ರಾಜಾಸೀಟು ಫಲಪುಷ್ಪ ಪ್ರದರ್ಶನ : ಓಂಕಾರೇಶ್ವರ ದೇವಾಲಯ ಕಲಾಕೃತಿ ಮುಖ್ಯ ಆಕರ್ಷಣೆ

| Published : Jan 07 2025, 12:32 AM IST

ಸಾರಾಂಶ

ರಾಜಾಸೀಟು ಉದ್ಯಾನವನದಲ್ಲಿ ಇದೇ ತಿಂಗಳ ಕೊನೆಯಲ್ಲಿ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಒಂಕಾರೇಶ್ವರ ದೇವಾಲಯ ಕಲಾಕೃತಿ ಮುಖ್ಯ ಆಕರ್ಷಣೆಯಾಗಿ ಕಂಡುಬರಲಿದೆ.

ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ರಾಜಾಸೀಟು ಉದ್ಯಾನವನದಲ್ಲಿ ಇದೇ ತಿಂಗಳ ಕೊನೆಯಲ್ಲಿ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತಿದ್ದು, ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದ ಕಲಾಕೃತಿ ಮುಖ್ಯ ಆಕರ್ಷಣೆಯಾಗಿ ಕಂಡುಬರಲಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ. ಈ ಪ್ರದರ್ಶನದಲ್ಲಿ ಹೂವಿನ ಕಲಾಕೃತಿಗಳನ್ನು ನಿರ್ಮಿಸಲು ನೋಂದಾಯಿತ ಸಂಸ್ಥೆಗಳಿಂದ ಟೆಂಡರ್ ಗೆ ಆಹ್ವಾನಿಸಲಾಗಿದೆ.

ಇದೇ ತಿಂಗಳ ಕೊನೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆಯುವುದು ಬಹುತೇಕ ಖಚಿತವಾಗಿದ್ದು, ದಿನಾಂಕ ನಿಗದಿ ಬಗ್ಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅಂತಿಮ ಮಾಡಲಿದ್ದಾರೆ.

ಪ್ರತಿ ವರ್ಷ ಕೂಡ ಫಲಪುಷ್ಪ ಪ್ರದರ್ಶನದಲ್ಲಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ದೇವಾಲಯಗಳ ಬಗ್ಗೆ ಕಲಾಕೃತಿಯನ್ನು ರಚಿಸಲಾಗುತ್ತಿದೆ. ಈ ಬಾರಿ ಶ್ರೀ ಓಂಕಾರೇಶ್ವರ ದೇವಾಲಯದ ಕಲಾಕೃತಿ ರಾಜಾಸೀಟು ಉದ್ಯಾನವನದಲ್ಲಿ ಮೂಡಿ ಬರಲಿದೆ. ಕ್ರಿ.ಶ. 1820 ರಲ್ಲಿ ಅಂದು ಕೊಡಗನ್ನು ಆಳುತ್ತಿದ್ದ ಎರಡನೇ ಲಿಂಗರಾಜೇಂದ್ರ ಅರಸ ಈ ದೇವಾಲಯವನ್ನು ನಿರ್ಮಿಸಿದ್ದಾನೆ. ಈ ದೇವಾಲಯವು ಇಂಡೋ ಸಾರ್ಸನಿಕ್ ಶೈಲಿಯಲ್ಲಿ ನಿರ್ಮಾಣವಾಗಿದ್ದು, ನೋಡಲು ಬಹು ಸುಂದರವಾಗಿದೆ. ವೃತ್ತಾಕಾರವಾದ ಶಿಖರ, ನಾಲ್ಕು ಮೂಲೆಗಳಲ್ಲಿ ನಾಲ್ಕು ಮಿನಾರ್‌ಗಳಿವೆ.

ಕೊಡಗಿನ ಜೇನು ಪ್ರದರ್ಶನದಲ್ಲಿ ಮತ್ತೊಂದು ಆಕರ್ಷಣೆಯಾಗಿ ಕಂಡುಬರಲಿದೆ. ಜಿಲ್ಲೆಯ ಜೇನಿನ ಮಹತ್ವ ಸಾರುವುದರೊಂದಿಗೆ ಜೇನು ಕೃಷಿಯ ಬಗ್ಗೆ ಮಾಹಿತಿ, ಜೇನು ಉತ್ಪನ್ನಗಳ ಮಾರಾಟ ಕೂಡ ಇರಲಿದೆ. ಇದರೊಂದಿಗೆ ಮಕ್ಕಳಿಗೆ ಮನರಂಜನೆ ನೀಡುವಂತಹ ಚೋಟಾ ಭೀಮ್, ಬಾರ್ಬಿ ಡಾಲ್, ಸ್ಪೆಡರ್ ಮ್ಯಾನ್, ಬ್ಯಾಟ್ ಮ್ಯಾನ್, ಅಣಬೆ ಕಲಾಕೃತಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿದೆ. ಫೋಟೊ ಪ್ರೇಮ್, ಸೆಲ್ಪಿ ಜೋನ್ ಮಾದರಿಗಳೂ ಚಿಣ್ಣರನ್ನು, ಯುವಕ, ಯುವತಿಯರನ್ನು ಸೆಳೆಯಲಿವೆ.

