ಎಸ್ಸೆಸ್ಸೆಲ್ಸಿ ಪರೀಕ್ಷೆ: ರಾಜ್ಯಕ್ಕೆ 4ನೇ ಸ್ಥಾನ ಪಡೆದ ಎಚ್.ವಿ.ವಿನಯ್‌ಗೆ ಸನ್ಮಾನ

| Published : May 11 2024, 12:33 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆ: ರಾಜ್ಯಕ್ಕೆ 4ನೇ ಸ್ಥಾನ ಪಡೆದ ಎಚ್.ವಿ.ವಿನಯ್‌ಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 4 ವರ್ಷಗಳಿಂದ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡುತ್ತಾ ಬಂದಿದೆ. ಕಳೆದ ವರ್ಷ ಶೇ.100 ಪರ್ಸೆಂಟ್ ಫಲಿತಾಂಶ ದೊರಕಿತ್ತು. ಈ ಬಾರಿ 94.14% ಅಂದರೆ 205 ಮಕ್ಕಳಲ್ಲಿ 193 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಎಚ್.ವಿ.ವಿನಯ್ ಅವರನ್ನು ಶಾಲಾ ವತಿಯಿಂದ ಅಭಿನಂದಿಸಲಾಯಿತು.

ಶಾಲೆ ಮುಖ್ಯಶಿಕ್ಷಕಿ ಶಕುಂತಲಾ ಮಾತನಾಡಿ, ಕಳೆದ 4 ವರ್ಷಗಳಿಂದ ನಮ್ಮ ಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡುತ್ತಾ ಬಂದಿದೆ. ಕಳೆದ ವರ್ಷ ಶೇ.100 ಪರ್ಸೆಂಟ್ ಫಲಿತಾಂಶ ದೊರಕಿತ್ತು. ಈ ಬಾರಿ 94.14% ಅಂದರೆ 205 ಮಕ್ಕಳಲ್ಲಿ 193 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದರು.

ಶಾಲೆಯ ಐದು ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಎಚ್.ವಿ.ವಿನಯ್ 625 ಅಂಕಗಳಿಗೆ 621 ಅಂಕ ಪಡೆದು ಮಳವಳ್ಳಿ ತಾಲೂಕಿಗೆ ಪ್ರಥಮ ಸ್ಥಾನ, ಜಿಲ್ಲೆಗೆ ದ್ವಿತೀಯ ಸ್ಥಾನ ಹಾಗೂ ರಾಜ್ಯಕ್ಕೆ ನಾಲ್ಕನೇ ಸ್ಥಾನದಲ್ಲಿ ತೇರ್ಗಡೆ ಹೊಂದಿ ನಮಗೆ ಕೀರ್ತಿ ತಂದಿದ್ದಾನೆ ಎಂದರು.

ತಂದೆ ವೀರಪ್ಪ ಮತ್ತು ತಾಯಿ ದ್ರಾಕ್ಷಾಯಿಣಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತಾ ಅವರನ್ನು ಮತ್ತು ಅವರ ಮಗನನ್ನು ಶಾಲೆಯಿಂದ ಸನ್ಮಾನಿಸುತ್ತಿದ್ದೇವೆ ಎಂದರು.

ಪರೀಕ್ಷೆಯಲ್ಲಿ ಶಾಲೆಯ 42 ಅತ್ಯುನ್ನತ ಶ್ರೇಣಿ, 97 ಪ್ರಥಮ ಶ್ರೇಣಿ, 37 ದ್ವಿತೀಯ ಶ್ರೇಣಿಯಲ್ಲಿ ಹಾಗೂ 17 ಮಂದಿ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತಮ ಫಲಿತಾಂಶಕೊಟ್ಟ ಎಲ್ಲ ವಿದ್ಯಾರ್ಥಿಗಳಿಗೂ ಹಾಗೂ ಅವರ ಪೋಷಕರಿಗೂ ನಮ್ಮ ಶಿಕ್ಷಕರಿಗೂ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿ ಎಚ್.ವಿ.ವಿನಯ್ ಮಾತನಾಡಿ, ನನ್ನ ಈ ಸಾಧನೆಗೆ ನಮ್ಮ ಶಿಕ್ಷಕರೇ ಮುಖ್ಯ ಕಾರಣ. ನಮ್ಮಲ್ಲಿ ಮಕ್ಕಳಲ್ಲಿ ಮಕ್ಕಳಂತೆ ಬೆರೆತು ನಮಗೆ ಅರ್ಥವಾಗುವಂತೆ ಎಲ್ಲಾ ವಿಷಯಗಳನ್ನು ತಿಳಿಸುತ್ತಾ ನಮಗೋಸ್ಕರ ಸಮಯವನ್ನು ಕೊಟ್ಟು ನಮ್ಮ ಈ ಸಾಧನೆಗೆ ಕಾರಣರಾಗಿದ್ದಾರೆ ಎಂದರು.

ಪೋಷಕರು ತಮ್ಮ ಮನೆಯಲ್ಲಿ ಮಕ್ಕಳ ಓದಿಗೆ ಅನುಕೂಲವಾಗುವಂತ ವಾತಾವರಣ ನಿರ್ಮಿಸಿ ಕೊಟ್ಟಿದ್ದಾರೆ. ನನಗೆ 625 ಕ್ಕೆ 625 ಫಲಿತಾಂಶ ಬರಬೇಕಾಗಿತ್ತು. ಆದರೆ, ವಿಜ್ಞಾನದಲ್ಲಿ ನನಗೆ ಎರಡು ಪ್ರಶ್ನೆಗಳು ಅರ್ಥವಾಗದ ಕಾರಣ ಹಾಗೂ ಗಣಿತದಲ್ಲಿ ಒಂದು ಕಡಿಮೆ ಅಂಕ ಬಂದಿರುವುದರಿಂದ 621 ಫಲಿತಾಂಶ ಮಾತ್ರ ಬರುವುದಕ್ಕೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿ ತಾಯಿ ದ್ರಾಕ್ಷಾಯಿಣಿ ಮುಖ್ಯ ಶಿಕ್ಷಕಿ ಶಕುಂತಲಾರೊಂದಿಗೆ ಮಾತನಾಡಿ, ಮಗನಿಗೆ ನೀವು ನೀಡಿದ ಶಿಕ್ಷಣದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ. ಅದಕ್ಕೆ ನಾನು ನಿಮಗೆಲ್ಲ ಆಭಾರಿಯಾಗಿದ್ದೇನೆ ಎಂದರು.

ಈ ವೇಳೆ ಎಸ್ ಡಿಎಂಸಿ ಸದಸ್ಯರಾದ ನಂದೀಶ್, ಶಿಕ್ಷಕರಾದ ನಿಂಗೇಗೌಡ, ಮಹೇಶ್ ಕುಮಾರ್, ವಿನಯ್ ಪೋಷಕರಾದ ಕುಮಾರ್ (ವೀರಪ್ಪ) ಸೇರಿದಂತೆ ಇತರರು ಇದ್ದರು.