದಿರುವುದಕ್ಕೆ ಕಾರಣ ಕೇಳಿ ಆಯಾ ಶಾಲೆಗಳಿಗೆ ನೋಟಿಸ್‌ ನೀಡಲಾಗುವುದು.

- ಸಿ.ಆರ್‌.ಪರಮೇಶ್ವರಪ್ಪ, ಡಿಡಿಪಿಐ.

------------------