ಕಳೆದ ವರ್ಷ ನಡೆದಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಮಳೆ ದೇವರಾದ ಪಾಡಿ ಇಗ್ಗುತಪ್ಪ ದೇವಾಲಯದ ಕಲಾಕೃತಿಯನ್ನು ನಿರ್ಮಿಸಲಾಗಿತ್ತು. 15 ಅಡಿ ಎತ್ತರದಲ್ಲಿ 48 ಅಡಿ ಉದ್ದ, 28 ಅಡಿ ಅಗಲದಲ್ಲಿ ಗುಲಾಬಿ, ಸೇವಂತಿಗೆ, ಆಸ್ಟರ್ ಹೂವುಗಳ ವಿವಿಧ ಬಣ್ಣದ ಸುಮಾರು ಲಕ್ಷಾಂತರ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗಿತ್ತು.

ಈ ಬಾರಿ ಸುಮಾರು 15ಕ್ಕೂ ಅಧಿಕ ವಿವಿಧ ರೀತಿಯ ಹೂವಿನ ಕಲಾಕೃತಿಗಳನ್ನು ಲಕ್ಷಾಂತರ ಸಂಖ್ಯೆಯ ಸೇವಂತಿಗೆ, ಆರ್ಕಿಡ್, ಡೆಸ್ತಿ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುತ್ತದೆ. ವಿವಿಧ ಕ್ಷೇತ್ರಗಳ ಗಣ್ಯರುಗಳ ಕಲಾಕೃತಿಗಳನ್ನು ಹಣ್ಣು, ತರಕಾರಿಗಳಿಂದ ಕೆತ್ತನೆ ಮಾಡಿ ಪ್ರದರ್ಶಿಸಲು ನಿರ್ಧರಿಸಲಾಗಿದೆ. ವಿವಿಧ ಅಲಂಕಾರಿಕ ಗಿಡಗಳು, ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನ ಹೂವಿನ ಜೋಡಣೆಯ ಪ್ರದರ್ಶನಗಳನ್ನು ಇಡಲಾಗುತ್ತಿದೆ.

ಇಲ್ಲಿ ಸುಮಾರು 15 ಸಾವಿರ ಸಂಖ್ಯೆಯ 20 ಜಾತಿಯ ಹೂವುಗಳಾದ ಸಾಲ್ತಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಅಸ್ಪರ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ ಸೇರಿದಂತೆ ವಿವಿಧ ಬಗೆಯ ಹೂವುಗಳನ್ನು ರಾಜಾಸೀಟು ಉದ್ಯಾನವನದ ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಬೆಳೆಯಲಾಗುತ್ತಿದೆ.

ವಿವಿಧ ಮಳಿಗೆಗಳು: ಫಲಪುಷ್ಪ ಪ್ರದರ್ಶನ ಅಂಗವಾಗಿ ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಸೇರಿದಂತೆ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ರಾಜಾಸೀಟು ಸಮೀಪದಲ್ಲಿನ ಗಾಂಧಿ ಮೈದಾನದಲ್ಲಿ ಸುಮಾರು 50ಕ್ಕೂ ಅಧಿಕ ವಿವಿಧ ಮಳಿಗೆಗಳು ತೆರೆಯಲಾಗುತ್ತಿದೆ. ಸರ್ಕಾರಿ ಇಲಾಖೆಗಳು, ಸ್ವ ಸಹಾಯ ಸಂಘಗಳು, ಆಹಾರ ಉತ್ಪನ್ನಗಳು, ತಿಂಡಿ ತಿನಿಸು, ಬಟ್ಟೆಗಳು, ಹೂವಿನ ಗಿಡಗಳು, ತೋಟಗಾರಿಕೆ ಗಿಡಗಳು ಸೇರಿದಂತೆ ವಿವಿಧ ಮಳಿಗೆಗಳು ಇರಲಿದೆ.

ರಾಜಾಸೀಟಿನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ಸಿದ್ಧತೆ ಮಾಡಲಾಗುತ್ತಿದೆ. ಈ ಬಾರಿ ಓಂಕಾರೇಶ್ವರ ದೇವಾಲಯದ ಕಲಾಕೃತಿ ಮುಖ್ಯವಾಗಿರಲಿದೆ. ಫಲಪುಷ್ಪ ಪ್ರದರ್ಶನದ ದಿನಾಂಕ ಬಗ್ಗೆ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನಿಗದಿ ಮಾಡಲಾಗುವುದು.

-ಎಚ್.ಆರ್. ಯೋಗೇಶ್ವರ್, ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ ಮಡಿಕೇರಿ