ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯವಾಸಿಗಳ ಪುನರ್ ಪರಿಶೀಲನೆಗೆ ೫೦ ಸಾವಿರ ಕುಟುಂಬದಿಂದ ಆಕ್ಷೇಪಣೆ

| Published : Jan 07 2025, 12:32 AM IST

ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯವಾಸಿಗಳ ಪುನರ್ ಪರಿಶೀಲನೆಗೆ ೫೦ ಸಾವಿರ ಕುಟುಂಬದಿಂದ ಆಕ್ಷೇಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯವು ಮೂರು ತಲೆಮಾರಿನ ನಿರ್ದಿಷ್ಟ ಅರ್ಜಿದಾರನ ವೈಯಕ್ತಿಕ ದಾಖಲೆಗಳನ್ನು ಕೇಳಿರುವುದು ಕಾನೂನುಬಾಹಿರವಾಗಿದೆ.

ಕಾರವಾರ: ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಿರ್ಧರಿಸಲಾದ ರಾಜ್ಯ ಮಟ್ಟದ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ಮೇಲ್ವಿಚಾರಣಾ ಸಮಿತಿಯ ತೀರ್ಮಾನದಂತೆ ಅಸ್ತಿತ್ವವಿಲ್ಲದ, ಕಾನೂನುಬಾಹಿರ ಸಮಿತಿಯಿಂದ ಮತ್ತು ನಿರ್ದಿಷ್ಟ ಮೂರು ತಲೆಮಾರಿನ ದಾಖಲೆಗೆ ನೋಟಿಸ್ ನೀಡುತ್ತಿರುವ ಅರಣ್ಯ ಹಕ್ಕು ಸಮಿತಿಯ ಕಾರ್ಯ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಸಮಗ್ರವಾಗಿ ಆಕ್ಷೇಪಣಾ ಪತ್ರ ಸಲ್ಲಿಸಲಾಗಿದ್ದು, ಪುನರ್ ಪರಿಶೀಲನೆ ಪ್ರಕ್ರಿಯೆಗೆ ಜಿಲ್ಲಾದ್ಯಂತ ೫೦ ಸಾವಿರ ಅರಣ್ಯವಾಸಿ ಕುಟುಂಬದಿಂದ ವೈಯಕ್ತಿಕವಾಗಿ ಆಕ್ಷೇಪಣೆ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಉಪ ವಿಭಾಗ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿ ನಿಯಮಾವಳಿಯಲ್ಲಿ ಆರು ಸದಸ್ಯರು ಇರಬೇಕೆಂದು ಕಾನೂನಿನಲ್ಲಿ ಉಲ್ಲೇಖವಿದೆ. ಆದರೆ ಸಮಿತಿಯಲ್ಲಿ ಮೂರು ನಾಮನಿರ್ದೇಶನ ಸದಸ್ಯರು ಮಾತ್ರ ಇದ್ದು, ಸಮಿತಿಯು ಅಪೂರ್ಣವಾಗಿರುತ್ತದೆ. ಜತೆಗೆ ಸಮಿತಿಯ ಅಸ್ತಿತ್ವ ಕಾನೂನು ಬಾಹಿರವಾಗಿರುತ್ತದೆ ಎಂದರು.

ಅರಣ್ಯ ಹಕ್ಕು ಕಾಯಿದೆಗೆ ೨೦೧೨ರಲ್ಲಿ ಮಾಡಲಾದ ತಿದ್ದುಪಡಿಯಲ್ಲಿ ಉಪವಿಭಾಗ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿ ನಿರ್ದಿಷ್ಟ ದಾಖಲಾತಿಗಳಿಗೆ ಒತ್ತಾಯಿಸಬಾರದು ಎಂಬ ಅಂಶ ತಿದ್ದುಪಡಿ ಆಗಿದ್ದಾಗಲೂ ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯವು ಮೂರು ತಲೆಮಾರಿನ ನಿರ್ದಿಷ್ಟ ಅರ್ಜಿದಾರನ ವೈಯಕ್ತಿಕ ದಾಖಲೆಗಳನ್ನು ಕೇಳಿರುವುದು ಕಾನೂನುಬಾಹಿರವಾಗಿದೆ. ಅರ್ಜಿದಾರನ ಸಾಗುವಳಿ ಕ್ಷೇತ್ರದ ಪ್ರದೇಶವು ಜನವಸತಿ ಪ್ರದೇಶದ ದಾಖಲೆ ನೀಡಬೇಕೆಂದು ೨೦೧೪ರಲ್ಲಿ ಸ್ಪಷ್ಟಿಕರಣ ನೀಡಿದೆ.

ಅಲ್ಲದೇ ಗುಜರಾತ ಉಚ್ಚ ನ್ಯಾಯಾಲಯವು ಸಹಿತ ಮೇಲ್ಕಂಡ ಅಂಶಕ್ಕೆ ಪುಷ್ಟಿಕರಿಸಿ ತೀರ್ಪು ನೀಡಿದೆ. ಆದರೂ ವಿವಿಧ ಅರಣ್ಯ ಹಕ್ಕು ಸಮಿತಿಗಳು ಮೂರು ತಲೆಮಾರಿನ ಅಂದರೆ ೧೯೩೦ರ ಅವಧಿಯಲ್ಲಿ ಅರಣ್ಯವಾಸಿಯು ಸಾಗುವಳಿಯ ಕ್ಷೇತ್ರದ ವೈಯಕ್ತಿಕ ದಾಖಲೆ ಒದಗಿಸಲು ಅರಣ್ಯವಾಸಿಗಳಿಗೆ ತಿಳಿವಳಿಕೆ ಪತ್ರ ನೀಡಿ ಪುನರ್ ಪರಿಶೀಲನಾ ವಿಚಾರಣೆಯ ದಿನಾಂಕ ನಿಗದಿಗೊಳಿಸುತ್ತಿರುವುದು ಖಂಡನೀಯವಾಗಿದೆ ಎಂದರು.ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಪುನರ್ ಪರಿಶೀಲನಾ ಕಾರ್ಯ ಜರುಗಿಸುವುದು ಸಮಂಜಸವಲ್ಲ. ಇಂತಹ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ರಾಜೇಶ ಮಿತ್ರ, ಕುಮಟಾ ಅಧ್ಯಕ್ಷ ಮಂಜುನಾಥ ಮರಾಠಿ, ಭೀಮಶಿ ವಾಲ್ಮೀಕಿ, ಶಂಕರ ಕೊಡಿಯಾ, ಗುರುದಾಸ ಇದ್ದರು.

ಅರಣ್ಯವಾಸಿಗಳಿಂದ ಮನವಿ

ಇದೇ ವೇಳೆ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಅವರಿಗೆ ಪುನರ್ ಪರಿಶೀಲನೆ ಪ್ರಕ್ರಿಯೆ ನಡೆಸಬಾರದು ಎಂದು ಅರಣ್ಯವಾಸಿಗಳಿಂದ ಆಕ್ಷೇಪಣಾ ಪತ್ರವನ್ನು ಸಲ್ಲಿಸಲಾಯಿತು.